ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ನಗರ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಹಾಗೂ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ‘ಸ್ಟಾಪ್ ಮತ ಕಳ್ಳತನ’ ಎಂಬ ಬರಹವುಳ್ಳ ಸ್ಟಿಕ್ಕರ್‌ಗಳನ್ನು ಕೆಎಸ್ಆರ್‌ಟಿಸಿ ಬಸ್‌ಗೆ ಅಂಟಿಸಿದರು
ಪ್ರಜಾವಾಣಿ ಚಿತ್ರ
ಮೈಸೂರು: ನಗರ ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ‘ಸ್ಟಾಪ್ ವೋಟ್ ಚೋರಿ’ ಅಭಿಯಾನದ ಭಾಗವಾಗಿ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ‘ಸ್ಟಾಪ್ ಮತ ಕಳ್ಳತನ’ ಎಂಬ ಬರಹವುಳ್ಳ ಪೋಸ್ಟರ್ ಅಂಟಿಸಿದರು.
ಮಂಗಳವಾರ ಬೆಳಿಗ್ಗೆ ಬಸ್ ನಿಲ್ದಾಣದ ಮುಂಭಾಗ ಜಮಾಯಿಸಿದ ಸದಸ್ಯರು, ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಹತ್ತಿರದಲ್ಲಿರುವ ಬಸ್, ಆಟೊಗಳಿಗೆ ಸ್ಟಿಕ್ಕರ್ ಅಂಟಿಸಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಮಾತನಾಡಿ, ‘ಬಿಜೆಪಿಯು ದೇಶದಲ್ಲಿ ಮತ ಕಳ್ಳತನ ಮಾಡಿ 18 ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿಯ ತಂತ್ರ ಬಳಸಿ ಗೆದ್ದಿದ್ದಾರೆ. ಈ ಬಗ್ಗೆ ಮಹಾದೇವಪುರ ಕ್ಷೇತ್ರದಲ್ಲಿ ನಡೆದ ಮತ ಕಳ್ಳತನದ ದಾಖಲೆಗಳನ್ನು ರಾಹುಲ್ ಗಾಂಧಿ ನೀಡಿದರೂ, ಅಫಿಡಾವಿತ್ ಮೂಲಕ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ತಿಳಿಸಿರುವುದು ದೇಶದ ದುರಂತ’ ಎಂದರು.
‘ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಬಿಜೆಪಿ ಪಕ್ಷದ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. ರಾಹುಲ್ ಗಾಂಧಿ ನೀಡಿದ ದೂರನ್ನು ಸ್ವೀಕರಿಸಿ ಸ್ವಯಂ ಪ್ರೇರಿತ ತನಿಖೆ ನಡೆಸಬೇಕಾದವರು, ಅನಗತ್ಯ ದಾಖಲೆ ಕೇಳುತ್ತಿದ್ದಾರೆ. ಜ್ಞಾನೇಶ್ ಕುಮಾರ್ ಅವರನ್ನು ಕಿತ್ತೊಗೆಯಬೇಕು’ ಎಂದು ಆಗ್ರಹಿಸಿದರು.
‘ಬೆಂಗಳೂರಿನ ಸಮಾವೇಶದಲ್ಲಿ ದಾಖಲೆ ಬಿಡುಗಡೆ ಮಾಡಿ ದೂರು ನೀಡಿದರೂ, ಚುನಾವಣಾ ಆಯೋಗ ಕ್ರಮವಹಿಸಿಲ್ಲ. ಈ ಬಗ್ಗೆ ರಾಹುಲ್ ಗಾಂಧಿ ಬಿಹಾರದಲ್ಲಿ ಯಾತ್ರೆ ಆರಂಭಿಸಿದ್ದು, ಅದನ್ನು ದೇಶದಾದ್ಯಂತ ಮುಂದುವರಿಸಬೇಕು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಸುಮೊಟೊ ದಾಖಲಿಸಿಕೊಂಡು ತನಿಖೆಗೆ ಆದೇಶಿಸಬೇಕು’ ಎಂದು ಒತ್ತಾಯಿಸಿದರು.
‘ಮಹಾರಾಷ್ಟ್ರದ ಚುನಾವಣೆಯಲ್ಲಿ 5 ರಿಂದ 6 ಗಂಟೆ ಸಮಯದಲ್ಲಿ 90 ಸಾವಿರ ಮತದಾನ ಆಗುತ್ತದೆ. ಸಮೀಕ್ಷೆಗಳು ಕಾಂಗ್ರೆಸ್ ಗೆಲ್ಲುತ್ತದೆ ಎಂದು ತಿಳಿಸಿದರೂ, ಬಿಜೆಪಿ ಇವಿಯಂ ಕಳ್ಳತನ ಮಾಡಿ ಗೆಲುವು ಸಾಧಿಸಿದೆ. ಇದು ಜನಾಂದೋಲನವಾಗಿ ಮಾರ್ಪಡಬೇಕಿದೆ. ಇಲ್ಲದಿದ್ದರೆ ಬಿಜೆಪಿಯ ಸರ್ವಾಧಿಕಾರ ಮುಂದುವರೆಯುತ್ತದೆ’ ಎಂದರು.
‘ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು, ಕೊಡಗು ಕ್ಷೇತ್ರದಲ್ಲಿ ಬಿಜೆಪಿಯು 292 ಬೂತ್‌ನಲ್ಲಿ 1.45 ಲಕ್ಷ ಮತ ಕಳ್ಳತನ ಮಾಡಿದೆ. ಚಾಮರಾಜ, ಕೃಷ್ಣರಾಜ, ಮಡಿಕೇರಿ, ವಿರಾಜಪೇಟೆಯಲ್ಲಿ ಮತ ಕಳ್ಳತನವಾಗಿದ್ದು, 3 ತಿಂಗಳಲ್ಲಿ ಸಂಪೂರ್ಣ ಮಾಹಿತಿ ಜನರ ಮುಂದಿಡುತ್ತೇವೆ’ ಎಂದು ಹೇಳಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ರಾರ್, ಪದಾಧಿಕಾರಿಗಳಾದ ಮಲ್ಲೇಶ್, ಹೇಮಂತ್, ಶಶಿಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.