ADVERTISEMENT

ಕಡಿಮೆ ಬೆಲೆಗೆ ಚಿನ್ನದ ಆಮಿಷ; ₹ 23.50 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 3:40 IST
Last Updated 6 ಜನವರಿ 2021, 3:40 IST

ಮೈಸೂರು: ಆರ್‌ಬಿಐ ಡೀಲರ್ ಎಂದು ಪರಿಚಯಿಸಿಕೊಂಡು, ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ಆಸೀಂ ಅವರನ್ನು ನಂಬಿಸಿದ ವ್ಯಕ್ತಿಯೊಬ್ಬ ₹ 23.50 ಲಕ್ಷ ಪಡೆದು ಪರಾರಿಯಾಗಿದ್ದಾನೆ. ಯೂಸುಫ್ ಆಜಿ ಹಣದೊಂದಿಗೆ ಪರಾರಿಯಾದ ಆರೋಪಿ.

ಒಂದು ತಿಂಗಳ ಹಿಂದೆಯಷ್ಟೇ ಸ್ನೇಹಿತರೊಬ್ಬರಿಂದ ಆಸೀಂ ಅವರಿಗೆ ಆರೋಪಿ ಯೂಸುಫ್‌ ಆಜಿ ಅವರ ಪರಿಚಯವಾಗಿತ್ತು. ತಾನೊಬ್ಬ ಆರ್‌ಬಿಐ ಡೀಲರ್ ಎಂದು ಹೇಳಿಕೊಂಡ ಆರೋಪಿ ಕಡಿಮೆ ಬೆಲೆಗೆ ಹೆಚ್ಚಿನ ಮೌಲ್ಯದ ಚಿನ್ನ ಕೊಡಿಸುವುದಾಗಿ ನಂಬಿಸಿದ.

ಇಲ್ಲಿನ ವಿ.ವಿ.ಪುರಂನ ಎಚ್‌ಡಿಎಫ್‌ಸಿ ಬ್ಯಾಂಕಿನ ಬಳಿ ಹಣದೊಂದಿಗೆ ಬರುವಂತೆ ಹೇಳಿದ ಈತ, ಬ್ಯಾಂಕಿಗೆ ಹಣದ ನೋಟುಗಳ ವಿವರಗಳನ್ನು ನೀಡಬೇಕು ಎಂದು ₹ 23.50 ಲಕ್ಷ ಇದ್ದ ಹಣದ ಬ್ಯಾಗನ್ನು ತೆಗೆದುಕೊಂಡು ಬ್ಯಾಂಕಿನ ಒಳಗೆ ಹೋಗಿದ್ದಾನೆ. ನಂತರ, ಈತ ಬ್ಯಾಂಕಿನ ಮತ್ತೊಂದು ದ್ವಾರದ ಮೂಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಮೊಬೈಲ್ ಸುಲಿಗೆ ಮಾಡುತ್ತಿದ್ದ ಆರೋಪಿ ಬಂಧನ‌

ಮೊಬೈಲ್ ಸುಲಿಗೆ ಮಾಡುತ್ತಿದ್ದ ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿ ಇಲ್ಲಿನ ಗೌಸಿಯಾನಗರದ ನಿವಾಸಿ ಸೈಯದ್ ವಾಸೀಂ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ ₹ 1.30 ಲಕ್ಷ ಮೌಲ್ಯದ 4 ಮೊಬೈಲ್‌ಗಳು ಹಾಗೂ 3 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈತ ಡಿ. 31ರಂದು ರಮಾವಿಲಾಸ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಹಿಂಬದಿಯಿಂದ ಸ್ಕೂಟರ್‌ನಲ್ಲಿ ಬಂದು ಮೊಬೈಲ್‌ನ್ನು ಕಿತ್ತುಕೊಂಡು ಪರಾರಿಯಾಗಿದ್ದ. ನಂತರ, ತೀವ್ರತರವಾದ ಹುಡುಕಾಟ ನಡೆಸಿದಾಗ ಆರೋಪಿಯು ಗೌಸಿಯಾನಗರದ ಉಸ್ಮಾನಿಯ ಬ್ಲಾಕ್‌ನಲ್ಲಿ ಈತ ಸಿಕ್ಕಿಬಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದೇವರಾಜ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ದಿವಾಕರ್, ಪಿಎಸ್‌ಐ ಲೀಲಾವತಿ, ಎಎಸ್‌ಐ ಉದಯಕುಮಾರ್, ಸಿಬ್ಬಂದಿ ಸೋಮಶೆಟ್ಟಿ, ವೇಣುಗೋಪಾಲ, ಸುರೇಶ್, ನಂದೀಶ್, ಪ್ರದೀಪ್, ವಿರೇಶ್ ಬಾಗೇವಾಡಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಅಪಘಾತ; ವ್ಯಕ್ತಿ ಸಾವು

ಮೈಸೂರು: ತಾಲ್ಲೂಕಿನ ಮೆಣಸಿಕ್ಯಾತನಹಳ್ಳಿ ಸಮೀಪ ಬೈಕ್ ಮತ್ತು ಬೊಲೆರೊ ವಾಹನದ ಮಧ್ಯೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಬನ್ನೂರಿನ ನಿವಾಸಿ ಕೃಷ್ಣೇಗೌಡ ಮೃತಪಟ್ಟಿದ್ದಾರೆ.‌‌

ಇವರು ತಮ್ಮ ಬೈಕ್‌ನಲ್ಲಿ ಮೈಸೂರಿನಿಂದ ಬನ್ನೂರಿನ ಕಡೆಗೆ ಹೋಗುವಾಗ ಎದುರಿಗೆ ಬಂದ ಬೊಲೆರೊ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರುಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.