ಮೈಸೂರು: ‘ಅಸಂಘಟಿತ’ ಕಾರ್ಮಿಕರಿಗೆ ಸಹಾಯಹಸ್ತ ಚಾಚಲು ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೊಳಿಸಲಾಗಿರುವ ‘ಗಿಗ್ ಕಾರ್ಮಿಕರ ವಿಮಾ ಯೋಜನೆ’ಯಡಿ ಮೇ ಮೊದಲ ವಾರದವರೆಗೆ 10,205 ಮಂದಿ ನೋಂದಾಯಿಸಿದ್ದಾರೆ. 5 ಸಾವಿರ ಮೀರಿದ ನೋಂದಣಿಯಿಂದ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದೆ.
ಕಾರ್ಮಿಕ ಇಲಾಖೆಯು ಅನುಷ್ಠಾನ ಗೊಳಿಸಿರುವ ಈ ಯೋಜನೆಯಡಿ ಬಾಗಲಕೋಟೆ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾವೇರಿ, ಮಂಡ್ಯ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಎರಡಂಕಿಯ ನೋಂದಣಿಯಷ್ಟೇ ಆಗಿದೆ. ಉಳಿದ ಜಿಲ್ಲೆಗಳಲ್ಲಿ ಮೂರಂಕಿ ತಲುಪಿದೆ.
‘ಸೇವಾ ಸಿಂಧು’ ಪೋರ್ಟಲ್ ಮೂಲಕ ನೋಂದಣಿಗೆ ಅವಕಾಶ ವಿದ್ದು, 9,379 ಅರ್ಜಿಗಳನ್ನು ಅನುಮೋದಿಸಲಾಗಿದೆ. 756 ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. 31 ತಿರಸ್ಕೃತಗೊಂಡಿವೆ.
ಕರ್ತವ್ಯದಲ್ಲಿ ಇಲ್ಲದಿರುವಾಗಲೂ: ರಾಜ್ಯದಲ್ಲಿ ‘ಗಿಗ್’ ಕ್ಷೇತ್ರದ ಕಾರ್ಮಿಕರು (ವಸ್ತುಗಳು, ಆಹಾರ ಪದಾರ್ಥ ಮೊದಲಾದವುಗಳನ್ನು ತಲುಪಿಸುವ ಸ್ವತಂತ್ರ ಕಾರ್ಮಿಕರು) 2.39 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಅವರಿಗಾಗಿ ತಂದಿರುವ ಯೋಜನೆಯ ಸೌಲಭ್ಯವು ಕರ್ತವ್ಯದಲ್ಲಿರುವಾಗ ಅಥವಾ ಇಲ್ಲದಿರುವಾಗ ಸಂಭವಿಸುವ ಅಪಘಾತಗಳಿಗೂ ಅನ್ವಯ ಆಗುತ್ತದೆ. ಪ್ರೀಮಿಯಂ ಪಾವತಿಸದೆ ಉಚಿತವಾಗಿ ನೋಂದಾಯಿಸಬಹುದು.
ಸ್ವಿಗ್ಗಿ, ಜೊಮ್ಯಾಟೊಗಳಂತಹ ಸಂಸ್ಥೆಗಳಲ್ಲಿ ಫುಡ್ ಡೆಲಿವರಿ ಮಾಡುವ ಹಾಗೂ ಇ–ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್‌ಕಾರ್ಟ್, ಬಿಗ್‌ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕ್‌ಇಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ಮೊದಲಾದ ಕಂಪನಿಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿರುವವರನ್ನು ‘ಗಿಗ್’ ಕಾರ್ಮಿಕರೆಂದು ಪರಿಗಣಿಸಲಾಗಿದೆ. ಅವರು ಹಾಗೂ ಕುಟುಂಬದವರಿಗೆ ಸಾಮಾಜಿಕ ಭದ್ರತೆ ಒದಗಿಸುವುದೇ ಯೋಜನೆಯ ಉದ್ದೇಶ.
