ಮೈಸೂರು: ಇಲ್ಲಿ ನಡೆದ ನಾಡಹಬ್ಬ ಮೈಸೂರು ದಸರೆಯ ಸೊಬಗನ್ನು ಕಣ್ತುಂಬಿಕೊಂಡ ವಿವಿಧ ದೇಶಗಳ ಕಾನ್ಸುಲೇಟ್ ಜನರಲ್ ಪ್ರತಿನಿಧಿಗಳು (ಧೂತವಾಸ ಕಚೇರಿಗಳ ವಿದೇಶಿ ಗಣ್ಯರು) ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಆಹ್ವಾನದ ಮೇರೆಗೆ, ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಚಂದ್ರಮೌಳೀಶ್ವರನ್ ಕೃಷ್ಣನ್ ಅಯ್ಯರ್, ಸ್ವಿಟ್ಜರ್‌ಲ್ಯಾಂಡ್ ಕಾನ್ಸುಲೇಟ್ ಜನರಲ್ ಡಾ.ಆ್ಯಂಜಿಲಾ ಹೊನೆಗ್ಗರ್, ಇಟಲಿ ಕಾನ್ಸುಲೇಟ್ ಜನರಲ್ ಜಿಯಾನ್‌ಡೊಮೆನಿಕೋ ಮಿಲಾನೋ, ಮಲೇಷಿಯಾ ಕಾನ್ಸುಲೇಟ್ ಜನರಲ್ ಶರವಣ ಕುಮಾರ್ ಕುಮಾರವಾಸಗಂ ಹಾಗೂ ನೆದರ್‌ಲ್ಯಾಂಡ್ ಕಾನ್ಸುಲೇಟ್ ಜನರಲ್ ಇ.ಜೆ. ಡಿ ವಿಟ್ ಅವರು ಮೈಸೂರು ದಸರೆಗೆ ಆಗಮಿಸಿದ್ದರು.
ಎಡಿಸಿಗೆ ಜವಾಬ್ದಾರಿ:
ಅವರಿಗೆ ಆತಿಥ್ಯ ಕಲ್ಪಿಸುವ ಹೊಣೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರಿಗೆ ವಹಿಸಲಾಗಿತ್ತು. ಅವರು, ಈ ವಿದೇಶಿ ಗಣ್ಯರಿಗೆ ಅಂಬಾವಿಲಾಸ ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ ಮೊದಲಾದ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಿ ಅವುಗಳನ್ನು ಪರಿಚಯಿಸಿಕೊಟ್ಟಿದ್ದರು. ಅಲ್ಲದೇ ಈ ಗಣ್ಯರು ಅ.2ರಂದು ನಡೆದ ವಿಜಯದಶಮಿ ಮೆರವಣಿಗೆ (ಜಂಬೂಸವಾರಿ)ಯನ್ನು ಅಂಬಾವಿಲಾಸ ಅರಮನೆ ಆವರಣದಲ್ಲಿ ಕುಳಿತು ವೀಕ್ಷಿಸಿದ್ದರು. ನಾಡಿನ ಸಂಸ್ಕೃತಿ, ಅಂಬಾರಿ, ಆನೆಗಳು, ಕಲಾತಂಡಗಳ ಸೊಬಗನ್ನು ಕಂಡು ಹರ್ಷ ವ್ಯಕ್ತಪಡಿಸಿದ್ದರು.
ಬಳಿಕ ಅವರು, ತಮ್ಮ ಇನ್‌ಸ್ಟಾಗ್ರಾಂ ಮೊದಲಾದ ಸಾಮಾಜಿಕ ಮಾಧ್ಯಮದ ಅಧಿಕೃತ ಖಾತೆಗಳಲ್ಲಿ ಫೋಟೊ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಜಂಬೂಸವಾರಿಗೆ ಮಾರು ಹೋಗಿದ್ದಾರೆ. ಇಂತಹ ವೈಶಿಷ್ಟ್ಯಪೂರ್ಣ ಮೆರವಣಿಗೆಯನ್ನು ಕಂಡಿರಲಿಲ್ಲ ಎಂದು ಅನಿಸಿಕೆ ಹಂಚಿಕೊಂಡಿದ್ದಾರೆ. ‘ಡ್ರೋನ್ ಶೋ ಕೂಡ ಚೆನ್ನಾಗಿತ್ತು. ಈ ಉತ್ಸವದಲ್ಲಿ ಪಾಲ್ಗೊಂಡಿದ್ದು ವಿಶಿಷ್ಟ ಹಾಗೂ ಮರೆಯಲಾಗದ ಅನುಭವ’ ಎಂದು ಬರೆದುಕೊಂಡಿದ್ದಾರೆ. ಇದು ಬಹಳಷ್ಟು ಶೇರ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಮೈಸೂರು ದಸರಾ ಮಹೋತ್ಸವ ಗಮನಸೆಳೆದಿದೆ. ಈ ಮೂಲಕ ಸಾಂಸ್ಕೃತಿಕ ನಗರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರು ಬಂದಿದೆ. ಇದು ಸರ್ಕಾರದ ಹಿರಿಯ ಅಧಿಕಾರಿಗಳ ಸಂತಸಕ್ಕೂ ಕಾರಣವಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ:
