ADVERTISEMENT

ಚಾಮುಂಡಿಬೆಟ್ಟದಲ್ಲಿ ಆಷಾಢ ಮೊದಲ ಶುಕ್ರವಾರ: ಭಕ್ತರ ಅನುಪಸ್ಥಿತಿಯಲ್ಲೇ ಸರಳ ಪೂಜೆ

ದೇವಿಯ ಉತ್ಸವ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 13:36 IST
Last Updated 26 ಜೂನ್ 2020, 13:36 IST
ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪ್ರಧಾನ ಅರ್ಚಕ ಶಶಿಶೇಖರ್‌ ದೀಕ್ಷಿತ್‌ ಪೂಜೆ ಸಲ್ಲಿಸಿದರು
ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪ್ರಧಾನ ಅರ್ಚಕ ಶಶಿಶೇಖರ್‌ ದೀಕ್ಷಿತ್‌ ಪೂಜೆ ಸಲ್ಲಿಸಿದರು   

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರ ಪ್ರಯುಕ್ತ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಭಕ್ತರ ಅನುಪಸ್ಥಿತಿಯಲ್ಲೇ ಸರಳವಾಗಿ ಪೂಜೆ ನೆರವೇರಿಸಲಾಯಿತು.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿ ಆಷಾಢ ಮಾಸದ ಶುಕ್ರವಾರದಂದು ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಹೀಗಾಗಿ, ಧಾರ್ಮಿಕ ಕಾರ್ಯಗಳನ್ನು ಅರ್ಚಕರು, ಸಿಬ್ಬಂದಿ ಸಮ್ಮುಖದಲ್ಲಿ ನೆರವೇರಿಸಲಾಯಿತು. ಬೆಳಿಗ್ಗೆ ನಾಲ್ಕೂವರೆ ಗಂಟೆಗೆ ಪೂಜಾ ಕಾರ್ಯ ಶುರುವಾಯಿತು. ದೇವರಿಗೆ ಅಲಂಕಾರ ಮಾಡಲಾಯಿತು. ರುದ್ರಾಭಿಷೇಕ, ಪಂಚಾಮೃತಾಭಿಷೇಕ ನೆರವೇರಿಸಲಾಯಿತು. 6.30ಕ್ಕೆ ಮಹಾಮಂಗಳಾರತಿ ನಡೆಸಿ, ಒಳಗಡೆಯೇ ದೇವಿಯ ಉತ್ಸವ ನಡೆಸಲಾಯಿತು. 8 ಗಂಟೆಗೆ ಬಾಗಿಲು ಮುಚ್ಚಲಾಯಿತು.

ADVERTISEMENT

‘ನಾಲ್ಕೂ ಆಷಾಢ ಶುಕ್ರವಾರಗಳಂದು ಇದೇ ರೀತಿ ಪೂಜಾ ಕೈಂಕರ್ಯಗಳು ನಡೆಯಲಿವೆ. ದೇಗುಲದ ಹೊರಗಡೆ ಯಾವುದೇ ವಿಶೇಷ ಅಲಂಕಾರ ಇರುವುದಿಲ್ಲ. ಪ್ರಸಾದ ವ್ಯವಸ್ಥೆಯೂ ಇರುವುದಿಲ್ಲ’ ಎಂದು ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್‌ ದೀಕ್ಷಿತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಜೆ 6ರಿಂದ 7.30ರವರೆಗೆ ಎಂದಿನಂತೆ ಅಭಿಷೇಕ ಪೂಜಾ ಕೈಂಕರ್ಯಗಳು ನಡೆದವು.

ಜುಲೈ 3, 10 ಮತ್ತು 17ರಂದು (ಆಷಾಢ ಶುಕ್ರವಾರ), ಜುಲೈ 13 (ಅಮ್ಮನನವರ ಜನ್ಮೋತ್ಸವ) ಹಾಗೂ 14 ರಂದು (ಆಷಾಢ ಮಂಗಳವಾರ) ಕೂಡ ನಿರ್ಬಂಧ ವಿಧಿಸಲಾಗಿದೆ. ಪ್ರಸಾದ ವಿತರಣೆಗೂ ನಿರ್ಬಂಧ ಹೇರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.