ADVERTISEMENT

ಮೈಸೂರು | ಅಪಾಯದ ಮಟ್ಟ ಮೀರಿದ ಕಪಿಲೆ

ಜಲಾಶಯಗಳಿಂದ ಒಟ್ಟು 78 ಸಾವಿರ ಕ್ಯುಸೆಕ್ ನೀರು ನದಿಗೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 4:35 IST
Last Updated 8 ಆಗಸ್ಟ್ 2020, 4:35 IST
ಜಲಾವೃತಗೊಂಡ ಮಾದಾಪುರ– ಬೆಳ್ತೂರು ಸೇತುವೆಯನ್ನು ಸಾರ್ವಜನಿಕರು ಶುಕ್ರವಾರ ವೀಕ್ಷಿಸಿದರು
ಜಲಾವೃತಗೊಂಡ ಮಾದಾಪುರ– ಬೆಳ್ತೂರು ಸೇತುವೆಯನ್ನು ಸಾರ್ವಜನಿಕರು ಶುಕ್ರವಾರ ವೀಕ್ಷಿಸಿದರು   

ಮೈಸೂರು: ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಕಪಿಲಾ, ತಾರಕ, ನುಗು, ಹೆಬ್ಬಳ್ಳ ಹಾಗೂ ಲಕ್ಷ್ಮಣತೀರ್ಥ ನದಿಗಳು ಭೋರ್ಗರೆಯುತ್ತಿವೆ. ಮೈಸೂರು– ಸುತ್ತೂರು ಸೇತುವೆ ಸೇರಿದಂತೆ ಕೆಲವು ಸೇತುವೆಗಳು ಜಲಾವೃತಗೊಂಡಿದ್ದು, ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಹುಣಸೂರು ತಾಲ್ಲೂಕಿನಲ್ಲಿ 50 ಸಂತ್ರಸ್ತ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಕಬಿನಿ ಮತ್ತು ನುಗು ಜಲಾಶಯದಿಂದ 78 ಸಾವಿರ ಕ್ಯುಸೆಕ್‌ನಷ್ಟು ನೀರು ಕಪಿಲೆಯ ಒಡಲು ಸೇರುತ್ತಿದ್ದು, ಪ್ರವಾಹ ಭೀತಿ ಉಲ್ಬಣಿಸಿದೆ.

ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅವರು ನಂಜನಗೂಡಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ನದಿಯ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ನದಿಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ.

ADVERTISEMENT

ಸುತ್ತೂರು ಸೇತುವೆ ಮುಳುಗಡೆ

ವರುಣಾ: ಮೈಸೂರು– ಸುತ್ತೂರು ನಡುವೆ ಸಂಪರ್ಕ ಬೆಸೆಯುವ ಪ್ರಮುಖ ಸೇತುವೆ ಮುಳುಗಡೆಯಾಗಿದೆ. ಸುತ್ತೂರಿನಿಂದ ಮೈಸೂರಿಗೆ ಪ್ರಯಾಣಿಸುವವರಿಗೆ ತಾಯೂರು ಮಾರ್ಗದಿಂದ ಕುಪ್ಪೇಗಾಲ ಸೇತುವೆ ಮೂಲಕ ಸಾಗುವಂತೆ ಪೊಲೀಸರು ಸೂಚಿಸಿದ್ದಾರೆ.

ಮುಳುಗಡೆಯಾದ ಸೇತುವೆಯನ್ನು ನೋಡಲು ಬರುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಮುಳ್ಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲು ಸಿದ್ಧತೆ ನಡೆದಿದೆ.

ಚಿಕ್ಕಯ್ಯನಛತ್ರ ಹೋಬಳಿಯ ಉಪತಹಶೀಲ್ದಾರ್ ಬಾಲಸುಬ್ರಮಣ್ಯ ಬೊಕ್ಕಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಪ್ಪೇಗಾಲ, ಯಡಕೊಳ, ಹೊಸಕೋಟೆ, ತಾಯೂರು, ಬಿಳುಗಲಿ ಮತ್ತಿತರ ನದಿ ತೀರದ ಗ್ರಾಮಗಳ ಗದ್ದೆಗಳು ಮುಳುಗಡೆಯಾಗಿದ್ದವು.

ಹಳ್ಳದಕೇರಿ, ತೋಪಿನಬೀದಿಗಳಿಗೆ ನುಗ್ಗಿದ ನೀರು

ನಂಜನಗೂಡು: ಪಟ್ಟಣದ ತೋಪಿನಬೀದಿ ಹಾಗೂ ಹಳ್ಳದಕೇರಿಗಳಿಗೆ ನೀರು ನುಗ್ಗಿದ್ದು, ಎಂಟು ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ.

