ADVERTISEMENT

‘ಜಿ.ಐ ಟ್ಯಾಗ್‌’: ಕುತೂಹಲದ ಕಣ್ಣಿಗೆ ವೇದಿಕೆ

ಜಿ.ಐ ಮಹೋತ್ಸವದಲ್ಲಿ 50ಕ್ಕೂ ಹೆಚ್ಚು ಮಳಿಗೆಗಳು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 6:17 IST
Last Updated 6 ಡಿಸೆಂಬರ್ 2025, 6:17 IST
ಮೈಸೂರಿನ ಸಿಎಫ್‌ಟಿಆರ್‌ಐ ಆವರಣದಲ್ಲಿ ನಡೆಯುತ್ತಿರುವ ಜಿ.ಐ ಮಹೋತ್ಸವದಲ್ಲಿ ಯುವತಿಯರು ಟೋಡ ಜನರು ತಯಾರಿಸುವ ಸಾಂಪ್ರದಾಯಿಕ ಶಾಲು ಹಾಗೂ ಪರ್ಸ್‌ಗಳನ್ನು ಪರಿಶೀಲಿಸುತ್ತಿರುವುದು–ಪ್ರಜಾವಾಣಿ ಚಿತ್ರ
ಮೈಸೂರಿನ ಸಿಎಫ್‌ಟಿಆರ್‌ಐ ಆವರಣದಲ್ಲಿ ನಡೆಯುತ್ತಿರುವ ಜಿ.ಐ ಮಹೋತ್ಸವದಲ್ಲಿ ಯುವತಿಯರು ಟೋಡ ಜನರು ತಯಾರಿಸುವ ಸಾಂಪ್ರದಾಯಿಕ ಶಾಲು ಹಾಗೂ ಪರ್ಸ್‌ಗಳನ್ನು ಪರಿಶೀಲಿಸುತ್ತಿರುವುದು–ಪ್ರಜಾವಾಣಿ ಚಿತ್ರ   

ಮೈಸೂರು: ಸಿಎಫ್‌ಟಿಆರ್‌ಐ ಆವರಣದಲ್ಲಿ ನಡೆಯುತ್ತಿರುವ ‘ಜಿಐ ಮಹೋತ್ಸವ 3.0’ ಕುತೂಹಲಿಗಳ ಜ್ಞಾನದಾಹ ನೀಗಿಸುತ್ತಿದೆ. ಉತ್ಪನ್ನಗಳಲ್ಲಿನ ವಿಶೇಷತೆ ತಿಳಿದುಕೊಳ್ಳಲು ಮಳಿಗೆಯ ಮುಂದೆ ಜನ ಗುಂಪು ಸೇರುತ್ತಿದ್ದಾರೆ. 

ಮಧುರೈ ಅಗ್ರಿ ಬಿಸಿನೆಸ್‌ ಇನ್ಕ್ಯುಬೇಷನ್‌ ಫೋರಂ (ಎಂಎಬಿಐಎಫ್‌), ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್‌, ತಮಿಳುನಾಡು ಕೃಷಿ ವಿದ್ಯಾಲಯ, ಸಿಎಸ್‌ಐಆರ್‌– ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಜಿ.ಐ ಟ್ಯಾಗ್‌ ಹೊಂದಿರುವ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಆಯೋಜಿಸಿದ್ದು, ದೇಶದ ಹೆಮ್ಮೆಯ ಉತ್ಪನ್ನಗಳು ಪ್ರದರ್ಶನಗೊಂಡಿವೆ.

ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಳೆ, ಮೈಸೂರಿನ ಸಾಂಪ್ರದಾಯಿಕ ವರ್ಣ ಚಿತ್ರ ಮತ್ತು ಗಂಜೇಫಾ ಕಾರ್ಡ್, ಮೈಸೂರು ಅಗರಬತ್ತಿ, ಮೈಸೂರಿನ ರೋಸ್‌ವುಡ್‌ ಕೆತ್ತನೆಗಳು ಮೈಸೂರಿನ ಸುಗಂಧ ಸೂಸುತ್ತಿವೆ. ಅದರಲ್ಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. 

ADVERTISEMENT

ಕಲಬುರಗಿ ತೊಗರಿ ಬೇಳೆ, ಇಂಡಿ ನಿಂಬೆ, ಕಾಫಿ ಬೋರ್ಡ್, ಬ್ಯಾಡಗಿ ಮೆಣಸಿನಕಾಯಿ, ಕರ್ನಾಟಕದ ಕರಕುಶಲ ವಸ್ತು, ಧಾರವಾಡದ ಪೇಡ, ಚನ್ನಪಟ್ಟಣದ ಆಟಿಕೆ, ಕಂಪಾ ಔಷಧೀಯ ಸಸ್ಯಗಳ ರೈತರ ಉತ್ಪನ್ನಗಳು ಜನರನ್ನು ಆಕರ್ಷಿಸಿದವು. ಅಕ್ಕಿ ಹಿಟ್ಟು ಮತ್ತು ಉದ್ದಿನಬೇಳೆಯಿಂದ ತಯಾರಿಸಲ್ಪಡುವ ತಮಿಳುನಾಡಿನ ಮನಪ್ಪರೈ ಪಟ್ಟಣದ ಸಾಂಪ್ರದಾಯಿಕ ಖಾರದ ತಿಂಡಿ ‘ಮನಪ್ಪರೈ ಮುರುಕು’ ಖರೀದಿಗೆ ಜನ ಮುಗಿಬಿದ್ದರು.

