ADVERTISEMENT

ಅಹಂ ತೊರೆಯಿರಿ; ಎಚ್ಚರಿಕೆಯಿಂದ ಬದುಕಿ: ಗಣಪತಿ ಸಚ್ಚಿದಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಮೇ 2020, 1:35 IST
Last Updated 26 ಮೇ 2020, 1:35 IST
ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಮೈಸೂರು: ‘ಜಗತ್ತು ಪ್ರಸ್ತುತ ಕಠೋರ ಸಂಕಷ್ಟ ಎದುರಿಸುತ್ತಿದೆ. ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಾಣು ಮನುಷ್ಯನ ನಿರ್ನಾಮಕ್ಕೆ ಪಣ ತೊಟ್ಟಂತೆ ದಾಳಿ ಇಡುತ್ತಿದೆ. ಸಣ್ಣ ಕ್ರಿಮಿ ಎಂದು ನಿರ್ಲಕ್ಷಿಸಿದ ಮಾನವನ ಎಣಿಕೆಗೆ ಪೆಟ್ಟು ನೀಡಿ, ಪಂಥಾಹ್ವಾನದ ಪಟ್ಟು ನೀಡುತ್ತಿದೆ. ಈ ಹೊತ್ತಲ್ಲಿ ಎಚ್ಚರಿಕೆಯಿಂದಿರಬೇಕಾದ ಜವಾಬ್ದಾರಿ ಮನು ಕುಲದ್ದಾಗಿದೆ’ ಎಂದು ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದ್ದಾರೆ.

ತಮ್ಮ 78ನೇ ಜನ್ಮ ದಿನದ ಅಂಗವಾಗಿ ಸಂದೇಶ ನೀಡಿರುವ ಸ್ವಾಮೀಜಿ, ‘ಬ್ರಹ್ಮಾಂಡದ ಜೀವರಾಶಿಗಳ ಪೈಕಿ ತಾನೇ ಸರ್ವ ಶ್ರೇಷ್ಠ ಎಂದು ಮೆರೆಯುತ್ತಿದ್ದ ಮಾನವನಿಗೆ ಕೊರೊನಾ ಎಂಬ ಸಣ್ಣ ಕ್ರಿಮಿ ಆಘಾತಕಾರಿಯಾಗಿ ಪರಿಣಮಿಸಿದೆ’ ಎಂದಿದ್ದಾರೆ.

‘ಮಾನವ ಮಾಡಿದ ತಪ್ಪುಗಳಿಗೆ ಸೃಷ್ಟಿ ನೀಡಿದ ಪಾಠ ಇದಾಗಿರಬಹುದೆಂದು ಹೇಳಲಾಗುತ್ತದೆ. ಇನ್ನಾದರೂ ಮನುಷ್ಯ ತನ್ನ ಬುದ್ಧಿಗೆ ಮೆತ್ತಿರುವ ಅಹಂ ಎಂಬ ಪಾಪದ ಕಣವನ್ನು ದೂರು ಸರಿಸಿ, ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕಿದೆ. ಮಾನವ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಎಲ್ಲರೂ ಮನುಷ್ಯರು ಎನಿಸಿಕೊಳ್ಳಲು ಸಾಧ್ಯವಿಲ್ಲ. ಧರ್ಮ, ಕರ್ಮ ಹಾಗೂ ಅಧ್ಯಾತ್ಮಗಳನ್ನು ಸರಿಯಾಗಿ ಅನುಸರಿಸಿದಾಗಷ್ಟೇ ಪರಿಪೂರ್ಣ ಮನುಷ್ಯರೆನಿಸಿಕೊಳ್ಳಲು ಸಾಧ್ಯ’ ಎಂದು ತಿಳಿಸಿದ್ದಾರೆ.

ADVERTISEMENT

‘ಧರ್ಮವು ಯಾವತ್ತೂ ಹಾದಿ ತಪ್ಪಿಲ್ಲ. ಧರ್ಮವನ್ನು ಮನುಷ್ಯ ಹಾದಿ ತಪ್ಪಿಸಲು ಯತ್ನಿಸಿದ್ದಾನೆ. ಅವನ ಯತ್ನ ಯಾವತ್ತೂ ಫಲಿಸಿಲ್ಲ. ಧರ್ಮದ ತಂಟೆಗೆ ಹೋದವರೆಲ್ಲಾ ದೇವರ ಅವಕೃಪೆಗೆ ಒಳಗಾಗಿ ತಕ್ಕ ಶಿಕ್ಷೆ ಅನುಭವಿಸುತ್ತಿದ್ದಾರೆ’ ಎಂದಿದ್ದಾರೆ.

‘ಭಾರತೀಯ ಸಮಾಜದಲ್ಲಿ ಸನಾತನ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳು ಬಹುತೇಕ ಉಳಿದಿರುವುದು ಬಡ-ಮಧ್ಯಮ ವರ್ಗದ ಕುಟುಂಬಗಳಲ್ಲಿ. ಹಣದ ಮದವಿಲ್ಲದೇ, ಉತ್ತಮ ಬದುಕಿನ ಕಡೆಗೆ ಹೆಜ್ಜೆ ಇಡುತ್ತಿರುವುದೇ ಇಂತಹ ಬಡ-ಮಧ್ಯಮ ವರ್ಗದ ಮಕ್ಕಳು. ದೇಶದ ಭವಿಷ್ಯವನ್ನು ಕಾಪಾಡಿ ಪ್ರಗತಿ ಪಥದತ್ತ ಕೊಂಡೊಯ್ಯುತ್ತಿರುವುದು ಇದೇ ವರ್ಗದ ಮಕ್ಕಳು’ ಎಂದು ತಮ್ಮ ಸಂದೇಶದಲ್ಲಿ ಸ್ವಾಮೀಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.