ADVERTISEMENT

ಸರ್ಕಾರಿ ನೌಕರರ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆ ರಸದೌತಣ

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಮಟ್ಟದ ಕೂಟ ಆರಂಭ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 8:06 IST
Last Updated 20 ಡಿಸೆಂಬರ್ 2022, 8:06 IST
ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉದ್ಘಾಟಿಸಿದರು/ ಪ್ರಜಾವಾಣಿ ಚಿತ್ರ
ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉದ್ಘಾಟಿಸಿದರು/ ಪ್ರಜಾವಾಣಿ ಚಿತ್ರ   

ಮೈಸೂರು: ದೈಹಿಕ ಸದೃಢತೆ ಹೆಚ್ಚಿಸುವ ಕ್ರೀಡೆ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಾಜ್ಯ ನೌಕರರ ಸಂಘದ ಜಿಲ್ಲಾ ಮಟ್ಟದ ಕೂಟ ಸಾಕ್ಷಿಯಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಕ್ರೀಡಾ ಹಾಗೂ ಕಲಾಪ್ರೇಮಿಗಳು ಸಮಾಗಮಗೊಂಡಿದ್ದರು. ಗುಂಪು ಕ್ರೀಡೆ ಮತ್ತು ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆದರೆ, ವೇದಿಕೆಯಲ್ಲಿ ಸಾಂಸ್ಕೃತಿಕ ಸೊಬಗು ಮೇಳೈಸಿತು.

ಉದ್ಘಾಟನೆ: ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉದ್ಘಾಟಿಸಿದರು.

ADVERTISEMENT

ಮೇಯರ್‌ ಶಿವಕುಮಾರ್ ಮಾತನಾಡಿ, ‘ಸರ್ಕಾರಿ ವೃತ್ತಿಯಲ್ಲಿರುವವರು ಸದಾ ಒತ್ತಡದಿಂದ ಕೆಲಸ ನಿರ್ವಹಿಸುತ್ತಾರೆ. ಅವರು ಎಲ್ಲರಂತೆ ಮನುಷ್ಯರು, ಆರೋಗ್ಯದ ಬಗೆಗೆ ಅವರೂ ಅಗತ್ಯ ಕಾಳಜಿ ವಹಿಸಬೇಕು’ ಎಂದು ಸಲಹೆ ನೀಡಿದರು.

ಉಪಮೇಯರ್ ಡಾ.ಜಿ.ರೂಪಾ, ನಗರಪಾಲಿಕೆ ಸದಸ್ಯ ಸತ್ಯರಾಜು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್.ಪೂರ್ಣಿಮಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಆರ್.ರೋಹಿತ್ ಗಂಗಾಧರ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ರೇವಣ್ಣ ಇದ್ದರು.

ಸ್ಪರ್ಧೆಗಳು:

ಮೊದಲ ದಿನ ಪುರುಷರು ಮತ್ತು ಮಹಿಳೆಯರಿಗೆ 5,000 ಮೀ., 1,500 ಮೀ., 800 ಮೀ., 400 ಮೀ., 200 ಮೀ., 100 ಮೀ. ಓಟದ ಸ್ಪರ್ಧೆ, ಗುಂಡು ಎಸೆತ, ಉದ್ದ ಜಿಗಿತ, ಭರ್ಜಿ ಎಸೆತ, 400 ಮೀ. ಮತ್ತು 100 ಮೀ. ಅಡೆತಡೆ ಓಟ, 4x100 ಮೀ. ರಿಲೇ ಸ್ಪರ್ಧೆಗಳು ನಡೆದವು.

ಸಾಂಸ್ಕೃತಿಕ ಸ್ಪರ್ಧಾ ವಿಭಾಗದಲ್ಲಿ ಹಿಂದೂಸ್ತಾನಿ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ, ಜಾನಪದ ಗೀತೆ, ಜಾನಪದ ನೃತ್ಯ, ಕಥಕ್, ಮಣಿಪುರಿ, ಕುಚುಪುಡಿ, ಕಥಕಳಿ, ಒಡಿಸ್ಸಿ, ಭರತನಾಟ್ಯ, ಸ್ಟ್ರಿಂಗ್ ವಾದ್ಯ, ವಿಂಡ್ ವಾದ್ಯ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.