‘ಮುಖ್ಯ ಕಾರ್ಯದರ್ಶಿಯವರ ಆಹ್ವಾನದ ಮೇರೆಗೆ ವಿವಿಧ ದೇಶಗಳ ಕಾನ್ಸುಲೇಟ್‌ಗಳು ಈ ಬಾರಿಯ ನಾಡಹಬ್ಬಕ್ಕೆ ಆಗಮಿಸಿದ್ದರು. ನಾಡಿನ ಪರಂಪರೆ, ಸಂಸ್ಕೃತಿಯನ್ನು ಸಾರುವ ವಿಶ್ವವಿಖ್ಯಾತ ದಸರೆಯ ಸಂಭ್ರಮದಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಈ ಸಲದ ನಾಡಹಬ್ಬ ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದಿರುವುದು ಸಂತಸ ಹಾಗೂ ಹೆಮ್ಮೆಯ ವಿಷಯವಾಗಿದೆ. ಇದು ಮೈಸೂರಿಗೆ ಹೊಸ ಗರಿಮೆಯನ್ನು ತಂದುಕೊಟ್ಟಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಅಧಿಕಾರಿಯಾಗಿ ನಾನು ನನ್ನ ಕೆಲಸ ಮಾಡಿದ್ದೇನೆ. ಮೈಸೂರಿನ ಹೆಸರು ಬೆಳಗುವಂತೆ ಆಗಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಅದನ್ನು ಗುರುತಿಸಿ ಪ್ರಶಂಸನಾ ಪತ್ರ ನೀಡಿರುವುದು ಮುಖ್ಯ ಕಾರ್ಯದರ್ಶಿಯವರ ಹೃದಯ ವೈಶಾಲ್ಯಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದರು.
ಮುಖ್ಯ ಕಾರ್ಯದರ್ಶಿಯಿಂದ ಪ್ರಶಂಸನಾ ಪತ್ರ
ವಿದೇಶಿ ಗಣ್ಯರ ಮೆಚ್ಚುಗೆಯಿಂದ ಖುಷಿಯಾಗಿರುವ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜು ಅವರಿಗೆ ಪ್ರಶಂಸನಾ ಪತ್ರ ಕಳುಹಿಸಿದ್ದಾರೆ. ಇದು ಜಿಲ್ಲಾಡಳಿತಕ್ಕೆ ಗರಿಮೆ ತಂದುಕೊಟ್ಟಿದೆ. ‘ದಸರೆಯನ್ನು ಯಶಸ್ವಿಯಾಗಿ ಹಾಗೂ ಯಾವುದೇ ಅಡಚಣೆ ಇಲ್ಲದೇ ನಡೆಸುವಲ್ಲಿ ಮೈಸೂರು ಜಿಲ್ಲಾಡಳಿತ ಒಗ್ಗೂಡಿದ ಶಕ್ತಿ ನಿಷ್ಠೆ ಮತ್ತು ವೃತ್ತಿಪರತೆಯನ್ನು ಮತ್ತೊಂದು ಬಾರಿ ಪ್ರಪಂಚದ ಮುಂದೆ ಪ್ರದರ್ಶಿಸಿದೆ. ಕಾರ್ಯಕ್ರಮಗಳ ವೈಭವ ಇಲಾಖೆಗಳ ಸಮನ್ವಯ ಹಾಗೂ ಲಕ್ಷಾಂತರ ಜನರ ಉತ್ಸಾಹಭರಿತ ಭಾಗವಹಿಸುವಿಕೆ ಮೈಸೂರು ಕರ್ನಾಟಕ ಸಾಂಸ್ಕೃತಿಕ ರಾಜಧಾನಿ ಎಂಬ ಹೆಸರಿಗೆ ಸಾಕ್ಷಿಯಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಹಿಸಿದ ಇತರ ಎಲ್ಲ ಕರ್ತವ್ಯಗಳ ಜೊತೆಗೆ ಮೈಸೂರಿಗೆ ಆಗಮಿಸಿದ್ದ ಎಲ್ಲ ವಿದೇಶಿ ಗಣ್ಯರ ಆತಿಥ್ಯವನ್ನು ಯಾವುದೇ ಚ್ಯುತಿ ಬಾರದಂತೆ ನಿರ್ವಹಿಸುವ ಮೂಲಕ ಸಾಂಸ್ಕೃತಿಕ ನಗರಿ ಎಂಬ ಅಭಿಮಾನಕ್ಕೆ ಮೈಸೂರು ಮತ್ತೊಮ್ಮೆ ಪಾತ್ರವಾಗುವಂತೆ ಶ್ರಮ ವಹಿಸಿರುತ್ತೀರಿ. ನಿಮ್ಮ ಕರ್ತವ್ಯ ನಿಷ್ಠೆಗೆ ಅಭಿನಂದನೆಗಳು’ ಎಂದು ಮುಖ್ಯ ಕಾರ್ಯದರ್ಶಿಯವರು ಶಿವರಾಜು ಅವರನ್ನು ಶ್ಲಾಘಿಸಿದ್ದಾರೆ. ಶಿವರಾಜು ಅವರು ನಾಡಹಬ್ಬದ ಥೀಮ್ ಸಾಂಗ್ ‘ಕರುನಾಡ ಕರುಣೆಯ ಕಡಲಿನಲಿ’ ರಚಿಸಿ ಗಮನಸೆಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.