ADVERTISEMENT

ಎಚ್.ಡಿ.ಕೋಟೆ: ಶುಂಠಿ ಕಟಾವಿಗೆ ಹೆಚ್ಚಿನ ಬೆಲೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 2:48 IST
Last Updated 9 ನವೆಂಬರ್ 2025, 2:48 IST
ಎಚ್‍.ಡಿ.ಕೋಟೆ, ಸರಗೂರು, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕಿನ ಶುಂಠಿ ಕೂಲಿ ಕಾರ್ಮಿಕರ ಸಂಘದ ಸದಸ್ಯರು ಶುಂಠಿ ಕಟಾವನ್ನು ಬಹಿಷ್ಕರಿಸಿ ಎಚ್‍.ಡಿ.ಕೋಟೆ ತಾಲ್ಲೂಕು ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು
ಎಚ್‍.ಡಿ.ಕೋಟೆ, ಸರಗೂರು, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕಿನ ಶುಂಠಿ ಕೂಲಿ ಕಾರ್ಮಿಕರ ಸಂಘದ ಸದಸ್ಯರು ಶುಂಠಿ ಕಟಾವನ್ನು ಬಹಿಷ್ಕರಿಸಿ ಎಚ್‍.ಡಿ.ಕೋಟೆ ತಾಲ್ಲೂಕು ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು   

ಎಚ್.ಡಿ.ಕೋಟೆ: ‘ಶುಂಠಿ ಕಟಾವಿಗೆ ಹೆಚ್ಚಿನ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಎಚ್‍.ಡಿ. ಕೋಟೆ, ಸರಗೂರು, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕು ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಸಂಘದ ಸದಸ್ಯರು ಕಟಾವು ಬಹಿಷ್ಕರಿಸಿ ಎಚ್‌.ಡಿ.ಕೋಟೆ ತಾಲ್ಲೂಕು ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಬೊಪ್ಪನಹಳ್ಳಿಯ ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಸಂಘದ ಕಚೇರಿ ಮುಂಭಾಗದಿಂದ ಹ್ಯಾಂಡ್‌ಪೋಸ್ಟ್ ಮಾರ್ಗವಾಗಿ ನೂರಾರು ವಾಹನಗಳಲ್ಲಿ ಕೂಲಿ ಕಾರ್ಮಿಕರು ಕಾಲ್ನಡಿಗೆ ಮೂಲಕ ಪ್ರತಿಭಟನಾ ಜಾಥಾ ನಡೆಸಿದರು.

ಸಂಘದ ಅಧ್ಯಕ್ಷ ಮಗ್ಗೆ ಸುಂದ್ರ ಮಾತನಾಡಿ, ‘ಕೇರಳ ಮೂಲದ ಶುಂಠಿ ಖರೀದಿಸುವ ಕಂಪನಿಗಳು ನಮ್ಮ ರಾಜ್ಯಕ್ಕೆ ಬಂದು ನಮ್ಮ ಸಂಘದಲ್ಲಿನ 5000ಕ್ಕೂ ಹೆಚ್ಚಿನ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಶುಂಠಿ ಕಟಾವು ಮಾಡಿಸಿ 60 ಕೆಜಿ ತೂಕದ ಒಂದು ಚೀಲಕ್ಕೆ ₹275 ನೀಡುತ್ತಿದ್ದರು. ಆದರೆ ಕ್ರಮೇಣ ಕಟಾವು ಹಣವನ್ನು ಕಡಿಮೆ ಮಾಡುತ್ತಾ ಬಂದಿದ್ದು, ಒಂದು ಚೀಲಕ್ಕೆ ಈಗ ₹170 ನೀಡುತ್ತಿದ್ದರು. ಸಂಘದ ಕೂಲಿ ಕಾರ್ಮಿಕರು ವಿಧಿ ಇಲ್ಲದೇ ಜೀವನ ನಿರ್ವಹಣೆಗಾಗಿ ಅವರು ನೀಡಿದ ಬೆಲೆಗೆ ಶುಂಠಿ ಕಟಾವು‌ ಮಾಡುತ್ತಿದ್ದರು. ಆದರೀಗ ₹175 ರಿಂದ ₹150ಕ್ಕೆ ಇಳಿಸಿರುವುದರಿಂದ ನಮ್ಮ ಕಾರ್ಮಿಕರು ಕಟಾವಿಗೆ ತೆರಳದೆ ಪ್ರತಿಭಟನೆಗೆ ಮುಂದಾಗಿದ್ದೇವೆ’ ಎಂದರು.

ADVERTISEMENT

ಅಸ್ಸಾಂ ಕಾರ್ಮಿಕರ ಲಗ್ಗೆ: ‘ಶುಂಠಿ ಕಟಾವು ಮಾಡಲು ಅಸ್ಸಾಂ ಮೂಲದ ಕೂಲಿ‌ ಕಾರ್ಮಿಕರು ಕರ್ನಾಟಕಕ್ಕೆ ಲಗ್ಗೆ ಇಟ್ಟ ಹಿನ್ನೆಲೆಯಲ್ಲಿ ಇಂದು ನಮ್ಮ ಕಾರ್ಮಿಕರನ್ನು ಕೇರಳ ಕಂಪನಿಯವರು ನಿರ್ಲಕ್ಷಿಸಿದ್ದಾರೆ. ಸ್ಥಳೀಯ ಕೂಲಿ ಕಾರ್ಮಿಕರನ್ನು ಪರಿಗಣಿಸದೆ ಕೇರಳ ಮೂಲದ ಶುಂಠಿ ಕಂಪನಿಗಳಿಗೆ ನಮ್ಮ ರೈತರು ಶುಂಠಿಯನ್ನು ಮಾರಬಾರದು’ ಎಂದು ಅವರು ಒತ್ತಾಯಿಸಿದ್ದಾರೆ.

ಶಾಸಕ ಅನಿಲ್ ಚಿಕ್ಕಮಾದು ಮಧ್ಯ ಪ್ರವೇಶಿಸಿ, ‘ತಾಲ್ಲೂಕಿನ ಶುಂಠಿ ಕಾರ್ಮಿಕರಿಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು’ ಎಂದರು.

ಗೌರವಾಧ್ಯಕ್ಷ ನಾಗರಾಜು, ಉಪಾಧ್ಯಕ್ಷ ರಾಮಕೃಷ್ಣ, ಬೆಟ್ಟನಾಯಕ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಸಹಕಾರ್ಯದರ್ಶಿ ಸೋಮೇಶ್, ಸಂಘಟನಾ ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಮರಿಸಿದ್ದಯ್ಯ, ನಿರ್ದೇಶಕರಾಗಿ ರಾಜು, ಬೆಟ್ಟನಾಯಕ, ಮಹದೇವನಾಯಕ ತೇಜಕುಮಾರ್, ಪ್ರವೀಣ್, ಕುಮಾರ್, ಬೆಟ್ಟನಾಯಕ, ಚಿಕ್ಕಣ್ಣ, ದುಂಡರಾಜು ಗೋವಿಂದರಾಜು, ಜೀವಿಕ ಸಂಘಟನೆ ಜೀವಿಕ ಬಸವರಾಜು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.