ADVERTISEMENT

ಲಿಂಗಾಯತ ಒಳಪಂಗಡ ಒಗ್ಗೂಡಿಸಿ: ಬಸವರಾಜ ಹೊರಟ್ಟಿ ಹೇಳಿಕೆ

ಫ.ಗು. ಹಳ್ಳಿಕಟ್ಟಿ ಜಯಂತಿ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 16:10 IST
Last Updated 14 ಜುಲೈ 2024, 16:10 IST
ಮೈಸೂರಿನ ನಟರಾಜ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಫ.ಗು.ಹಳಕಟ್ಟಿ ಜನೋತ್ಸವ ಹಾಗೂ ವಚನ ಸಂಪುಟಗಳ ಶತಮಾನೋತ್ಸವ ಕಾರ್ಯಕ್ರಮವನ್ನು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ
ಮೈಸೂರಿನ ನಟರಾಜ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಫ.ಗು.ಹಳಕಟ್ಟಿ ಜನೋತ್ಸವ ಹಾಗೂ ವಚನ ಸಂಪುಟಗಳ ಶತಮಾನೋತ್ಸವ ಕಾರ್ಯಕ್ರಮವನ್ನು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಲಿಂಗಾಯತರಲ್ಲಿರುವ ಒಳಪಂಗಡಗಳು ಒಂದಾಗಬೇಕು’ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಇಲ್ಲಿನ ನಟರಾಜ ಸಭಾಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ‘ಫ.ಗು.ಹಳಕಟ್ಟಿ ಜನ್ಮೋತ್ಸವ ಮತ್ತು ವಚನ ಸಾಹಿತ್ಯ ಸಂರಕ್ಷಣೆ– ಶತಮಾನೋತ್ಸವ ಆಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಗ್ಗೂಡುವ ಮೂಲಕ ಅಣ್ಣ ಹುಟ್ಟುಹಾಕಿದ ಸಮಾನತೆಯನ್ನು ರಾಷ್ಟ್ರವ್ಯಾಪಿಗೊಳಿಸಬೇಕು. ಹಿಂದೆ ಒಳಪಂಗಡಗಳ ಬಗ್ಗೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ’ ಎಂದು ಹೇಳಿದರು.

ADVERTISEMENT

‘ಒಳಪಂಗಡಗಳಿಗೆ ಒಂದೊಂದು ಪ್ರವರ್ಗಗಳಲ್ಲಿ ಮೀಸಲಾತಿ ಕೇಳುವುದರಿಂದ ನಮ್ಮಲ್ಲಿನ ಒಗ್ಗಟ್ಟು ಒಡೆದು ಹೋಗುತ್ತದೆ. ಆದ್ದರಿಂದ ಅದನ್ನು ಬಿಟ್ಟು ನಮ್ಮಲ್ಲಿನ ಮಕ್ಕಳನ್ನು ಎಲ್ಲರೂ ಗುರುತಿಸಿ ಪ್ರೋತ್ಸಾಹಿಸಿ ಅವರನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರುವಂತೆ ಮಾಡಬೇಕು. ಮಹಿಳೆಯರನ್ನು ಸಬಲೀಕರಣ ಮಾಡಬೇಕು’ ಎಂದು ಸಲಹೆ ನೀಡಿದರು.

ಉತ್ತಮ ಸಮಾಜಕ್ಕಾಗಿ: ‘ಮಹನೀಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಬಸವಣ್ಣ, ಅಲ್ಲಮ ಪ್ರಭು ಅವರು ಜಗತ್ತಿಗೆ ಮೊದಲ ಪ್ರಜಾಪ್ರಭುತ್ವ ಪರಿಚಯಿಸಿದರು. ಅವರ ಮಾರ್ಗದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ, ಶಿಕ್ಷಣ, ಸಮಾನತೆಯನ್ನು ಸಮಾಜದಲ್ಲಿ ಜಾರಿಗೆ ತರಲು ಶ್ರಮಿಸಿದ ಹಳಕಟ್ಟಿ ಮಹಾನ್ ವ್ಯಕ್ತಿ’ ಎಂದರು.

ಉಪನ್ಯಾಸ ನೀಡಿದ ವಿಜಯಪುರದ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಎಂ.ಎಸ್.ಮದಭಾವಿ, ‘ವಚನ ಸಾಹಿತ್ಯ ಸಂರಕ್ಷಿಸಿ ಲಿಂಗಾಯತ ಧರ್ಮಕ್ಕೆ ಕಾಯಕಲ್ಪ ನೀಡಿದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ’ ಎಂದು ಸ್ಮರಿಸಿದರು.

