ADVERTISEMENT

ರಸಗೊಬ್ಬರದ ಬೆಲೆ ಇಳಿಕೆಗೆ ಒತ್ತಾಯಿಸಿ ಪ್ರತಿಭಟನೆ

ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಕಾರ್ಯಕರ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 11:43 IST
Last Updated 20 ಏಪ್ರಿಲ್ 2021, 11:43 IST
ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮೈಸೂರಿನ ಮಿನಿ ವಿಧಾನಸೌಧದ ಮುಂದೆ ಕಾರ್ಯಕರ್ತರು ಮಂಗಳವಾರ ರಸಗೊಬ್ಬರದ ಬೆಲೆ ಇಳಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು
ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮೈಸೂರಿನ ಮಿನಿ ವಿಧಾನಸೌಧದ ಮುಂದೆ ಕಾರ್ಯಕರ್ತರು ಮಂಗಳವಾರ ರಸಗೊಬ್ಬರದ ಬೆಲೆ ಇಳಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು   

ಮೈಸೂರು: ರಸಗೊಬ್ಬರದ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಮಿನಿ ವಿಧಾನಸೌಧದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕೋವಿಡ್‌ ಸೇರಿದಂತೆ ಇತರೆ ಕಾರಣಗಳಿಂದ ರಾಜ್ಯದ ರೈತಾಪಿ ವರ್ಗವು ತೀವ್ರ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸುವುದನ್ನು ಬಿಟ್ಟು, ಅವರಿಗೆ ಅಗತ್ಯವಾಗಿ ಬೇಕಾದ ರಸಗೊಬ್ಬರದ ಬೆಲೆಯನ್ನು ಏರಿಕೆ ಮಾಡಿರುವುದು ಎಷ್ಟು ಸರಿ ಎಂದು ಕಾರ್ಯಕರ್ತರು ಪ್ರಶ್ನಿಸಿದರು.

ದಿನದಿಂದ ದಿನಕ್ಕೆ ರೈತರ ಬದುಕು ತೀರಾ ಕಷ್ಟಮಯ ಸ್ಥಿತಿಗೆ ಇಳಿಯುತ್ತಿದೆ. ರೈತರಿಗೆ ಮಾರಕವಾಗುವಂತಹ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಇವುಗಳನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಎಷ್ಟೇ ಪ್ರತಿಭಟನೆ ನಡೆಸಿದರೂ, ಸರ್ಕಾರ ಜಗ್ಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

ವರ್ಷದಿಂದ ವರ್ಷಕ್ಕೆ ಕೃಷಿಯಲ್ಲಿ ಉತ್ಪಾದನಾ ವೆಚ್ಚ ಹೆಚ್ಚುತ್ತಲೇ ಇದೆ. ರೈತರ ಆದಾಯ ನಿರಂತರವಾಗಿ ಕುಸಿಯುತ್ತಿದೆ. ಈ ಮಧ್ಯೆ ರಸಗೊಬ್ಬರದ ಬೆಲೆ ಏರಿಕೆಯು ಗದಾಪ್ರಹಾರವನ್ನೇ ನಡೆಸಿದೆ ಎಂದು ಅವರು ದೂರಿದರು.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಮರಂಕಯ್ಯ, ಕಾರ್ಯದರ್ಶಿ ನಾಗನಹಳ್ಳಿ ವಿಜಯೇಂದ್ರ, ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಸಂಚಾಲಕ ಕಲ್ಲಹಳ್ಳಿ ಕುಮಾರ್, ಮುಖಂಡರಾದ ಮಂಡಕಳ್ಳಿ ಮಹೇಶ್, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.