ಕಂಪನಿಗಳಿಗೆ ಮನವಿ: ‘ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಜಾಗೃತಿ ಮೂಡಿಸಲಾಗುತ್ತಿದೆ. ನೋಂದಣಿ ಮಾಡಿಸಲೆಂದು ಶಿಬಿರ ಗಳನ್ನೂ ಆಯೋಜಿಸುತ್ತಿದ್ದೇವೆ. ತಮ್ಮ ಬಳಿ ಕೆಲಸ ಮಾಡುತ್ತಿರುವ ಕಾರ್ಮಿಕರ ನೋಂದಣಿಗೆ ಕ್ರಮ ಕೈಗೊಳ್ಳುವಂತೆ ಆಯಾ ಕಂಪನಿಯವರಿಗೇ (ಅಗ್ರಿಗೇಟರ್ಸ್) ಕೋರುತ್ತಿದ್ದೇವೆ’ ಎಂದು ಇಲಾಖೆಯ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ನೋಂದಾಯಿಸಿದ ಗಿಗ್ ಕಾರ್ಮಿಕ ಅಪಘಾತದಿಂದ ಮೃತಪಟ್ಟರೆ ವಿಮಾ ಪರಿಹಾರವಾಗಿ ₹2 ಲಕ್ಷ ಹಾಗೂ ಜೀವ ವಿಮೆಯ ಮೊತ್ತ ₹2 ಲಕ್ಷ ಸೇರಿ ಒಟ್ಟು ₹4 ಲಕ್ಷ ಕುಟುಂಬದವರಿಗೆ ದೊರೆಯಲಿದೆ. ಶಾಶ್ವತ ಅಂಗವಿಕಲತೆ ಹೊಂದಿದಲ್ಲಿ ₹2 ಲಕ್ಷ, ಆಸ್ಪತ್ರೆ ವೆಚ್ಚವಾಗಿ ₹1 ಲಕ್ಷದವರೆಗೆ ಹಾಗೂ ಜೀವ ವಿಮೆಯಾಗಿ ₹2 ಲಕ್ಷ ಸಿಗುತ್ತದೆ. ಈ ಕಾರ್ಮಿಕರು ಸೌಲಭ್ಯ ಪಡೆದುಕೊಳ್ಳಲು ಮುಂದೆ ಬರಬೇಕು. ಅವರಿಗೆ ಮತ್ತಷ್ಟು ಸಾಮಾಜಿಕ ಭದ್ರತೆ ಕಲ್ಪಿಸುವ ಆಶಯದೊಂದಿಗೆ, ಅವರಿಗಾಗಿಯೇ ಪ್ರತ್ಯೇಕ ಮಂಡಳಿ ರಚನೆಗೂ ಸರ್ಕಾರ ಕ್ರಮ ವಹಿಸಿದೆ’ ಎಂದು ತಿಳಿಸಿದರು.
ಈ ವಿಮಾ ಯೋಜನೆಯು ಅತ್ಯಂತ ಮಹತ್ವದ್ದಾಗಿದ್ದು ಗಿಗ್ ಕಾರ್ಮಿಕರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು.–ಎಚ್.ಎನ್. ಗೋಪಾಲಕೃಷ್ಣ, ಆಯುಕ್ತ, ಕಾರ್ಮಿಕ ಇಲಾಖೆ
ನೋಂದಣಿಯಲ್ಲಿ ಟಾಪ್ 10 ಜಿಲ್ಲೆಗಳು
ಬೆಂಗಳೂರು; 5,349
ಧಾರವಾಡ; 512
ದಕ್ಷಿಣ ಕನ್ನಡ; 398
ಬೆಳಗಾವಿ; 371
ಉತ್ತರಕನ್ನಡ; 336
ಮೈಸೂರು; 285
ದಾವಣಗೆರೆ; 208
ವಿಜಯಪುರ; 176
ತುಮಕೂರು; 167
ಶಿವಮೊಗ್ಗ; 162
(ಮಾಹಿತಿ: ಕಾರ್ಮಿಕ ಇಲಾಖೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.