ADVERTISEMENT

‘ಫಿಟ್‌ ಮೈಸೂರು’ ನಡಿಗೆ ಜ.11ರಂದು

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 15:56 IST
Last Updated 9 ಜನವರಿ 2026, 15:56 IST
   

ಮೈಸೂರು: ‘ಮೈಸೂರನ್ನು ಆರೋಗ್ಯ ನಗರಿಯನ್ನಾಗಿ ರೂಪಿಸುವ ಆಶಯದೊಂದಿಗೆ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಜ.11ರಂದು ‘ಫಿಟ್‌ ಮೈಸೂರು– ಸಾಮೂಹಿಕ ಆರೋಗ್ಯ ಹಾಗೂ ಜಾಗೃತಿ ನಡಿಗೆ’ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.

‘ಮಹಾನಗರ ಪಾಲಿಕೆ, ಮೈಸೂರು ಜಿಮ್ ಅಸೋಸಿಯೇಷನ್, ಜಿಎಸ್ಎಸ್ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮಾನಸಗಂಗೋತ್ರಿ ಬಯಲು ರಂಗಮಂದಿರದಿಂದ ನಡಿಗೆ ಆರಂಭಗೊಳ್ಳಲಿದೆ. ಅಂದು ಬೆಳಿಗ್ಗೆ 5.30ರಿಂದ 6ರವರೆಗೆ ನೋಂದಣಿ, 6ರಿಂದ 6.15ರವರೆಗೆ ವ್ಯಾಯಾಮ, 6.15ರಿಂದ 6.30ರವರೆಗೆ ನಾಡಗೀತೆ, ವಂದೇ ಮಾತರಂ ಹಾಡಲಾಗುವುದು. 6.30ಕ್ಕೆ ವಾಕಥಾನ್‌ಗೆ ಚಾಲನೆ ದೊರೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಡಾ.ಉಷಾ ಹೆಗಡೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 5 ಕಿ.ಮೀ. ಸಂಚರಿಸಲಿರುವ ವಾಕಥಾನ್, ಸೆನೆಟ್ ಭವನದ ಆವರಣದಲ್ಲಿ ಅಂತ್ಯವಾಗಲಿದೆ’ ಎಂದು ಹೇಳಿದರು.

ADVERTISEMENT

‘ಪ್ರತಿ 1 ಕಿ.ಮೀ.ಗೆ ಒಂದು ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ಸಹಾಯ ಕೇಂದ್ರ ಹಾಗೂ ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ. 10ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, 8ಸಾವಿರ ಜನ ಈಗಾಗಲೇ ಆನ್‌ಲೈನ್‌ನಲ್ಲಿ ನೋಂದಾಯಿಸಿದ್ದಾರೆ. ಪಾಲ್ಗೊಳ್ಳುವವರಿಗೆ ಕ್ಯಾಪ್‌, ಉಪಹಾರ ನೀಡಲಾಗುವುದು. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಕೂಡ ಹೆಜ್ಜೆ ಹಾಕುವರು. ವಿವಿಧ ಕಾಲೇಜುಗಳು ಹಾಗೂ ಶಿಕ್ಷಣ ಸಂಸ್ಥೆಗಳು ಬೆಂಬಲ ನೀಡಿವೆ’ ಎಂದರು.

ಕುಲಸಚಿವೆ ಎಂ.ಕೆ. ಸವಿತಾ, ಜಿಎಸ್‌ಎಸ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್, ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್‌ ಆಸೀಫ್‌ ಮಾತನಾಡಿದರು. ಚಿರಾಗ್‌ ಆಡ್ಸ್‌ನ ವಿವೇಕ್‌, ಜಿಎಸ್‌ಎಸ್‌ ಸಂಸ್ಥೆಯ ಸರಳಾ ಇದ್ದರು.

ಕುಕ್ಕರಹಳ್ಳಿ ಕರೆಗೆ ಪ್ರವೇಶವಿಲ್ಲ:

ಕುಕ್ಕರಹಳ್ಳಿ ಕೆರೆಗೆ ಪ್ರತಿ ಭಾನುವಾರ ಸಾವಿರಾರು ಜನ ವಾಯುವಿಹಾರಕ್ಕೆಂದು ಬರುತ್ತಾರೆ. ಅವರು ನಮ್ಮೊಂದಿಗೆ ನಡಿಗೆಯಲ್ಲಿ ಭಾಗವಹಿಸಲೆಂದು, ಕೆರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಪಾಲ್ಗೊಳ್ಳುವವರು ಕ್ಯೂ-ಆರ್‌ ಕೂಡ್‌ ಸ್ಕ್ಯಾನ್‌ ಮಾಡಿ ಇ-ಸರ್ಟಿಫಿಕೇಟ್‌ ಪಡೆಯಬಹುದು ಎಂದು ಕುಲಸಚಿವೆ ಎಂ.ಕೆ. ಸವಿತಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.