‘ಯಾರದೋ ಮನೆಯ ಕಪಾಟು, ಅಟ್ಟದ ಮೇಲೆ ಮೂಟೆಗಳ ಒಳದಿದ್ದ ವಚನಗಳ ಕಟ್ಟುಗಳನ್ನು ಹಳಕಟ್ಟಿಯವರು ಹುಡುಕಿ ಹೊರತೆಗೆದರು. ದೇವರ ಫೋಟೊಗಳ ಜತೆ ಕಟ್ಟುಗಳಿಗೂ ಕುಂಕುಮ ಬಳಿದು ಅವುಗಳಿಗೂ ಪೂಜೆ ಮಾಡುತ್ತಿದ್ದವರ ಬಳಿ ಮನವಿ ಮಾಡಿ ತಾಳೆಗರಿಗಳನ್ನು ಸಂಗ್ರಹಿಸಿದರು. ಬಸವಣ್ಣ, ಚನ್ನಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಅಕ್ಕನಾಗಮ್ಮನಂತಹ ಪ್ರಮುಖ 50 ಮಂದಿ ವಚನಕಾರರು ಮಾತ್ರ ಜನರಿಗೆ ಗೊತ್ತಿದ್ದರು. ಹಳಕಟ್ಟಿಯವರು 250 ವಚನಕಾರರನ್ನು ಗುರುತಿಸಿದರು. 34 ವಚನಕಾರ್ತಿಯರು ಬೆಳಕಿಗೆ ಬಂದರು’ ಎಂದು ನೆನೆದರು.

ಹೊಸಮಠದ ಚಿದಾನಂದ ಸ್ವಾಮೀಜಿ, ನೀಲಕಂಠಮಠದ ಸಿದ್ದಮಲ್ಲ ಸ್ವಾಮೀಜಿ, ಕುದೇರು ಮಠದ ಗುರುಶಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ, ತರಳಬಾಳು ಸಮಾಗಮದ ಅಧ್ಯಕ್ಷ ಎಸ್.ಬಿ.ವಸಂತಕುಮಾರ್, ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷ ಬಿ.ಎಸ್.ಗುರುಪಾದಸ್ವಾಮಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ವೀರಶೈವ ಸಜ್ಜನ ಸಂಘದ ಅಧ್ಯಕ್ಷ ಎಚ್.ಟಿ.ಮಲ್ಲಿಕಾರ್ಜುನ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹದೇವಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ರೇಚಣ್ಣ, ಕಾರ್ಯದರ್ಶಿ ಬಿ.ಎಂ.ಮರಪ್ಪ, ಕಲಾವಿದ ಎಲ್.ಶಿವಲಿಂಗಪ್ಪ ಪಾಲ್ಗೊಂಡಿದ್ದರು.

ವೈಭವಯುತವಾಗಿ ಜೀವನ ಸಾಗಿಸಲು ಇದ್ದ ಅವಕಾಶಗಳನ್ನೆಲ್ಲ ಬಿಟ್ಟು ವಚನಗಳ ಹಿಂದೆಯೇ ಓಡಾಡಿದ ಫ.ಗು. ಹಳಕಟ್ಟಿಯವರು 20ನೇ ಶತಮಾನದ ಬಸವಣ್ಣ. ಎಂ.ಎಸ್.ಮದಭಾವಿ ಕಾರ್ಯದರ್ಶಿ ವಿಜಯಪುರದ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ

‘ಸಾಂಸ್ಕೃತಿಕ ಸ್ಮಾರಕವಾಗಿ ಹಳಕಟ್ಟಿ ಮನೆ’

‘ವಚನ ಪಿತಾಮಹ ಫ.ಗು. ಹಳಕಟ್ಟಿ ಅವರು ಧಾರವಾಡದಲ್ಲಿ ಬಾಲ್ಯ ಕಳೆದ ಮನೆಯನ್ನು ಸಾಂಸ್ಕೃತಿಕ ಸ್ಮಾರಕವನ್ನಾಗಿ ರೂಪಿಸಲು ಚಿಂತನೆ ನಡೆದಿದೆ’ ಎಂದು ಬಸವರಾಜ ಹೊರಟ್ಟಿ ತಿಳಿಸಿದರು. ‘ಅವರ ಮನೆಯ ಸಮೀಪವಿರುವ ವೃತ್ತಕ್ಕೆ ಅವರ ಹೆಸರು ಇಡಬೇಕು ಹಾಗೂ ಕಂಚಿನ ಮೂರ್ತಿ ಸ್ಥಾಪಿಸಬೇಕೆನ್ನುವ ಚಿಂತನೆಯನ್ನು ಮಾಡಿದ್ದೇವೆ. ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಗೆ ಈ ವಿಚಾರವಾಗಿ ಮನವಿ ಸಲ್ಲಿಸುತ್ತೇವೆ. ಅವರು ಅಂಗೀಕರಿಸಿದರೆ ಸಹಕಾರ ನೀಡುತ್ತೇವೆ. ತಿರಸ್ಕರಿಸಿದರೆ ನಾವೇ ಸ್ಮಾರಕ ನಿರ್ಮಿಸಲು ಪ್ರಯತ್ನಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.