ADVERTISEMENT

ಆಡಳಿತ ಕನ್ನಡಕ್ಕೆ ಉತ್ತಮ ಸ್ಪಂದನೆ

ಕೆಎಸ್‌ಒಯು ಕೌಶಲಾಭಿವೃದ್ಧಿ ತರಬೇತಿ ಯೋಜನೆಯಡಿ ವಿವಿಧ ಕೋರ್ಸ್‌ಗಳು

​ಪ್ರಜಾವಾಣಿ ವಾರ್ತೆ
Published 27 ಮೇ 2019, 19:34 IST
Last Updated 27 ಮೇ 2019, 19:34 IST
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ   

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ದಲ್ಲಿ 2018–19ನೇ ಸಾಲಿಗೆ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ ಆಡಳಿತ ಕನ್ನಡ ಪತ್ರಿಕೆಗೆ ರಾಜ್ಯದಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದೆ.

2018–19ನೇ ಸಾಲಿಗೆ ಒಟ್ಟು 12 ಸಾವಿರ ವಿದ್ಯಾರ್ಥಿಗಳು ನೋಂದಾಯಿ ಸಿಕೊಂಡಿದ್ದರು. ‘ಕೆಎಸ್‌ಒಯು’ಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಾನ್ಯತೆ ನೀಡಿದ ಬಳಿಕ, ದಾಖಲಾಗಿದ್ದ ಮೊದಲ ಸಾಲಿನ ವಿದ್ಯಾರ್ಥಿಗಳಿವರು. ಮಾನ್ಯತೆ ಸಿಕ್ಕ ಬಳಿಕ ವಿದ್ಯಾರ್ಥಿಗಳನ್ನು ಆಕರ್ಷಿಸಲು ವಿ.ವಿ ಅನುಷ್ಠಾನಗೊಳಿಸಿದ್ದ ಈ ಯೋಜನೆಯು ಫಲ ನೀಡಿದೆ. ವಿದ್ಯಾರ್ಥಿಗಳು ಈ ತರಬೇತಿಗಾಗಿ ಆಸಕ್ತಿ ತೋರಿಸಿದ್ದಾರೆ.

ವಿ.ವಿ.ಯು ಆಡಳಿತ ಕನ್ನಡ, ಸಂವಹನ ಇಂಗ್ಲಿಷ್‌ ಹಾಗೂ ಜೀವನ ಕಲೆ, ವೆಬ್‌ ಡಿಸೈನಿಂಗ್, ಕಂಪ್ಯೂಟರ್‌ ಶಿಕ್ಷಣ, ಡೆಸ್ಕ್‌ ಟಾಪ್‌ ಪಬ್ಲಿಷಿಂಗ್, ಮಲ್ಟಿಮೀಡಿಯಾ ಹಾಗೂ ನೆಟ್‌ವರ್ಕಿಂಗ್‌ ವಿಷಯಗಳಿಗೆ ತರಬೇತಿ ನೀಡುವುದಾಗಿ ಪ್ರಕಟಿಸಿತ್ತು. ಈ ಪೈಕಿ, ಆಡಳಿತ ಕನ್ನಡವನ್ನು 2,280 ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿದ್ದಾರೆ.

ADVERTISEMENT

ಆಡಳಿತ ಕನ್ನಡಕ್ಕೇ ಏಕೆ ಆಸಕ್ತಿ?: ರಾಜ್ಯ ಸರ್ಕಾರದ ಹುದ್ದೆಗಳಿಗೆ ಆಯ್ಕೆಯಾಗಬೇಕಾದರೆ ಆಡಳಿತ ಕನ್ನಡ ಪತ್ರಿಕೆಯನ್ನು ಕೇಳಲಾಗುತ್ತದೆ. ಕೆಎಸ್‌ಒಯುವಿನಲ್ಲಿ ಕೌಶಲಾಭಿವೃದ್ಧಿ ತರಬೇತಿಯಲ್ಲಿ ಈ ವಿಷಯವೂ ಇದ್ದು, ಪ್ರಮಾಣಪತ್ರವನ್ನೂ ನೀಡುವ ಕಾರಣ, ಹೆಚ್ಚಿನ ವಿದ್ಯಾರ್ಥಿಗಳು ಈ ವಿಷಯವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

31,270 ಮಂದಿ ವೀಕ್ಷಣೆ: ‘ಕೆಎಸ್‌ಒಯು’ ವೆಬ್‌ಸೈಟ್‌ನ್ನು 2019–20ನೇ ಸಾಲಿನ ದಾಖಲಾತಿ ಅರ್ಜಿ ಆಹ್ವಾನ ಬಳಿಕ 31,270 ಮಂದಿ ವೀಕ್ಷಿಸಿದ್ದಾರೆ. ಈ ಪೈಕಿ 77 ಮಂದಿ ಈಗಾಗಲೇ ಪೂರ್ಣ ಶುಲ್ಕ ನೀಡಿ ವಿವಿಧ ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ. 759 ಮಂದಿ ನೋಂದಣಿ ಶುಲ್ಕ ಪಾವತಿಸಿದ್ದಾರೆ. ಕಳೆದ ಬಾರಿಗಿಂತಲೂ ಹೆಚ್ಚಿನ ದಾಖಲಾತಿ ಆಗುವುದು ಖಚಿತ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.