ADVERTISEMENT

ಎಚ್.ಡಿ.ಕೋಟೆ: ಹೊರಗುತ್ತಿಗೆ ಪದ್ಧತಿ ತೊಡೆದು ಹಾಕಿ

ಮನೆಗೆ ಬಂದ ಅರಣ್ಯ ಸಚಿವ ಆನಂದ್‌ ಸಿಂಗ್‌ಗೆ ಶಿವಕುಮಾರ್ ತಂದೆ ಮನವಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 10:55 IST
Last Updated 27 ಏಪ್ರಿಲ್ 2020, 10:55 IST
ಅಕ್ರಮ ಮೀನುಗಾರಿಕೆ ತಡೆಯಲು  ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಅರಣ್ಯ ಇಲಾಖೆಯ ಸಿಬ್ಬಂದಿ ಶಿವಕುಮಾರ್ ಅವರ ಕುಟುಂಬದವರಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಪರಿಹಾರದ ಚೆಕ್‌ನ್ನು ಭಾನುವಾರ ವಿತರಿಸಿದರು
ಅಕ್ರಮ ಮೀನುಗಾರಿಕೆ ತಡೆಯಲು  ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಅರಣ್ಯ ಇಲಾಖೆಯ ಸಿಬ್ಬಂದಿ ಶಿವಕುಮಾರ್ ಅವರ ಕುಟುಂಬದವರಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಪರಿಹಾರದ ಚೆಕ್‌ನ್ನು ಭಾನುವಾರ ವಿತರಿಸಿದರು   

ಎಚ್.ಡಿ.ಕೋಟೆ: ‘ನನ್ನ ಮಗ ಅರಣ್ಯ ಇಲಾಖೆಯಲ್ಲಿ 15 ವರ್ಷಗಳಿಂದಲೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಿದ್ದಾನೆ. ಈಗ ಅರಣ್ಯ ಸಂಪತ್ತನ್ನು ರಕ್ಷಿಸಲು ಜೀವತೆತ್ತಿದ್ದಾನೆ. ಈಗಲಾದರೂ ಹೊರಗುತ್ತಿಗೆ ಪದ್ಧತಿಯನ್ನು ನಿಲ್ಲಿಸಿ’ ಎಂದು ಶುಕ್ರವಾರ ರಾತ್ರಿಯಷ್ಟೇ ನೀರಿನಲ್ಲಿ ಮುಳುಗಿ ಮೃತಪಟ್ಟ ಶಿವಕುಮಾರ ತಂದೆ ಸಚಿವ ಆನಂದ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿದರು.

ಅರಣ್ಯ ಇಲಾಖೆ ಸಿಬ್ಬಂದಿ ಕಬಿನಿ ಹಿನ್ನೀರಿನಲ್ಲಿ ಮೃತಪಟ್ಟ ಸ್ಥಳವನ್ನು ಭಾನುವಾರ ವೀಕ್ಷಿಸಿದ ನಂತರ ಸಚಿವ ಆನಂದ್ ಸಿಂಗ್, ಶಿವಕುಮಾರ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಇನ್ನು ಮುಂದೆ ಹೊರಗುತ್ತಿಗೆ ಎಂಬ ಪದವೇ ಇರಬಾರದು. ಎಲ್ಲರನ್ನೂ ಕಾಯಂಗೊಳಿಸಿ. ಎಲ್ಲ ಕೆಲಸಗಾರರಿಗೂ ಕಾಯಂ ಕೆಲಸಗಾರರಿಗೆ ನೀಡುವ ಸೌಲಭ್ಯ ಕೊಡಿ ಎಂದು ಶಿವಕುಮಾರ ತಂದೆ ಬೇಡಿಕೊಂಡರು.

ADVERTISEMENT

ಇವರ ಮನವಿಯನ್ನು ಆಲಿಸಿದ ಸಚಿವರು ಈ ಕುರಿತು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಭೇಟಿಯಾದ ಆದಿವಾಸಿ ಮುಖಂಡರು ಬೆಟ್ಟಕುರುಬ ಜನಾಂಗವನ್ನು ಜೇನು ಕುರುಬ ಜನಾಂಗಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಎರಡೂ ಜನಾಂಗಗಳ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳು ಒಂದೇ ರೀತಿ ಇವೆ. ಆದರೆ, ಜೇನು ಕುರುಬರಿಗೆ ಸಿಗುವಷ್ಟು ಸವಲತ್ತುಗಳು ಬೆಟ್ಟಕುರುಬರಿಗೆ ಸಿಗುತ್ತಿಲ್ಲ. ಇನ್ನಾದರೂ ಎರಡೂ ಪಂಗಡಗಳನ್ನೂ ಒಟ್ಟಿಗೆ ತನ್ನಿ ಎಂದು ಮೊರೆ ಇಟ್ಟರು.

ಕೆಲವು ಆದಿವಾಸಿ ಮುಖಂಡರು ತಮಗೆ ಶಾಶ್ವತ ಮನೆಗಳು ಬೇಕು ಎಂದು ಆಗ್ರಹಿಸಿದರು.

ಇವರೆಲ್ಲರ ಬೇಡಿಕೆಗಳನ್ನು ಕೇಳಿದ ಸಚಿವ ಆನಂದ್‌ಸಿಂಗ್, ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಚರ್ಚೆ ಮಾಡುವುದಾಗಿ ಭರವಸೆ ನೀಡಿ ತೆರಳಿದರು.

ಶಾಸಕರಾದ ಸಿ.ಅನಿಲ್‌ ಕುಮಾರ್, ಎಚ್.ಪಿ.ಮಂಜುನಾಥ್, ಪಿಸಿಸಿಎಫ್ ಪನ್ನಾಟ ಶ್ರೀಧರ್, ಪಿಸಿಸಿಎಫ್ ವನ್ಯಜೀವಿ ಸಂಜಯ್‌ ಮೋಹನ್, ಡಿಸಿಎಫ್ ಹೀರಾಲಾಲ್, ಎಪಿಸಿಸಿಎಫ್ ಜಗತ್‌ರಾಮ್, ಬಂಡೀಪುರ ಸಿಎಫ್ ಬಾಲಚಂದ್ರ, ನಾಗರಹೊಳೆ, ಸಿಎಫ್ ಮಹೇಶ್‌ ಕುಮಾರ್, ಡಿಸಿಎಫ್ ಪೂವಯ್ಯ, ಎಸಿಎಫ್ ಪರಮೇಶ್, ರವಿಕುಮಾರ್, ಆರ್‌ಎಫ್‌ಒ ವಿನಯ್, ಸುಬ್ರಹ್ಮಣ್ಯ, ಶಶಿಧರ್, ಡಿವೈಎಸ್‌ಪಿ ಸುಂದರ್‌ರಾಜ್, ಸರ್ಕಲ್‌ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ, ಎಸ್‌ಐ ರಾಮಚಂದ್ರನಾಯಕ, ಎಂ.ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.