ADVERTISEMENT

ರೈತರಿಗೆ ಆಸರೆಯಾದ ದ್ವಿದಳ ಧಾನ್ಯ ಬೆಳೆ

ವರುಣಾ, ಬಿಳೆಗೆರೆ, ಚಿಕ್ಕಯ್ಯನ ಛತ್ರ ಹೋಬಳಿಯಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 17:29 IST
Last Updated 5 ಜುಲೈ 2018, 17:29 IST
ವರುಣಾ ಭಾಗದಲ್ಲಿ  ಬೆಳೆದಿರುವ ದ್ವಿದಳ ಧಾನ್ಯ
ವರುಣಾ ಭಾಗದಲ್ಲಿ  ಬೆಳೆದಿರುವ ದ್ವಿದಳ ಧಾನ್ಯ   

ವರುಣಾ: ವರುಣಾ, ಬಿಳಿಗೆರೆ, ಚಿಕ್ಕಯ್ಯನ ಛತ್ರ ಹೋಬಳಿಯಲ್ಲಿ ಪೂರ್ವ ಮುಂಗಾರು ಉತ್ತಮವಾಗಿ ಬಂದಿದ್ದು, ಅಲ್ಲದೇ, ಹಳದಿ ರೋಗಬಾಧೆಯೂ ಕಡಿಮೆಯಾಗಿರುವುದರಿಂದ ಈ ಬಾರಿ ದ್ವಿದಳ ಧಾನ್ಯಗಳು ಈ ಭಾಗದ ರೈತರ ಕೈಹಿಡಿದಿವೆ.

ಅಲ್ಲದೇ, ಕಪಿಲಾ ನದಿ ಪ್ರವಾಹದಿಂದಾಗಿ ನಗರ್ಲೆ, ಬಿಳಿಗೆರೆ, ಸರಗೂರು ಭಾಗದ ಭತ್ತ ಗದ್ದೆಗೆ ನೀರು ನುಗ್ಗಿ ಅಪಾರ ಹಾನಿಯಾಗಿತ್ತು. ಅವರಿಗೂ ಈಗ ದ್ವಿದಳ ಧಾನ್ಯಗಳು ಆಸರೆಯಾಗಿವೆ. ಕಳೆದ ವರ್ಷ ಏಪ್ರಿಲ್‌ನಿಂದ ಜೂನ್ ವರಗೆ 290 ಮಿ.ಮಿ ಮಳೆಯಾದರೆ ಈ ಅವಧಿಯಲ್ಲಿ 437 ಮಿ.ಮಿ ಮಳೆಯಾಗಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡು ರೈತರಲ್ಲಿ ಹರ್ಷ ಮೂಡಿಸಿದೆ. ಅಲ್ಲದೇ, ಫಸಲು ಸಹ ಉತ್ತಮವಾಗಿ ಬಂದಿದೆ ಎನ್ನುತ್ತಾರೆ ಇಲ್ಲಿನ ರೈತರು.

ಬಿಳಿಗೆರೆ ಹೋಬಳಿಯಲ್ಲಿ ಉದ್ದು 2150, ಅಲಸಂದೆ 635, ಹಾಗೂ ಹೆಸರು 780 ಹೇಕ್ಟರ್ ಬಿತ್ತನೆಯಾಗಿದೆ ಎಂದು ಬಿಳಿಗೆರೆ ರೈತ ಸಂಪರ್ಕ ಕೇಂದದ್ರ ಕೃಷಿ ಅಧಿಕಾರಿ ವಿರೂಪಾಕ್ಷ ಮಾಹಿತಿ ನೀಡಿದರು.

ADVERTISEMENT

ಚಿಕ್ಕಯ್ಯನ ಛತ್ರ ಹೋಬಳಿಯಲ್ಲಿ ಒಟ್ಟು 1087 ಹೇಕ್ಟರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳು ಬಿತ್ತನೆ ನಡೆದಿದೆ. ಹದಿನಾರು ಹಾಗೂ ಹೊಸಕೋಟೆ ಭಾಗದಲ್ಲಿ ತಡವಾಗಿ ಬಿತ್ತನೆಯಾಗಿರುವುದರಿಂದ ಮಳೆ ಅಗತ್ಯವಿದೆ ಎನ್ನುತ್ತಾರೆ ಚಿಕ್ಕಯ್ಯನಛತ್ರ ಕೃಷಿ ಅಧಿಕಾರಿ ಮುತ್ತಸ್ವಾಮಿ.

ವರುಣಾ ಹೋಬಳಿಯಲ್ಲಿ ಅಲಸಂದೆ ಹಾಗೂ ಹೆಸರು 10 ಕ್ವಿಂಟಲ್,ಉದ್ದು 22 ಕ್ವಿಂಟಲ್, ಮುಸುಕಿನ ಜೋಳ ಹಾಗೂ ತೊಗರಿ ತಲಾ 1.20 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದೆ. ಅಲಸಂದೆ 1850, ಹೆಸರು 525 ಉದ್ದು 650 ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ವರುಣಾ ಕೃಷಿ ಅಧಿಕಾರಿ ವಿನಯ ಕುಮಾರ ತಿಳಿಸಿದ್ದಾರೆ.

ಈ ಬಾರಿ ಉತ್ತಮ ಮಳೆಯಾಗಿದೆ. ಅಲ್ಲದೇ, ಹಳದಿ ರೋಗ ಬಾಧೆಯೂ ಕಾಡದಿರುವುದರಿಂದ ಉತ್ತಮ ಫಸಲು ಬಂದಿದೆ. ಅದಕ್ಕೆ ತಕ್ಕಂತೆ ಬೆಲೆಯೂ ದೊರೆತರೆ ಅನುಕೂಲವಾಗಲಿದೆ ಎಂದು ವರುಣಾದ ರೈತ ಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.