ಹುಣಸೂರು: ತಾಲ್ಲೂಕಿನ ಚಿಲ್ಕುಂದ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಲು ಎದುರಾಗಿದ್ದ ಸಮಸ್ಯೆಗೆ ಸಂಧಾನ ಸೂತ್ರದ ಮೂಲಕ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
₹ 24 ಕೋಟಿ ಅನುದಾನದಲ್ಲಿ 2019ರಲ್ಲಿ 16 ಕೆರೆಗಳಿಗೆ ಲಕ್ಷ್ಮಣತೀರ್ಥ ನದಿಯಿಂದ ನೀರು ತುಂಬಿಸುವ ಚಿಲ್ಕುಂದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಯೋಜನೆ ಮಾರ್ಗ ಮಧ್ಯೆ ಹಾದು ಹೋಗುವ ಪೈಪ್‌ಲೈನ್ ಅಳವಡಿಸಲು ನಿಲುವಾಗಿಲು ಗ್ರಾಮದ ರೈತ ತನ್ನ ಹೊಲದಲ್ಲಿ ಪೈಪ್ ಹೂಳದಂತೆ ತಡೆ ಹಿಡಿದ ಪರಿಣಾಮ ಕಾಮಗಾರಿ ಶೇ 99 ರಷ್ಟು ಪೂರ್ಣವಾಗಿದ್ದರೂ ಯೋಜನೆ ಬಳಕೆಗೆ ಬಾರದಾಗಿತ್ತು ಎಂದರು.
ಈ ಸಂಬಂಧ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆಸಿದ ಸಂಧಾನ ಸಭೆಯಲ್ಲಿ ರೈತನೊಂದಿಗೆ ಮಾತನಾಡಿ, ಪೈಪ್‌ಲೈನ್ ಹಾದು ಹೋಗುವುದರಿಂದ ಕೃಷಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಮನವರಿಕೆ ಮಾಡಿಕೊಡಲಾಗಿದೆ. ಇದಲ್ಲದೆ ರೈತನ ಬೇಡಿಕೆಯಂತೆ ಆತನ ಹೊಲಕ್ಕೆ ಕೊಳವೆ ಬಾವಿ ಕೊರೆದು ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆಗೆ ಸಂಬಂಧಿಸಿದ ಸೆಸ್ಕ್ ಇಲಾಖೆಗೂ ಮಾರ್ಗಸೂಚನೆ ನೀಡಲಾಗಿದೆ. ಸಂಧಾನ ಸೂತ್ರದಿಂದ ರೈತ ಯೋಜನೆ ಕಾಮಗಾರಿ ಆರಂಭಿಸಲು ಸಮ್ಮತಿಸಿದ್ದು ಮುಂದಿನ ಒಂದೆರಡು ದಿನದಲ್ಲಿ ಕಾಮಗಾರಿ ಆರಂಭವಾಗಿ ಅತಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ ಎಂದರು.
ಸೆಸ್ಕ್: ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಮೈಸೂರು ವಿಭಾಗದ ಸೆಸ್ಕ್ ಅಧಿಕಾರಿ ಸುನಿಲ್ ಕುಮಾರ್ ಅವರೊಂದಿಗೆ ಮಾತನಾಡಿ, ಆಗಸ್ಟ್ ಅಂತ್ಯದೊಳಗೆ ಮೋಟಾರ್ ಪಂಪ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಸಂತಸ: ಚಿಲ್ಕುಂದ ಏತ ನೀರಾವರಿ ಯೋಜನೆ ಆರಂಭವಾಗುವುದರಿಂದ 16 ಕೆರೆಗಳಿಗೆ ನೀರು ತುಂಬಲಿದೆ. ಚಿಲ್ಕುಂದ ಗ್ರಾಮದ 5 ಕೆರೆ ಸೇರಿದಂತೆ ಈ ಭಾಗದ ದೇವರಾಜ ಅರಸು ಕಲ್ಲಹಳ್ಳಿ ಗ್ರಾಮದ ಕೆರೆ, ಹೊಸಕೆರೆ, ಮುತ್ತರಾಯನ ಹೊಸಹಳ್ಳಿ ಕೊಪ್ಪಲು ಕೆರೆ, ಹಬ್ಬನಕುಪ್ಪೆ ಕೆರೆ ತುಂಬಲಿದೆ. ಇದರೊಂದಿಗೆ ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದು ಹೊಸಕೊಪ್ಪಲು ಗ್ರಾಮದ ಸಣ್ಣತಮ್ಮೇಗೌಡ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.