ನಂಜನಗೂಡು: ಕಬಿನಿ ಜಲಾಶಯದಿಂದ ಕಪಿಲಾ ನದಿಗೆ ಹರಿಸುವ ನೀರಿನ ಪ್ರಮಾಣ ಕಡಿಮೆ ಮಾಡಿರುವುದರಿಂದ ತಾಲ್ಲೂಕಿನ ಕಪಿಲಾ ನದಿ ಪಾತ್ರದಲ್ಲಿನ ಗ್ರಾಮಗಳು ಸಹಜ ಸ್ಥಿತಿಯತ್ತ ಮರಳಿವೆ. ಗುರುವಾರ ಬೆಳಿಗ್ಗೆ ನಂಜನಗೂಡು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದ್ದು, ವಾಹನ ಸಂಚಾರ ಆರಂಭವಾಗಿದೆ.
ತಾಲ್ಲೂಕಿನ ಮಲ್ಲನಮೂಲೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ನೀರು ಇಳಿದುಹೋಗಿದ್ದು, ಸಹಜ ಸ್ಥಿತಿಗೆ ಮರಳಿದೆ.
ನಗರದ ತೋಪಿನ ಬೀದಿ, ಕುರುಬಗೇರಿ, ಸರಸ್ವತಿ ಕಾಲೋನಿಯಲ್ಲಿ ನಿಂತಿದ್ದ ಪ್ರವಾಹ ನೀರು ಕಡಿಮೆಯಾಗಿರುವುದರಿಂದ ಜನಜೀವನ ಸಹಜವಾಗಿದೆ. ಶ್ರೀಕಂಠೇಶ್ವರ ದೇವಸ್ಥಾನ ಬಳಿಯ ಸ್ನಾನಘಟ್ಟ, ಮುಡಿಕಟ್ಟೆಯಲ್ಲಿ ನಿಂತಿದ್ದ ನೀರು ಇಳಿದಿದೆ. ವಾಹನ ನಿಲುಗಡೆ ಪ್ರದೇಶ, ಡಾರ್ಮೆಟರಿ, ದಾಸೋಹ ಭವನಗಳಲ್ಲೂ ನೀರು ಇಳಿಕೆಯಾಗಿದ್ದು, ಸ್ವಚ್ಛತೆ ಕಾರ್ಯ ನಡೆದಿದೆ. ಸ್ನಾನಘಟ್ಟಕ್ಕೆ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಿದ್ದು ಗುರುವಾರ ಸಹ ಭಕ್ತರು ಪುಣ್ಯಸ್ನಾನ ಮಾಡಲು ಸಾಧ್ಯವಾಗದೇ ದಾಸೋಹ ಭವನದ ಬಳಿಯಿರುವ ಕೊಳಾಯಿ ನೀರಿನಲ್ಲೇ ಸ್ನಾನ ಮಾಡಿ ದೇವರ ದರ್ಶನ ಪಡೆದರು.
ತಾಲ್ಲೂಕಿನ ಮಲ್ಲನಮೂಲೆಯ ಬಸವೇಶ್ವರ ದೇವಾಯ, ಸಂಗಮದ ಮಹದೇವತಾತಾದೇವಾಲಯ, ಮಲ್ಲನಮೂಲೆಮಠ, ಕಾಶಿವಿಶ್ವನಾಥ ದೇವಾಲಯ(ಲಿಂಗಾಭಟ್ಟರಗುಡಿ) ಅಯ್ಯಪ್ಪಸ್ವಾಮಿ ದೇವಾಲಯ, ಸತ್ಯನಾರಾಯಣಸ್ವಾಮಿ ದೇವಾಲಯ, ಪರಶುರಾಮ ದೇವಾಲಯಗಳು, ರಾಘವೇಂದ್ರ ಮಠದ ಪಂಚ ಬೃಂದಾವನಗಳಲ್ಲಿ ಪ್ರವಾಹದ ನೀರು ಇಳಿಕೆಯಾಗಿದ್ದು, ದೇವಾಲಯಗಳಲ್ಲಿ ಪೂಜಾ ವಿಧಿ ವಿಧಾನಗಳನ್ನು ಆರಂಭಿಸಲಾಗಿದೆ.
ನಗರ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ದೇಬೂರು ಬಳಿಯ ನೀರೆತ್ತುವ ಕೇಂದ್ರಕ್ಕೆ ತುಂಬಿದ್ದ ನೀರು ಕಡಿಮೆಯಾಗಿಲ್ಲ, ನಗರದಲ್ಲಿ ಗುರುವಾರ ಕುಡಿಯುವ ನೀರು ಪೂರೈಕೆ ಆರಂಭಗೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.