ADVERTISEMENT

ಕಳುವಾದ ವಸ್ತು ಸಿಕ್ಕಿದ ಸಂತಸ

ಭಾವುಕರಾದ ಸಂತ್ರಸ್ತರು, ನಗರ ಪೊಲೀಸರ ಸಾಧನೆಗೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 6:02 IST
Last Updated 1 ಜನವರಿ 2023, 6:02 IST
ಕಳವಾಗಿದ್ದ ವಸ್ತುಗಳನ್ನು ವಾರಸುದಾರರಿಗೆ ನಗರ ಪೊಲೀಸ್ ಕಮಿಷನರ್ ರಮೇಶ್‌ ಬಾನೋತ್‌ ಶನಿವಾರ ಕಚೇರಿಯ ಆವರಣದಲ್ಲಿ ವಿತರಿಸಿದರು. ಡಿಸಿಪಿಗಳಾದ ಎಂ.ಎಸ್.ಗೀತಾ, ಎಂ.ಮುತ್ತುರಾಜ್ ಇದ್ದರು
ಕಳವಾಗಿದ್ದ ವಸ್ತುಗಳನ್ನು ವಾರಸುದಾರರಿಗೆ ನಗರ ಪೊಲೀಸ್ ಕಮಿಷನರ್ ರಮೇಶ್‌ ಬಾನೋತ್‌ ಶನಿವಾರ ಕಚೇರಿಯ ಆವರಣದಲ್ಲಿ ವಿತರಿಸಿದರು. ಡಿಸಿಪಿಗಳಾದ ಎಂ.ಎಸ್.ಗೀತಾ, ಎಂ.ಮುತ್ತುರಾಜ್ ಇದ್ದರು   

ಮೈಸೂರು: ಕಳೆದುಕೊಂಡಿದ್ದ ವಾಹನ, ಆಭರಣ, ನಗದು ಮತ್ತೆ ಕೈಸೇರಿದ ಸಂತಸ ನಗರದ ವಾರಸುದಾರರಲ್ಲಿ ಮನೆಮಾಡಿತ್ತು. ಪ್ರಕರಣಗಳನ್ನು ಭೇದಿಸಿದ ಕರ್ತವ್ಯ ನಿಷ್ಠೆ ಮೆರೆದ ಪೊಲೀಸರಿಗೂ ಪ್ರಶಂಸೆ ವ್ಯಕ್ತವಾಯಿತು.

–ನಗರದ ಪೊಲೀಸ್‌ ಕಮಿಷನರ್‌ ಕಚೇರಿ ಆವರಣದಲ್ಲಿ ಶನಿವಾರ ಕಂಡುಬಂದ ದೃಶ್ಯವಿದು. ಕಳುವಾಗಿದ್ದ ವಸ್ತುಗಳನ್ನು ವಾಪಸ್‌ ಪಡೆದುಕೊಳ್ಳಲು ಆಗಮಿಸಿದ್ದವರು, ಪೊಲೀಸರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರಲ್ಲದೇ ತಮ್ಮ ವಸ್ತುಗಳನ್ನು ನೋಡುತ್ತಿದ್ದಂತೆ ಭಾವುಕರಾದರು. ನಿಟ್ಟುಸಿರು ಬಿಟ್ಟರು.

ನಗರದ ಪೊಲೀಸ್‌ ಘಟಕವು ನಗರದಲ್ಲಿ 2022ನೇ ಸಾಲಿನಲ್ಲಿ 320 ಕಳವು ಪ್ರಕರಣಗಳನ್ನು ಭೇದಿಸಿದ್ದು, 4.6 ಕೆ.ಜಿ ಚಿನ್ನ ಸೇರಿದಂತೆ ₹ 3.55 ಕೋಟಿ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಿಂದುರುಗಿಸಿತು. ನಗರ ಪೊಲೀಸ್‌ ಕಮಿಷನರ್‌ ರಮೇಶ್‌ ಬಾನೋತ್‌ ಸಿಬ್ಬಂದಿಯನ್ನು ಶ್ಲಾಘಿಸಿದರು.

