ADVERTISEMENT

ಗೊಮ್ಮಟಗಿರಿ: ಬಾಹುಬಲಿಗೆ ಮಹಾಮಸ್ತಕಾಭಿಷೇಕ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 6:24 IST
Last Updated 12 ಡಿಸೆಂಬರ್ 2024, 6:24 IST
ಬಿಳಿಕೆರೆ ಹೋಬಳಿಯ ಬೆಟ್ಟದೂರು ಗ್ರಾಮದ ಗೊಮ್ಮಟಗಿರಿ ಬೆಟ್ಟದಲ್ಲಿ ನೆಲೆ ನಿಂತಿರುವ ಭಗವಾನ್ ಬಾಹುಬಲಿ
ಬಿಳಿಕೆರೆ ಹೋಬಳಿಯ ಬೆಟ್ಟದೂರು ಗ್ರಾಮದ ಗೊಮ್ಮಟಗಿರಿ ಬೆಟ್ಟದಲ್ಲಿ ನೆಲೆ ನಿಂತಿರುವ ಭಗವಾನ್ ಬಾಹುಬಲಿ   

ಬಿಳಿಕೆರೆ: ಹೋಬಳಿಯ ಬೆಟ್ಟದೂರು ಗ್ರಾಮದ ಗೊಮ್ಮಟಗಿರಿ ಬೆಟ್ಟದಲ್ಲಿ ನೆಲೆ ನಿಂತಿರುವ ಭಗವಾನ್ ಬಾಹುಬಲಿಗೆ 75ನೇ ಮಹಾಮಸ್ತಕಾಭಿಷೇಕ ಹಾಗೂ ಜಾತ್ರೆ ಡಿ.12ರಿಂದ 15ರವರೆಗೆ ನಡೆಯಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ವಿವಿಧೆಡೆಯಿಂದ ಭಕ್ತರು ಈಗಾಗಲೇ ಬೆಟ್ಟಕ್ಕೆ ಬರುತ್ತಿದ್ದು, ಅವರಿಗೆ ಅಗತ್ಯವಿರುವ ಸೌಕರ್ಯವನ್ನು ಗೊಮ್ಮಟಗಿರಿ ಸೇವಾ ಸಮಿತಿ ಪದಾಧಿಕಾರಿಗಳು ಕಲ್ಪಿಸುತ್ತಿದ್ದಾರೆ.

‘ಡಿ.12ರಂದು ಪೂರ್ವಭಾವಿ ಸಭೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಡಿ.13, 14 ಹಾಗೂ 15ರಂದು ಬೆಳಿಗ್ಗೆ 11ಕ್ಕೆ ಮಹಾಮಸ್ತಕಾಭಿಷೇಕ ಜರುಗಲಿದೆ. ಡಿ.13ರಂದು ಬೆಳಿಗ್ಗೆ 10.30ಕ್ಕೆ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಅಭಿನವ ಚಾರುಕೀರ್ತಿ ಸ್ವಾಮೀಜಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಕಾರ್ಯಕ್ರಮ ಉದ್ಘಾಟಿಸುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಸಚಿವ ಡಿ.ಸುಧಾಕರ್ ಪಾಲ್ಗೊಳ್ಳಲಿದ್ದು, ಶಾಸಕ ಜಿ.ಡಿ.ಹರೀಶ್‌ಗೌಡ ಅಧ್ಯಕ್ಷತೆ ವಹಿಸುವರು’ ಎಂದು ಸಮಿತಿ ಅಧ್ಯಕ್ಷ ಮನ್ಮಥ್‌ ರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಡಿ.14ರಂದು ಮಧ್ಯಾಹ್ನ ಅಮೃತ ಕುಟೀರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸುವರು. ಸಚಿವ ಡಿ.ಸುಧಾಕರ್ ಅಧ್ಯಕ್ಷತೆ ವಹಿಸುವರು. 15ರಂದು ಸಭಾಂಗಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವರು. ಬಾಹುಬಲಿಗೆ ಎಳನೀರು, ಕಬ್ಬಿನಹಾಲು, ಹಾಲು, ಮೊಸರು, ಶ್ರೀಗಂಧ, ಕಷಾಯ, ಅರಿಸಿನ ಮೊದಲಾದ ದ್ರವ್ಯಗಳಿಂದ ಮಹಾ ಮಸ್ತಕಾಭಿಷೇಕ ನಡೆಯಲಿದೆ. ಕೆಎಸ್‌ಆರ್‌ಟಿಸಿಯಿಂದ ಕ್ಷೇತ್ರಕ್ಕೆ ವಿಶೇಷ ಬಸ್ ವ್ಯವಸ್ಥೆಯೂ ಇರಲಿದೆ’ ಎಂದರು.

ಏಕಶಿಲೆಯ ಬಾಹುಬಲಿ:

ಗೊಮ್ಮಟಗಿರಿ ಕ್ಷೇತ್ರ ಜೈನರಿಗೆ ಪವಿತ್ರ ತಾಣ. ಪ್ರವಾಸಿಗರಿಗೆ ಪ್ರವಾಸಿ ತಾಣ. ಪ್ರತಿ ದಿನ ಇಲ್ಲಿಗೆ ನೂರಾರು ಪ್ರವಾಸಿಗರು ಮತ್ತು ಜೈನಭಕ್ತರು ಭೇಟಿ ನೀಡುತ್ತಾರೆ. ಇಲ್ಲಿನ ಗೊಮ್ಮಟೇಶ್ವರ ಮೂರ್ತಿಗೆ ಸುಮಾರು ಎಂಟು ಶತಮಾನಗಳ ಇತಿಹಾಸವಿದೆ. 200 ಅಡಿ ಎತ್ತರ, 250 ಅಡಿ ಅಗಲದ ಹೆಬ್ಬಂಡೆಯಲ್ಲಿ 16 ಅಡಿ ಎತ್ತರದ ಏಕಶಿಲೆಯಲ್ಲಿ ಗೊಮ್ಮಟೇಶ್ವರನನ್ನು ನಿರ್ಮಿಸಲಾಗಿದೆ.

