ಮೈಸೂರು: ‘ಯಾರೋ ಬರೆದ ಜಾತಕದಂತೆ ಎಲ್ಲವೂ ನಡೆಯುವುದಿಲ್ಲ. ನಮ್ಮ ಆಸಕ್ತಿ ಮತ್ತು ಪರಿಶ್ರಮದಿಂದ ಭವಿಷ್ಯ ನಿರ್ಮಾಣವಾಗುತ್ತದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ಇಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದ ದಸರಾ ಪುಸ್ತಕ ಮೇಳ ವೇದಿಕೆಯಲ್ಲಿ ಬುಧವಾರ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನಗೆ ಜೀವನದಲ್ಲಿ ಓದುವ ಭಾಗ್ಯವಿಲ್ಲ ಎಂದಿದ್ದರು. ಆದರೆ, ನಾನು ಶಿಕ್ಷಣ ಕ್ಷೇತ್ರದಲ್ಲಿಯೇ ಜೀವನವನ್ನು ಕಂಡುಕೊಡ್ಡೆ. ಸವಾಲುಗಳನ್ನು ಎದುರಿಸಿ ಮುಂದೆ ಹೋಗುವುದನ್ನು ರೂಢಿಸಿಕೊಂಡೆ’ ಎಂದರು.
‘ನನ್ನ ಆತ್ಮಕಥೆ ‘ಕಾಗೆ ಮುಟ್ಟಿದ ನೀರು’ ಕೃತಿಯಲ್ಲಿ ಇದನ್ನು ವಿವರಿಸಿದ್ದೇನೆ. ಹಲವರು ಕೃತಿಯನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಪೂರ್ತಿಯನ್ನು ಪಡೆದಿರುವುದಾಗಿ ಪತ್ರ ಬರೆದು ಸಂತಸ ಹಂಚಿಕೊಂಡಿದ್ದಾರೆ. ಕೃತಿಕಾರನಿಗೆ ಇದಕ್ಕಿಂತ ಸಾರ್ಥಕತೆಯೇನಿದೆ. ಪುಸ್ತಕಗಳ ಓದು ನಮಗೆ ಜೀವನ ಅನುಭವವನ್ನು ತೋರುತ್ತವೆ’ ಎಂದರು.
ಲೇಖಕಿ ಸುಮಲತಾ ಗಡಿಯಪ್ಪ ಮಾತನಾಡಿ, ‘ಮಹಿಳೆಯರು ಎಷ್ಟೇ ಮುಂದುವರಿದರೂ ಮನೆ ಕೆಲ್ಸ ಮುಗ್ಸಿದ್ಯೇನವ್ವ ಎಂಬ ಮಾತು ಕೇಳುವುದು ತಪ್ಪುವುದಿಲ್ಲ. ಇದರ ನಡುವೆಯೂ ಮಹಿಳೆಯೂ ಜಗತ್ತಿನ ವಿವಿಧ ವಿದ್ಯಮಾನಗಳ ಬಗ್ಗೆ ಅನುಭವವನ್ನು ದಾಖಲಿಸುವ ಪ್ರಯತ್ನ ಮಾಡುತ್ತಿರುವುದು ಸಾಧನೆ ಮತ್ತು ಶ್ಲಾಘನೀಯ’ ಎಂದರು.
ಲೇಖಕಿ ಡಿ.ನಳಿನಾ ಮಾತನಾಡಿದರು.
ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ಅವರು, ‘ಪುರುಷೋತ್ತಮ ಬಿಳಿಮಲೆ ಅವರ ‘ಕಾಗೆ ಮುಟ್ಟಿದ ನೀರು’, ಸುಮಲತಾ ಗಡಿಯಪ್ಪನವರ ‘ಪುಟ್ಟನ ದಸರಾ’, ಟಿ.ಎಸ್.ಭವ್ಯ ಅವರ ‘ವಸುಂಧರೆ’, ಡಿ.ನಳಿನಾ ಅವರ ‘ಭಾವ– ಬೆಳಕು’ ಕೃತಿಗಳನ್ನು ಬಿಡುಗಡೆ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ದಸರಾ ಮಹೋತ್ಸವ ಸಮಿತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ದಸರಾ ಪುಸ್ತಕ ಮೇಳ ಸಮಿತಿ ಸಮನ್ವಯಾಧಿಕಾರಿ ಪ್ರೊ.ನಂಜಯ್ಯ ಹೊಂಗನೂರು, ಸದಸ್ಯರಾದ ಎಂ.ಚಂದ್ರಶೇಖರ್, ಸುಚಿತ್ರಾ ಹೆಗಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.