ADVERTISEMENT

ದಸರಾ ಸಾಂಸ್ಕೃತಿಕ ಕಾರ್ಯಕ್ರಮ: ಮನಸೂರೆಗೊಂಡ ಕೊಳಲುವಾದನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 2:13 IST
Last Updated 19 ಅಕ್ಟೋಬರ್ 2020, 2:13 IST
ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾನುವಾರ ವಿದ್ವಾನ್‌ ಶಶಾಂಕ್‌ ಸುಬ್ರಹ್ಮಣ್ಯಂ ಮತ್ತು ತಂಡದವರು ಕೊಳಲುವಾದನ ನಡೆಸಿಕೊಟ್ಟರು
ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾನುವಾರ ವಿದ್ವಾನ್‌ ಶಶಾಂಕ್‌ ಸುಬ್ರಹ್ಮಣ್ಯಂ ಮತ್ತು ತಂಡದವರು ಕೊಳಲುವಾದನ ನಡೆಸಿಕೊಟ್ಟರು   

ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಅರಮನೆ ಆವರಣ ದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇ ದಿನವಾದ ಭಾನುವಾರ ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ ಮತ್ತು ತಂಡದವರ ಸುಶ್ರಾವ್ಯವಾದ ಕೊಳಲುವಾದನವು ಸಭಿಕರ ಮನಸೂರೆಗೊಂಡಿತು.

ಮೊದಲಿಗೆ ಆದಿತಾಳದ ರಾಗ ಹಂಸನಾದ ಮ‌ೂಲಕ ಕಾರ್ಯಕ್ರಮ ಪ್ರಾರಂಭಿಸಿದರು. ನಂತರ ರಾಗಗೌಡ ಮಲ್ಹಾರ್ ರಾಗದಲ್ಲಿ ಸಾರಸಮುಖಿ ಎಂಬ ಅಪರೂಪದ ಕೃತಿಯನ್ನು ಕೇಳು ಗರ ಮನಗೆಲ್ಲುವಂತೆ ಪ್ರಸ್ತುತಪಡಿಸಿದರು.

ನಂತರ ಪೂರ್ವಿ ಕಲ್ಯಾಣಿ ರಾಗದಲ್ಲಿ ಮುತ್ತುಸ್ವಾಮಿ ದೀಕ್ಷಿತರ ಮೀನಾಕ್ಷಿ ಮೇಮುದಂದೇಹಿ ಎಂಬ ವಿಶೇಷವಾದ ಕೃತಿಯನ್ನು ಸುಮಧುರವಾಗಿ ನುಡಿಸಿದರು‌. ಇದಲ್ಲದೆ ಕೆಲವು ಪ್ರಸಿದ್ಧ ದೇವರ ನಾಮಗಳನ್ನು ಪ್ರಸ್ತುತಪಡಿಸಿದರು.

ADVERTISEMENT

ಪಿಟೀಲಿನಲ್ಲಿ ವಿದ್ವಾನ್ ಎಚ್.ಎನ್.ಭಾಸ್ಕರ್, ಮೃದಂಗದಲ್ಲಿ ವಿದ್ವಾನ್ ಫಾರುಪಲ್ಲಿ ಫಲ್ಗುಣ್, ತಬಲದಲ್ಲಿ ರಾಜೇಂದ್ರ ನಾಕೋಡ್ ಅವರು ಸಾಥ್ ನೀಡಿದರು.

ಕಾರ್ಯಕ್ರಮವನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಎಚ್.ವಿ‌.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ್‌ಸ್ವಾಮಿ, ಮುಡಾ ಆಯುಕ್ತ ಡಿ.ಬಿ.ನಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಚನ್ನಪ್ಪ ಸೇರಿದಂತೆ ಹಲವರು ಆಲಿಸಿದರು.

ಅ.19 ರಂದು ಸಂಜೆ 7 ರಿಂದ 8ರ ವರೆಗೆ ಬೆಂಗಳೂರಿನ ವಿದ್ವಾನ್ ರಾಹುಲ್‌ ವೆಲ್ಲಾಲ್‌ ಮತ್ತು ತಂಡದವರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ರಿಂದ 9ರ ವರೆಗೆ ಬೆಂಗಳೂರಿನ ವಿದುಷಿ ಗೀತಾ ರಮಾನಂದ್‌ ಮತ್ತು ತಂಡದಿಂದ ಪಂಚವೀಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.