ನಂಜನಗೂಡು: ಕಬಿನಿ ಜಲಾಶಯ ಭರ್ತಿಯಾಗಿ, ನದಿಗೆ 80 ಸಾವಿರ ಕ್ಯುಸೆಕ್ ನೀರು ಬಿಟ್ಟಿರುವದರಿಂದ ತಾಲ್ಲೂಕಿನ ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನಂಜನಗೂಡು-ಮೈಸೂರು ಹೆದ್ದಾರಿಯಲ್ಲಿ ನದಿಯ ನೀರು ನಿಂತಿರುವುದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ತಾಲ್ಲೂಕಿನ ಮಲ್ಲನಮೂಲೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ 4 ಅಡಿಗೂ ಹೆಚ್ಚಿನ ನೀರು ನಿಂತಿದ್ದು, ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ವಾಹನ ಸವಾರರು ಬದಲಿ ಮಾರ್ಗದ ಮೂಲಕ ಸಂಚಾರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಸೂರಿನಿಂದ ನಂಜನಗೂಡಿಗೆ ಬರುವ ವಾಹನಗಳು ಅಡಕನಹಳ್ಳಿ ಕೈಗಾರಿಕಾ ಪ್ರದೇಶದಿಂದ ಕೆಂಪಿಸಿದ್ದನಹುಂಡಿ ಮಾರ್ಗವಾಗಿ ಹೆಜ್ಜಿಗೆ ಸೇತುವೆ ಮೂಲಕ, ನಂಜನಗೂಡಿನಿಂದ ಮೈಸೂರಿಗೆ ತೆರಳುವ ವಾಹನಗಳು ಹೆಜ್ಜಿಗೆ ಸೇತುವೆ-ತಾಂಡವಪುರ ಮಾರ್ಗವಾಗಿ ಸಾಗಬೇಕಾಗಿದೆ.
ತಾಲ್ಲೂಕಿನ ಸುತ್ತೂರು ಸೇತುವೆ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ನಿರ್ಭಂದ ಹೇರಲಾಗಿದೆ. ನಗರದ ಹಳ್ಳದಕೇರಿ ಬಡಾವಣೆಯ 4 ಮನೆಗಳು ಮುಳುಗಡೆಯಾಗಿದ್ದು. ತೋಪಿನ ಬೀದಿ, ಕುರುಬಗೇರಿ, ಸರಸ್ವತಿ ಕಾಲೋನಿಯ ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ.
ಶ್ರೀಕಂಠೇಶ್ವರನ ಆವರಣಕ್ಕೂ ನೀರು: ಕಪಿಲೆ ಹುಕ್ಕಿ ಹರಿದು ಸ್ನಾನಘಟ್ಟ, ಮುಡಿಕಟ್ಟೆ ಮುಳುಗಡೆಯಾಗಿದೆ. ಗುಂಡ್ಲು ನದಿಯ ಹರಿವಿನ ಪ್ರಮಾಣದಲ್ಲೂ ಏರಿಕೆ ಕಂಡಿದೆ. ಇದರಿಂದ ಶ್ರೀಕಂಠೇಶ್ವರ ದೇವಾಲಯದ ವಾಹನ ನಿಲುಗಡೆ ಪ್ರದೇಶ, ಡಾರ್ಮೆಟರಿ, ದಾಸೋಹ ಭವನದ ಸುತ್ತಲೂ ನೀರು ತುಂಬಿಕೊಂಡಿದೆ. ಭಕ್ತಿ ಮಾರ್ಗದಲ್ಲಿರುವ ಶಿವನ ವಿಗ್ರಹದ ಸುತ್ತಲೂ ನೀರು ತುಂಬಿಕೊಂಡು ದ್ವೀಪದಂತಾಗಿದೆ. ಸ್ನಾನಘಟ್ಟಕ್ಕೆ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಿದ್ದು ಭಕ್ತರು ಪುಣ್ಯಸ್ನಾನ ಮಾಡಲು ಸಾಧ್ಯವಾಗದೆ. ದಾಸೋಹ ಭವನದ ಬಳಿಯಿರುವ ಕೊಳಾಯಿ ನೀರಿನಲ್ಲೇ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಹೆಜ್ಜಿಗೆ ಸೇತುವೆ ಬಳಿ ಚಾಮರಾಜನಗರ ಬೈಪಾಸ್ ರಸ್ತೆಯವರೆಗೂ ನೀರು ಚಾಚಿಕೊಂಡಿದೆ. ನದಿಯ ಕಡೆಗೆ ತೆರಳದಂತೆ ದ್ವನಿವರ್ಧಕದ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ.
