
ಮೈಸೂರು: ನಗರದಲ್ಲಿ 1,076 ವರ್ಷದ ಹಿಂದೆ ಇಷ್ಟದ ದೇವರು ‘ಈಶ್ವರನಿಗೆ ಹೂದೋಟ’ ನೀಡಿದ ಗಂಗ ದೊರೆಯ ಅಂಗರಕ್ಷಕನೊಬ್ಬ ಬರೆಸಿದ್ದ ಶಾಸನವೊಂದು ಪತ್ತೆಯಾಗಿದ್ದು, ಪಾರಂಪರಿಕ ನಗರಿಯ ಇತಿಹಾಸಕ್ಕೆ ಮತ್ತೊಂದು ಗರಿ ಸಿಕ್ಕಿದೆ.
ಇಲ್ಲಿನ ಸರ್ದಾರ್ ವಲ್ಲಭಬಾಯ್ ಪಟೇಲ್ ನಗರದಲ್ಲಿ ಗಂಗ ಸಾಮ್ರಾಜ್ಯದ ಅಪ್ರತಿಮ ದೊರೆ ‘ಬೂತುಗ’ನ ಕಾಲದ ಶಿಲಾಶಾಸನವನ್ನು ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕ ಸಿ.ಎ.ಶಶಿಧರ ಮತ್ತು ತಂಡ ಪತ್ತೆ ಹಚ್ಚಿದೆ.
ಪಟೇಲ್ ನಗರದ ಪ್ರವೇಶದ್ವಾರದ ಸಮೀಪದಲ್ಲಿಯೇ ಇರುವ ಮಹಾಲಿಂಗೇಶ್ವರ ದೇವಾಲಯದ ಅಂಗಳದಲ್ಲಿ ಸಿಕ್ಕ ಈ ಅಪ್ರಕಟಿತ ಶಾಸನದ ಇತಿಹಾಸವು ಕ್ರಿ.ಶ.948ರದ್ದಾಗಿದೆ.
ದೇಗುಲದ ಬಲಭಾಗದಲ್ಲಿನ ಗೋಡೆಯಲ್ಲಿ ಕನ್ನಡ ಲಿಪಿಯಲ್ಲಿಯೇ ಇರುವ ಶಾಸನದ ಸಾರವಿಷ್ಟೇ. ಗಂಗ ದೊರೆ ಬೂತುಗನ ಅಂಗರಕ್ಷಕ ಮಾರೆಮ್ಮ ಎಂಬಾತನು ತನ್ನಿಷ್ಟದ ದೇವರು ಮಹಾಲಿಂಗೇಶ್ವರನಿಗೆ ‘ಹೂದೋಟ’ವನ್ನು ದಾನವಾಗಿ ನೀಡಿದ್ದಾನೆ. ಆರು ಸಾಲುಗಳನ್ನು ಹೊಂದಿರುವ ಶಾಸನವು 2 ಅಡಿ ಅಗಲ ಹಾಗೂ 2.5 ಅಡಿಗಳಷ್ಟು ಎತ್ತರವಿದ್ದು, ‘ಬಿಳಿಕಣಶಿಲೆಯಲ್ಲಿ’ ಕೆತ್ತಲಾಗಿದೆ.
ಸಾಲಿನಲ್ಲೇನಿದೆ?
‘ಶ್ರೀರಾಜ್ಯ ವಿಜಯ ಸಂವತ್ಸರ ಸತಂಗಳೆಣ್ಟು ನೂರಎಪ್ಪತ್ತುವರ್ಷ ಪ್ರವತ್ತಿರ್ ಸುತ್ತಿರೆ ಪೆಮ್ರ್ಮ ನಡಿಯ ಮೆಯ್ಗಾಪಿನ ಮಾರೆಮ್ಮಾ ತೊರೆಯಿಗ ಪೂ ತೋಟ್ಟ ಅಕರಯ ವಿಜಕೇತ್ತಗಾ ಮುಣ್ಡರ್ . . ದಿಸೆ’ ಎಂದು ಬರೆಯಲಾಗಿದೆ.
‘ಗಂಗ ಸಾಮ್ರಾಜ್ಯದ ದೊರೆ 2ನೇ ಬೂತುಗನ ಅಂಗರಕ್ಷಕನಾದ ತೊರೆಯ, ಅಂದರೆ ಬೆಸ್ತ ಜನಾಂಗದ ಮಾರೆಮ್ಮಾ ಎಂಬುವನು ತೆರಿಗೆಯಿಲ್ಲದೆ ಹೂತೋಟವನ್ನು ದೇವಾಲಯಕ್ಕೆ ದಾನ ನೀಡಿದ್ದಾನೆ. ಅದರ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮದ ಮುಖ್ಯಸ್ಥನಾದ ವಿಜಕೇತ ಗಾವುಂಡನಿಗೆ ವಹಿಸಿದ್ದಾನೆ’ ಎನ್ನುತ್ತಾರೆ ಸಂಶೋಧಕ ಸಿ.ಎ.ಶಶಿಧರ.
