ಮೈಸೂರು: ನಗರದ ವಿವಿಧೆಡೆ, ಅದರಲ್ಲೂ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳು ರಸ್ತೆಯಲ್ಲಿ ಅಡ್ಡಾಡುತ್ತಿರುವುದು, ವಾಹನಗಳ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.
ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲಿ ಓಡಾಡುವ ಅವುಗಳಿಂದ ಜನರಿಗೆ ಸಂಕಷ್ಟ ತಲೆದೋರಿದೆ. ಇವುಗಳಿಗೆ ಮಾಲೀಕರ‍್ಯಾರು ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ, ವಾಹನಗಳ ಅಪಘಾತದಿಂದ ದನಗಳಿಗೂ ತೊಂದರೆ ಎದುರಾಗುತ್ತಿದೆ. ರಸ್ತೆಬದಿಯಲ್ಲಿ ಆಹಾರ ಪದಾರ್ಥಕ್ಕಾಗಿ ಹುಡುಕಾಡುವ ಅವುಗಳ ಹೊಟ್ಟೆಯನ್ನು ಪ್ಲಾಸ್ಟಿಕ್ ತ್ಯಾಜ್ಯವೂ ಸೇರುತ್ತಿದೆ!
ಮುಖ್ಯರಸ್ತೆ, ವೃತ್ತ ಸೇರಿದಂತೆ ಬಡಾವಣೆಗಳಲ್ಲಿ ಮಲಗುವ, ನಿಲ್ಲುವ ದನಗಳಿಂದ ವಾಹನ ಚಾಲಕರು, ಪಾದಚಾರಿಗಳು ಪ್ರತಿದಿನ ಒಂದಿಲ್ಲೊಂದು ಕಿರಿ ಕಿರಿ ಅನುಭವಿಸುವಂತಾಗಿದೆ. ‘ಸ್ಪೀಡ್ ಬ್ರೇಕರ್’ಗಳಾಗಿ ಪರಿಣಮಿಸಿರುವ ಇವುಗಳನ್ನು ವಾಹನ ಹಾಗೂ ಜನರೇ ಸುತ್ತವರಿದು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಬಿಡಾಡಿ ದನಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
ನಗರದಲ್ಲಿ ಬಿಡಾಡಿ ದನಗಳ ಕಾಟ ಮಿತಿಮೀರಿದೆ. ಮಹಾನಗರಪಾಲಿಕೆ ಅಧಿಕಾರಿಗಳು ಸಂಬಂಧಪಟ್ಟ ಮಾಲೀಕರಿಗೆ ದಂಡ ವಿಧಿಸುವ ಎಚ್ಚರಿಕೆ ಕೊಟ್ಟು ಸೂಚನೆ ನೀಡುತ್ತಾರೆ. ಇದರ ಹೊರತಾಗಿ ಯಾವುದೇ ಪರಿಣಾಮಕಾರಿ ಕ್ರಮ ಮಾಲೀಕರ ವಿರುದ್ಧ ಆಗುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ಹೀಗಾಗಿ ಬಿಡಾಡಿ ದನಗಳ ಕಾಟವನ್ನು ಸ್ಥಳೀಯರು ಅನ್ಯ ಮಾರ್ಗವಿಲ್ಲದೆ, ಅನುಭವಿಸಬೇಕಾಗಿದೆ. ರಸ್ತೆಗಳಲ್ಲಿ ದನಗಳ ಹಾವಳಿ ಹೆಚ್ಚಾದಾಗ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಇಂತಹ ಬಿಡಾಡಿ ದನಗಳ ನಿರ್ವಹಣೆಗೆ ಕ್ರಮ ವಹಿಸಿದರೂ, ದೊಡ್ಡ ಸವಾಲಾಗಿ ಪರಿಣಿಸಿದೆ.