ತಾಲ್ಲೂಕಿನ ಮಲ್ಲನಮೂಲೆಯ ಬಸವೇಶ್ವರ ದೇವಾಲಯ, ಸಂಗಮದ ಮಹದೇವತಾತಾದೇವಾಲಯ, ಮಲ್ಲನಮೂಲೆಮಠ, ಕಾಶಿವಿಶ್ವನಾಥ ದೇವಾಲಯ(ಲಿಂಗಾಭಟ್ಟರಗುಡಿ) ಅಯ್ಯಪ್ಪಸ್ವಾಮಿ ದೇವಾಲಯ, ಸತ್ಯನಾರಾಯಣಸ್ವಾಮಿ ದೇವಾಲಯ, ಪರಶುರಾಮ ದೇವಾಲಯ, ರಾಘವೇಂದ್ರ ಮಠದ ಪಂಚ ಬೃಂದಾವನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿವೆ. ಸ್ನಾನಘಟ್ಟದ ಹದಿನಾರು ಕಾಲು ಮಂಟಪ ಸಂಪೂರ್ಣವಾಗಿ ಮುಳುಗಿದ್ದು, ಮೇಲಿನ ಮಂಟಪ ಮಾತ್ರ ಕಾಣುತ್ತಿದೆ.
ನಗರದ ಮೇದರ ಕೇರಿಯ ಶಾಲೆಗೆ ನೀರು ತುಂಬಿಕೊಂಡಿದ್ದು, ಶಾಲೆ ಮುಳುಗಡೆಯಾಗಿದ್ದು, ರಜೆ ಘೋಷಿಸಲಾಗಿದೆ. ನಗರ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ದೇಬೂರು ಬಳಿಯ ನೀರೆತ್ತುವ ಕೇಂದ್ರಕ್ಕೆ ನೀರು ತುಂಬಿಕೊಂಡಿದ್ದು, ನಗರದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ತಾಲ್ಲೂಕಿನ ಹುಲ್ಲಹಳ್ಳಿ, ಗೋಳೂರು ಗ್ರಾಮದ ನೀರೆತ್ತುವ ಕೇಂದ್ರಗಳೂ ಸಹ ಮುಳುಗಡೆಯಾಗಿವೆ. ಮಲ್ಲನಮೂಲೆಯ ಬಳಿಯ ಬಳಿಯಿರುವ ಕೈಗಾರಿಕೆಗಳಿಗೆ ನೀರು ಪೂರೈಕೆ ಮಾಡುವ ನೀರೆತ್ತುವ ಕೇಂದ್ರವೂ ಮುಳುಗಡೆಯಾಗಿರುವುದರಿಂದ ಕೈಗಾರಿಕೆಗಳಿಗೆ ನೀರಿನ ಸಮಸ್ಯೆ ಉದ್ಭವಿಸುವ ಭೀತಿ ಎದುರಾಗಿದೆ.
ತಾಲೂಕಿನಾಧ್ಯಂತ ಕಪಿಲಾ ನದಿ ಹುಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ನದಿ ಪಾತ್ರದ ಜನರ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಸ್ಮಶಾನಗಳು ಮುಳುಗಡೆ : ನಗರದ ಲಿಂಗಾಭಟ್ಟರಗುಡಿ ಸಮೀಪದ ಸ್ಮಶಾನ,ತೋಪಿನ ಬೀದಿಯ ವೀರಶೈವ ಸ್ಮಶಾನ,ಹದಿನಾರು ಕಾಲು ಮಂಟಪದ ಬಳಿಯ ಸಾರ್ವಜನಿಕ ಸ್ಮಶಾನ, ಪರಶುರಾಮ ಗುಡಿ ಬಳಿಯ ಸ್ಮಶಾನಗಳು ಮುಳುಗಡೆಯಾಗಿದ್ದು, ಅಂತ್ಯಸಂಸ್ಕಾರಕ್ಕೆ ಅಡ್ಡಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.