‘ಶಾಸನದ ಪೂರ್ಣಪಾಠವನ್ನು ನಿಖರವಾಗಿ ಹೇಳಲಾಗುವುದಿಲ್ಲ. ಆದರೆ ‘ವಿಜಕೇತ ಗಾವುಂಡ ದಿಕ್ಕು’ ಎಂದು ಶಾಸನದಲ್ಲಿ ಉಲ್ಲೇಖವಿರುವುದರಿಂದ ತೋಟದ ನಿರ್ವಹಣೆಯನ್ನು ಗ್ರಾಮದ ಮುಖ್ಯಸ್ಥನಾದ ವಿಜಕೇತ ಗಾವುಂಡನಿಗೆ ವಹಿಸಿದ್ದಿರಬಹುದು. ಶಾಸನದಲ್ಲಿ ದೇವಾಲಯದ ಉಬ್ಬುಚಿತ್ರವನ್ನು ಸಾಂಕೇತಿಕವಾಗಿ ಕೆತ್ತಲಾಗಿದ್ದು, ದಾನ ಶಾಸನವೆಂಬುದನ್ನು ಖಚಿತಪಡಿಸುತ್ತದೆ’ ಎಂದು ವಿಶ್ಲೇಷಿಸಿದರು.
‘ಈ ಶಾಸನದ ಪಾಠದ ಕೊನೆಯಲ್ಲಿ ಕರುವಿಗೆ ಹಾಲುಣಿಸುತ್ತಿರುವ ಹಸುವಿನ ಉಬ್ಬುಶಿಲ್ಪವನ್ನು ಕೆತ್ತಲಾಗಿದ್ದು, ಇದು ಶಾಸನವನ್ನು ಹಾಳು ಮಾಡಿದವರಿಗೆ ಗೋವನ್ನು ಕೊಂದ ಪಾಪ ಬರುತ್ತದೆ ಎಂಬ ಶಾಪಾಶಯದ ಸಂಕೇತವಿದೆ’ ಎಂದು ವಿವರಿಸಿದರು.
ಸ್ಥಳೀಯರು ದೇಗುಲವನ್ನು 300 ವರ್ಷ ಪ್ರಾಚೀನದ್ದೆಂದು ಭಾವಿಸಿದ್ದರು. ಈ ಸಂಶೋಧನೆಯಿಂದ ದೇಗುಲವು ಶತಮಾನದ ಇತಿಹಾಸವಿದೆ. ಪ್ರಸ್ತುತ ಸಂಶೋಧಿತ ಶಾಸನ ಗಂಗ ಸಾಮ್ರಾಜ್ಯದ ಮೇಲೆ ಬೆಳಕು ಚೆಲ್ಲುತ್ತದೆ.– ಪ್ರೊ.ಎನ್.ಎಂ.ತಳವಾರ್, ಯೋಜನಾ ನಿರ್ದೇಶಕರು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ
ಶಾಸನ ಜಾಡು ಹಿಡಿದು..
‘ನಿವೃತ್ತ ಪೊಲೀಸ್ ಅಧಿಕಾರಿ ಶಿವಣ್ಣ ಅವರು ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ಅವರಿಗೆ ಈ ಶಾಸನದ ಬಗ್ಗೆ ಮಾಹಿತಿ ನೀಡಿದರು. ಅವರು ನನಗೆ ಮಾಹಿತಿ ನೀಡಿದ್ದರು. ಸಿಐಐಎಲ್ ನಿರ್ದೇಶಕರ ಅನುಮತಿ ಪಡೆದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಅವರ ಮಾರ್ಗದರ್ಶನದಲ್ಲಿ ಶಾಸನ ನೋಡಲಾಯಿತು’ ಎಂದು ಸಂಶೋಧಕ ಸಿ.ಎ.ಶಶಿಧರ ‘ಪ್ರಜಾವಾಣಿ’ಗೆ ತಿಳಿಸಿದರು.
‘ತಂಡದಲ್ಲಿ ಆರ್.ಮರಿಸ್ವಾಮಿ ಛಾಯಾಗ್ರಾಹಕ ರಮೇಶ್ ಪಟೇಲ್ ಪಿ.ಬಿ.ಪ್ರಖ್ಯಾತ್ ರಾಘವೇಂದ್ರ ಅವರೊಂದಿಗೆ ಶಾಸನದ ಪಡಿಯಚ್ಚನ್ನು ತೆಗೆದುಕೊಳ್ಳಲಾಯಿತು. ಸಿಐಐಎಲ್ ಸಹಾಯಕ ನಿರ್ದೇಶಕ ಪಂಕಜ್ ದ್ವಿವೇದಿ ಪ್ರೇಮ್‍ಕುಮಾರ್ ನೆರವಾದರು. ಶಾಸನ ತಜ್ಞ ಪ್ರೊ.ದೇವರಕೊಂಡಾರೆಡ್ಡಿ ಶಾಸನ ಓದಿಕೊಟ್ಟರು. ನಂತರ ಇತಿಹಾಸ ಸಂಶೋಧನೆ ನಡೆಸಲಾಯಿತು’ ಎಂದು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.