ADVERTISEMENT

ನಂತರ ಮಾತನಾಡಿದ ಅವರು, ‘ಪ್ರಸಕ್ತ ವರ್ಷ 752 ಪ್ರಕರಣ ದಾಖಲಾಗಿದ್ದು, ₹ 6.34 ಕೋಟಿ ಮೌಲ್ಯದ ವಸ್ತು ಕಳವಾಗಿದ್ದವು. 320 ಪ್ರಕರಣಗಳಲ್ಲಿ 346 ಆರೋಪಿಗಳನ್ನು ಬಂಧಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ರೌಡಿ ಶೀಟರ್‌ಗಳ ಮನೆ ಮೇಲೆ ಅನಿರೀಕ್ಷಿತ ದಾಳಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ನಗರವನ್ನು ಮಾದಕ ವಸ್ತು ಮುಕ್ತ ನಗರ ಮಾಡಲು ಕಾರ್ಯಾಚರಣೆ ನಿರಂತರ ನಡೆಸಲಾಗಿದೆ. ಈ ಹಿಂದೆ ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ಬಗ್ಗೆ ಮಾಹಿತಿ ಕಲೆ ಹಾಕಿ ಅವರ ಮೇಲೆ ನಿಗಾ ಇಡಲಾಗಿದೆ. 33 ಪ್ರಕರಣ ದಾಖಲಾಗಿದ್ದು, 61 ಆರೋಪಿಗಳನ್ನು ಬಂಧಿಸಲಾಗಿದೆ. ₹22.30 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.

‘ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಗಿದೆ. ನಿಯಮ ಉಲ್ಲಂಘಿಸಿದ 593 ಚಾಲನಾ ಪರವಾನಗಿ ರದ್ದಿಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

‘ಸೈಬರ್‌ ಅಪರಾಧ ಪ್ರಕರಣಗಳ ಭೇದಿಸಿದರುವ ನಜರಾಬಾದ್‌ನ ಸೆನ್‌ ಠಾಣೆ ಪೊಲೀಸರು ₹ 1 ಕೋಟಿ ನಗದನ್ನು ವಾರಸುದಾರರಿಗೆ ವಾಪಸ್‌ ಮಾಡಿದ್ದಾರೆ. ಹಣ ಕಳೆದುಕೊಂಡಾಗ ಪೊಲೀಸ್‌ ಕಂಟ್ರೋಲ್‌ ರೂಂ 1930, 112ಗೆ ಕರೆ ಮಾಡಬೇಕು’ ಎಂದು ತಿಳಿಸಿದರು.

ಧೈರ್ಯಕ್ಕೆ ಮೆಚ್ಚುಗೆ: ವಿದ್ಯಾರಣ್ಯಪುರಂನಲ್ಲಿರುವ ಎಂಎಸ್ಸಿ ವಿದ್ಯಾರ್ಥಿನಿ ಸೌಮ್ಯಾ ಐವರು ಕಳ್ಳರನ್ನು ಪೊಲೀಸರಿಗೆ ಹಿಡಿದುಕೊಟ್ಟ ಸಾಹಸವನ್ನು ಪ್ರಶಂಸಿಸಲಾಯಿತು. ಜ.9ರಂದು ಸರಗಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲು ನೆರವಾಗಿದ್ದರು.

ಡಿಸಿಪಿಗಳಾದ ಎಂ.ಮುತ್ತುರಾಜು, ಎಂ.ಎಸ್‌.ಗೀತಾ, ಶಿವರಾಜು, ಎಸಿಪಿಗಳಾದ ಶಶಿಧರ, ಗಂಗಾಧರಸ್ವಾಮಿ, ಪರಶುರಾಮಪ್ಪ, ಶಿವಶಂಕರ್‌, ಅಶ್ವತ್ಥನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.