ಉಡುಪಿ ಸಾರು, ಅರಾನಿ ಸಿಲ್ಕ್‌, ಟೋಡಾ ಕಸೂತಿಗಳು ವಸ್ತ್ರಪ್ರಿಯರನ್ನು ಸೆಳೆಯಿತು. ಭಾರತದ ನೀಲಗಿರಿ ಬೆಟ್ಟಗಳಲ್ಲಿರುವ ಟೋಡ ಮಹಿಳೆಯರು ಉಣ್ಣೆಯಿಂದ ತಯಾರಿಸುವ ಸಾಂಪ್ರದಾಯಿಕ ಶಾಲುಗಳು ಮೇಳದ ಪ್ರಮುಖ ಆಕರ್ಷಣೆಯಾಗಿದ್ದವು. ಮಹೋತ್ಸವವು ಸೋಮವಾರದವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿದೆ.

ಜಿ.ಐ ಮಹೋತ್ಸವದಲ್ಲಿ ಗ್ರಾಹಕರು ಮೈಸೂರಿನ ಸಾಂಪ್ರದಾಯಿಕ ವರ್ಣಚಿತ್ರಗಳ ಮಾಹಿತಿ ಪಡೆಯುತ್ತಿರುವುದು ಪ್ರಜಾವಾಣಿ ಚಿತ್ರ

‘ರೈತರು ಮುಂದೆ ಬರಲಿ’

ಸಿಎಫ್‌ಟಿಆರ್‌ಐ ರಾಜ್ಯದಲ್ಲಿ ಜಿಐ ಟ್ಯಾಗ್‌ ಸಂಖ್ಯೆ ಹೆಚ್ಚಿಸಲು ಬೆಂಬಲ ನೀಡಲಿದ್ದು ರೈತರು ವಿಶೇಷ ಉತ್ಪನ್ನಗಳ ಬಗ್ಗೆ ತಿಳಿಸಬೇಕಿದೆ’ ಎಂದು ಸಿಎಸ್‌ಐಆರ್‌–ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಗಿರಿಧರ್‌ ಪರ್ವತಂ ತಿಳಿಸಿದರು. ಜಿಐ ಮಹೋತ್ಸವ 3.0 ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಜಿಐ ಟ್ಯಾಗ್‌ ಸಾಂಪ್ರದಾಯಿಕ ಉತ್ಪನ್ನ ಉಳಿಸಲು ಗ್ರಾಮೀಣಾಭಿವೃದ್ಧಿ ಜೀವವೈವಿಧ್ಯ ರಕ್ಷಣೆ ಹಾಗೂ ಸ್ಥಳೀಯ ಉದ್ಯೋಗ ಸೃಷ್ಟಿಗೆ ಸಹಾಯಕ’ ಎಂದರು.

‘ದೇಶದಲ್ಲಿ 605 ಜಿಐ ಟ್ಯಾಗ್ ಉತ್ಪನ್ನಗಳಿವೆ. 46 ಜಿಐ ಟ್ಯಾಗ್‌ ಉತ್ಪನ್ನದೊಂದಿಗೆ ಕರ್ನಾಟಕವು  ಉತ್ತರಪ್ರದೇಶದ ನಂತರದ ಸ್ಥಾನ ಹೊಂದಿದೆ. ಸಿಎಫ್‌ಟಿಆರ್‌ಐ ಜಿಐ ಟ್ಯಾಗ್‌ ಹೊಂದಿರುವ ಉತ್ಪನ್ನದ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಿ ಉಪ ಉತ್ಪನ್ನಗಳ ಬಗ್ಗೆ ಸಂಶೋಧನೆ ನಡೆಸಿದೆ. ಆಧುನಿಕ ವಿಜ್ಞಾನ ಹಾಗೂ ಸಾಂಪ್ರದಾಯಿಕ ಜ್ಞಾನದ ಸೇತುವೆಯಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು. ಎಂಎಬಿಐಎಫ್‌ ಮತ್ತು ಸಿಎಫ್‌ಟಿಆರ್‌ಐ ನಡುವೆ ಜಿಐಗೆ ಸಂಬಂಧಿಸಿ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಎಂಎಬಿಐಎಫ್‌ನ ಉತ್ಪನ್ನ ಬಿಡುಗಡೆಗೊಳಿಸಲಾಯಿತು. ಹ್ಯಾಕಥಾನ್‌ ವಿಜೇತರಿಗೆ ನಬಾರ್ಡ್‌ ಎಂಎಬಿಐಎಫ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಣೇಶ್‌ ಮೂರ್ತಿ ಬಹುಮಾನ ವಿತರಿಸಿದರು. ಆಶಿತೋಷ್‌ ಇನಾಮ್‌ದಾರ್‌ ಮಧುರೈನ ಟಿಎನ್‌ಎಯು ಕ್ಯಾಪಸ್‌ನ ಡೀನ್‌ ಡಾ.ಪಿ.ಪಿ. ಮಹೇಂದ್ರನ್‌ ತಮಿಳುನಾಡು ವಿವಿ ಡಿಎಬಿಡಿ ನಿರ್ದೇಶಕ ಇ. ಸೋಮಸುಂದರಂ ಸಿಎಫ್‌ಟಿಆರ್‌ಐನ ವಿಜ್ಞಾನಿ ಡಾ.ಡಿ. ಉಷಾರಾಣಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.