ರಸ್ತೆಯಲ್ಲಿ ಆ ದನಗಳನ್ನು ತಪ್ಪಿಸಿ ವಾಹನ ಚಲಾಯಿಸುವ ಭರದಲ್ಲಿ ಅಪಘಾತ ಸಂಭವಿಸಿ, ಸವಾರರು ಬಿದ್ದು ಪೆಟ್ಟಾದ ನಿದರ್ಶನಗಳು ವರದಿಯಾಗಿವೆ. ರಾತ್ರಿ, ರಾಸುಗಳು ರಸ್ತೆಯಲ್ಲಿ ಮಲಗಿರುವುದು, ನಿಂತಿರುವುದು ಸಮೀಪಕ್ಕೆ ಬರುವವರೆಗೂ ಗೋಚರಿಸದೆ ಸವಾರರು ವಾಹನ ಗುದ್ದಿಸಿ, ರಾಸುಗಳು ಗಾಯಗೊಂಡ ಉದಾಹರಣೆಗಳೂ ಇವೆ.
‘ಬಿಡಾಡಿ ದನಗಳ ಕಳವು ಪ್ರಕರಣಗಳೂ ನಡೆಯುತ್ತಿವೆ. ಮಧ್ಯರಾತ್ರಿ ವಾಹನದಲ್ಲಿ ತುಂಬಿಕೊಂಡು ಕದ್ದೊಯ್ದ ಘಟನೆಗಳು ಸಂಭವಿಸಿವೆ. ಅನೇಕ ಕಡೆ ರಸ್ತೆ ಬದಿಯಲ್ಲಿ ಮೇಯಲು ಬಿಟ್ಟಿದ್ದ ದನಗಳನ್ನು ಕಳವು ಮಾಡಲಾಗಿದೆ’ ಎಂಬ ದೂರುಗಳೂ ಬಂದಿವೆ. ಇನ್ನೂ ಅನೇಕ ಜಾನುವಾರುಗಳು ವಾಹನಗಳಿಗೆ ಅಡ್ಡ ಸಿಲುಕಿ ಮೃತಪಟ್ಟಿವೆ. ಇಷ್ಟಾದರೂ ಬಿಡಾಡಿ ದನಗಳ ಮಾಲೀಕರು ತಮ್ಮ ದನಗಳನ್ನು ಕೊಟ್ಟಿಗೆಗಳಲ್ಲಿ ಕಟ್ಟಿಕೊಳ್ಳುತ್ತಿಲ್ಲ.
‘ನಗರದ ರಸ್ತೆಯುದ್ದಕ್ಕೂ ಬಿಡಾಡಿ ದನಗಳು ಮಲಗುತ್ತವೆ. ನಿಲ್ಲುತ್ತವೆ. ರಸ್ತೆಗಳಲ್ಲಿ ದನಗಳು ಮಲಗಿದ್ದರೆ ಅವುಗಳ ಫೋಟೊ ತೆಗೆದು ಕಳುಹಿಸುತ್ತಾರೆ. ಆದರೆ, ದನಗಳಿಗೆ ಮಾಲೀಕರಿದ್ದರೆ ಅವುಗಳಿಗೆ ಮೂಗುದಾರ, ದಂಡೆ, ಕಿವಿಗೆ ವಿಮಾ ಮುದ್ರೆ ಹಾಕಿರುತ್ತಾರೆ. ₹500 ದಂಡ ಕಟ್ಟಿಸಿಕೊಂಡು ಬಿಡಲಾಗುವುದು. ನಾವು ಸೂಚನೆ ನೀಡಿದಾಗ ತಮ್ಮ ದನಗಳನ್ನು ಕರೆದೊಯ್ಯುತ್ತಾರೆ. ಹೀಗಾಗಿ ಬಿಡಾಡಿ ದನಗಳ ನಿರ್ವಹಣೆ ಪಾಲಿಕೆಗೂ ಸವಾಲಿನ ಕೆಲಸವಾಗಿದ್ದು, ನಿರಂತವಾಗಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಇದಕ್ಕಾಗಿ ವಾಹನ ಹಾಗೂ ಸಿಬ್ಬಂದಿಯೂ ನೇಮಿಸಲಾಗಿದೆ’ ಎಂದು ಪಾಲಿಕೆ ಅಧಿಕಾರಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.