ಈ ವೇಳೆ ಕೆಲವು ಸಂತ್ರಸ್ತರು ತಮ್ಮನ್ನು ಸ್ಥಳಾಂತರ ಮಾಡಲು ಯಾವುದೇ ಕ್ರಮ ವಹಿಸಿಲ್ಲ ಎಂದು ಜಿಲ್ಲಾಧಿಕಾರಿಗೆ ದೂರಿದರು.

ಸಂಕಷ್ಟದಲ್ಲಿರುವವರನ್ನು ಕೂಡಲೇ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿಯು ಅಧಿಕಾರಿಗಳಿಗೆ ಸೂಚಿಸಿದರು.

ಶ್ರೀಕಂಠೇಶ್ವರ ದೇಗುಲದ ಮುಡಿಕಟ್ಟೆಯ ಅರ್ಧಭಾಗ, ಹೆಜ್ಜಿಗೆ ಸೇತುವೆ ಹಾಗೂ ಸೋಪಾನಕಟ್ಟೆ ಮುಳುಗಿದೆ. ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮೀಪಕ್ಕೆ ನೀರು ಬಂದಿದೆ. ಮಲ್ಲನಮೂಲೆ ಮಠದ ಸಮೀಪದವರೆಗೂ ನೀರು ಬಂದಿದ್ದು, ರಾತ್ರಿ ವೇಳೆಗೆ ಮಠದೊಳಗೆ ನೀರು ನುಗ್ಗುವ ಸಾಧ್ಯತೆ ಇದೆ. ಹೀಗಾಗಿ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಠದಲ್ಲಿರುವವರಿಗೆ ಸೂಚನೆ ನೀಡಲಾಗಿದೆ.

ಮುಳುಗಿದ ಮಾದಾಪುರ– ಬೆಳ್ತೂರು ಸೇತುವೆ

ಹಂಪಾಪುರ: ಹೋಬಳಿಯ ಮಾದಾಪುರ– ಬೆಳ್ತೂರು ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆ ಆಗಿರುವುದರಿಂದ ಚಕ್ಕೂರು, ಕೆ.ಬೆಳ್ತೂರು, ಅಲ್ಲಯ್ಯನಪುರ, ಹುಣಸಳ್ಳಿ, ಮನುಗನಹಳ್ಳಿ ಸೇರಿದಂತೆ 40ಕ್ಕೂ ಹೆಚ್ಚು ಹಳ್ಳಿಗಳಿಗೆ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಸೇತುವೆ ಬಳಿ ಇರುವ ಶುದ್ಧ ಕುಡಿಯುವ ನೀರೆತ್ತುವ ಕಾರ್ಯಾಗಾರಕ್ಕೆ ನೀರು ನುಗ್ಗಿದೆ. ಹೊಮ್ಮರಗಳ್ಳಿ– ಹರದನಹಳ್ಳಿ ಸೇತುವೆಯೂ ಮುಳುಗುವ ಹಂತ ತಲುಪಿದೆ.

ತಿ.ನರಸೀಪುರದಲ್ಲೂ ಕಟ್ಟೆಚ್ಚರ

ತಿ.ನರಸೀಪುರ: ತಾಲ್ಲೂಕಿನಲ್ಲೂ ಪ್ರವಾಹ ಉಂಟಾಗುವ ಸಂಭವವಿದ್ದು, ತಾಲ್ಲೂಕು ಆಡಳಿತ ಕಟ್ಟೆಚ್ಚರ ವಹಿಸಿದೆ. ಕಾವೇರಿ ಮತ್ತು ಕಪಿಲಾ ನದಿಗಳ ದಂಡೆಯಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಕಬಿನಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಈಗಾಗಲೇ ಪ್ರಕಟಣೆ ಹೊರಡಿಸಿದ್ದಾರೆ.

ಡಿ.ಬಿ.ಕುಪ್ಪೆಯಲ್ಲಿ ಭೀತಿ

ಎಚ್.ಡಿ.ಕೋಟೆ: ಕೇರಳದ ವಯನಾಡು ಹಾಗೂ ಮಾನಂದವಾಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ ಕೆಲ ಅಂಗಡಿಗಳಿಗೆ ನೀರು ನುಗ್ಗಿದೆ. ಇದೇ ರೀತಿ ಮಳೆ ಮುಂದುವರಿದರೆ, ಡಿ.ಬಿ.ಕುಪ್ಪೆ ಭಾಗದಲ್ಲಿ ಹಲವು ಮನೆಗಳು ಜಲಾವೃತಗೊಳ್ಳುವ ಭೀತಿ ಆವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.