
ಮೈಸೂರು: ಭಾರತದ ಭೌಗೋಳಿಕ ಸೂಚ್ಯಂಕ ಪರಂಪರೆಯನ್ನು ಸಂಭ್ರಮಿಸಲು ಇಲ್ಲಿನ ಸಿಎಫ್‌ಟಿಆರ್‌ಐನಲ್ಲಿ ಡಿ.5ರಿಂದ 8ರವರೆಗೆ ‘ಜಿಐ ಮಹೋತ್ಸವ 3.0’ ಹಮ್ಮಿಕೊಳ್ಳಲಾಗಿದೆ.
ಭಾರತದ ಜಿಐ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಮತ್ತು ಸಾಂಪ್ರದಾಯಿಕ ಉತ್ಪಾದಕರಿಗೆ ಮಾರುಕಟ್ಟೆ ಸಂಪರ್ಕಗಳನ್ನು ಬಲಪಡಿಸಲು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂಎಸ್‌ಎಂಇ) ರಾಷ್ಟ್ರೀಯ ಜಿಐ ಕಾರ್ಯಕ್ರಮಗಳ ಸರಣಿಯನ್ನು ಮುನ್ನಡೆಸುತ್ತಿದೆ. ಇದರ ಭಾಗವಾಗಿ ನಬಾರ್ಡ್-ಮಧುರೈ ಕೃಷಿ ವ್ಯವಹಾರ ಇನ್ಕ್ಯುಬೇಷನ್ ಫೋರಮ್ (ಎಂಎಬಿಐಎಫ್)– ಜಿಐ ಮಹೋತ್ಸವ 3.0 ಆಯೋಜಿಸಲಾಗಿದೆ.
ನಿತ್ಯ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಎಂಎಸ್ಎಂಇ ಸಚಿವಾಲಯ, ನಬಾರ್ಡ್, ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ.
ಉದ್ಘಾಟನಾ ಸಮಾರಂಭವು ಡಿ.5ರಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ. ನಬಾರ್ಡ್ ಮ್ಯಾಬಿಫ್ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಗಣೇಶ್ ಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಿಎಫ್‌ಟಿಆರ್‌ಐ ನಿರ್ದೇಶಕ ಗಿರಿಧರ್ ಪರ್ವತಮ್ ಅಧ್ಯಕ್ಷತೆ ವಹಿಸುವರು.
ಎಂಎಸ್ಎಂಇ ಜಂಟಿ ನಿರ್ದೇಶಕ ದೇವರಾಜ್, ಮಧುರೈ ಎಸಿಅಂಡ್ಆರ್‌ಐ ಟಿಎನ್‌ಎಯು ಡೀನ್ ಪಿ.ಪಿ. ಮಹೇಂದ್ರನ್, ಕೊಯಮತ್ತೂರು ಡಿಎಬಿಡಿ ಟಿಎನ್‌ಎಯು ನಿರ್ದೇಶಕ ಇ. ಸೋಮಸುಂದರಂ, ಐಐಪಿಎಂ ನಿರ್ದೇಶಕ ಎಸ್. ಸೆಂಥಿಲ್ ವಿನಯಾಗಂ ಭಾಗವಹಿಸುವರು.
ಉದ್ಘಾಟನಾ ಅಧಿವೇಶನದಲ್ಲಿ ಜಿಐ ಮತ್ತು ಕೃಷಿ-ಆಹಾರ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ, ಸಂಶೋಧನಾ ಸಹಯೋಗ ಮತ್ತು ಉದ್ಯಮಶೀಲತಾ ಬೆಂಬಲವನ್ನು ಬೆಳೆಸುವ ಗುರಿಯನ್ನು ಹೊಂದಿರುವ ಎಂಒಯುಗೆ ಸಹಿ ಹಾಕುವ ಕಾರ್ಯಕ್ರಮವೂ ನಡೆಯಲಿದೆ. ಬಳಿಕ ಹಲವು ಸ್ಟಾರ್ಟ್‌ಅಪ್ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು. ಇತ್ತೀಚೆಗೆ ನಡೆದ ಜಿಐ ಹ್ಯಾಕಥಾನ್‌ನಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು.
8ರಂದು ನಡೆಯುವ ಸಮಾರೋಪ ಸಮಾರಂಭದ ವಿಶೇಷ ಅಧಿವೇಶನದಲ್ಲಿ ಅತ್ಯಾಧುನಿಕ ವಿಷಯಗಳ ಕುರಿತು ತಾಂತ್ರಿಕ ಅವಧಿಗಳು, ಪ್ರಾದೇಶಿಕ ಕಲೆಗಳು ಮತ್ತು ಸಂಪ್ರದಾಯಗಳನ್ನು ಆಚರಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಜಿಐ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು ಮತ್ತು ನವೋದ್ಯಮಗಳಿಂದ ಯಶಸ್ಸಿನ ಕಥೆಗಳು ಪ್ರಸ್ತುತಗೊಳ್ಳಲಿವೆ. 50 ಮಳಿಗೆಗಳು ಇರಲಿವೆ.
‘ಸಾವಿರಾರು ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ. ಈ ಕಾರ್ಯಕ್ರಮವು ಭಾರತದ ಜಿಐ ಪರಂಪರೆಯನ್ನು ಆಚರಿಸುವ ಮತ್ತು ಅದನ್ನು ರಕ್ಷಿಸುವ ಸಮುದಾಯಗಳನ್ನು ಸಬಲೀಕರಣಗೊಳಿಸುವ ವೇದಿಕೆಯಾಗಲಿದೆ’ ಎಂದು ನಿರ್ದೇಶಕ ಗಿರಿಧರ್ ಪರ್ವತಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.