ಈ ಮೂರ್ತಿ ಬಳಿಗೆ ತಲುಪಬೇಕಾದರೆ ಹೆಬ್ಬಂಡೆಯ ಸುಮಾರು 90 ಮೆಟ್ಟಿಲನ್ನು ಹತ್ತಿ ಸಾಗಬೇಕು. ಈ ಗೊಮ್ಮಟೇಶ್ವರನ ನಿರ್ಮಾಣದ ಕುರಿತು ಯಾವುದೇ ಶಾಸನಗಳು ಲಭ್ಯವಾಗಿಲ್ಲ. ಹೀಗಾಗಿ, ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಸಂದರ್ಭದಲ್ಲಿ ಗಂಗರಸರು ಈ ಮೂರ್ತಿಯನ್ನು ನಿರ್ಮಿಸಿರಬಹುದೆಂದು ಕೆಲವರು ಹೇಳಿದರೆ, ಶ್ರವಣಬೆಳಗೊಳದ ಗೊಮ್ಮಟೇಶ್ವರನ ಮೂರ್ತಿ ಕೆತ್ತಿದ ಚಾವುಂಡರಾಯನೇ ಇದನ್ನು ಕೆತ್ತಿರಬಹುದೆಂದು ಮತ್ತೆ ಕೆಲವರು ಹೇಳುತ್ತಾರೆ.

ಜೈನ ತೀರ್ಥಂಕರರ ಸಾಂಪ್ರದಾಯಿಕ ಚಿಹ್ನೆಯಾದ ಹಾವು ಬಾಹುಬಲಿಯ ಪಾದತಳದಿಂದ ಮುಡಿಯವರೆಗೆ ಆವರಿಸಿದೆ. ಕಪ್ಪು ಶಿಲೆಯಿಂದ ಕೆತ್ತಲ್ಪಟ್ಟಿರುವ ಮೂರ್ತಿ ಆಕರ್ಷಕವಾಗಿದೆ. ಪ್ರಶಾಂತತೆ ಮೊಗದಲ್ಲಿ ಕಾಣಿಸುತ್ತದೆ. ಇಲ್ಲಿನ ಬೆಟ್ಟದ ತಪ್ಪಲಿನ ಬಲಭಾಗದಲ್ಲಿ ವರ್ಧಮಾನ ಕಾಲದ 24 ಜೈನ ತೀರ್ಥಂಕರರ ಕೂಟಗಳು, ಎಡಭಾಗದಲ್ಲಿ ಕುಂದಾಚಾರ್ಯರ ದ್ವಿಸಹಸ್ರಾಬ್ದಿ ಜ್ಞಾಪಕಾರ್ಥವಾಗಿ ನಿರ್ಮಿಸಿರುವ ಪಾದ ಕೂಟ ಹಾಗೂ ಪಕ್ಕದಲ್ಲೇ ಜಲಮಂದಿರವೂ ಇರುವುದು ಗಮನಾರ್ಹವಾಗಿದೆ.

ಗೊಮ್ಮಟಗಿರಿ ಬೆಟ್ಟದ ಕೆಳಭಾಗದಲ್ಲಿ ನಿರ್ಮಾಣಗೊಂಡಿರುವ ಅತಿಥಿ ಗೃಹಗಳು ಉದ್ಘಾಟನೆಗೆ ಸಿದ್ಧವಾಗಿವೆ

ಗೊಮ್ಮಟಗಿರಿ ಕ್ಷೇತ್ರಕ್ಕೆ ತೆರಳುವುದು ಹೇಗೆ?

ಗೊಮ್ಮಟಗಿರಿ ಕ್ಷೇತ್ರಕ್ಕೆ ಮೈಸೂರು ಕಡೆಯಿಂದ ತೆರಳುವವರು ಮೈಸೂರಿನಿಂದ ಹುಣಸೂರು ರಸ್ತೆಯಲ್ಲಿ ತೆರಳಿ ಇಲವಾಲ ದಾಟಿ ಮುಂದೆ ಸಾಗಿದರೆ ಬಲಬದಿಯಲ್ಲಿ ಗೊಮ್ಮಟಗಿರಿಗೆ ತೆರಳುವ ಮಾರ್ಗ ಸಿಗುತ್ತದೆ. ಅಲ್ಲಿಂದ ಸಾಗಿದರೆ ಕ್ಷೇತ್ರವನ್ನು ತಲುಪಬಹುದು. ಮಂಗಳೂರು ಕೊಡಗು ಹಾಸನ ಕಡೆಯಿಂದ ಬರುವವರು ಬಿಳಿಕೆರೆ ದಾಟಿ ಮುಂದೆ ಬಂದರೆ ಮನುಗನಹಳ್ಳಿ ಬಳಿ ಎಡಕ್ಕೆ ಗೊಮ್ಮಟಗಿರಿ ಕ್ಷೇತ್ರಕ್ಕೆ ಹೋಗುವ ಸ್ವಾಗತ ಫಲಕ ಕಾಣಿಸುತ್ತದೆ. ಆ ರಸ್ತೆಯಲ್ಲಿ ಸಾಗಿದರೆ ಕ್ಷೇತ್ರವನ್ನು ತಲುಪಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.