ADVERTISEMENT

‘ಸರ್ಕಾರಿ ಶಾಲೆ ಉನ್ನತಿಗೆ ಸರ್ಕಾರ ಬದ್ಧ’

ಉಪ್ಪಾರಗೇರಿ; ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ ಉದ್ಘಾಟಿಸಿದ ಸಚಿವ ಕೆ.ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 5:12 IST
Last Updated 24 ಜುಲೈ 2025, 5:12 IST
ಪಿರಿಯಾಪಟ್ಟಣದ ಉಪ್ಪಾರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಯನ್ನು ಸಚಿವ ಕೆ.ವೆಂಕಟೇಶ್ ಉದ್ಘಾಟಿಸಿದರು,
ಪಿರಿಯಾಪಟ್ಟಣದ ಉಪ್ಪಾರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಯನ್ನು ಸಚಿವ ಕೆ.ವೆಂಕಟೇಶ್ ಉದ್ಘಾಟಿಸಿದರು,   

ಪಿರಿಯಾಪಟ್ಟಣ: 'ಇಂಗ್ಲಿಷ್ ಭಾಷೆಯಿಂದ ಮಾತ್ರ ಎಲ್ಲವೂ ಸಾಧ್ಯ ಎಂಬ ಭ್ರಮೆಯಲ್ಲಿ ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗುತ್ತಿರುವುದು ಬೇಸರ ಮೂಡಿಸಿದೆ’ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಪಟ್ಟಣದ ಉಪ್ಪಾರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ‘ಸರ್ಕಾರ ಬಡವರ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಲಭ್ಯಗಳು, ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರೂ ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ, ಪೋಷಕರಿಗೆ ಅರಿವು ಮೂಡಿಸಲು ಶಿಕ್ಷಕರು ಆಸಕ್ತಿ ವಹಿಸಬೇಕು’ ಎಂದರು.

ತಾಲ್ಲೂಕಿನ ಹುಣಸವಾಡಿ ಗ್ರಾಮ ಪಂಚಾಯಿತಿ ನಿರ್ಮಿಸಿರುವ ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ, ‘ಮುಂದಿನ ದಿನಗಳಲ್ಲಿ ಪ್ರತಿಯೊಂದು ಪಂಚಾಯಿತಿ ಮಟ್ಟದಲ್ಲಿ ಜನರಿಗೆ ಮೂಲ ಸೌಕರ್ಯಗಳ ಸಮಸ್ಯೆಗಳನ್ನು ತಕ್ಷಣ ಆಲಿಸಿ ಪರಿಹರಿಸಿದ್ದೇ ಆದರೆ ತೆರಿಗೆಯನ್ನು ಸಕಾಲಕ್ಕೆ ಪಾವತಿಸಲು ಜನರು ಸ್ಪಂದಿಸುತ್ತಾರೆ’ ಎಂದರು.

ADVERTISEMENT

‘ಹಳ್ಳಿಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಹಲವಾರು ಯೋಜನೆಗಳು ತಂದಿದ್ದು, ಪಿಡಿಒಗಳು ಇದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ತಲುಪಿಸಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಎಲ್ಲರೂ ಪಕ್ಷಬೇಧ ಮರೆತು ಕಾರ್ಯ ನಿರ್ವಹಿಸಿದರೆ ಸರ್ಕಾರಕ್ಕೂ ಜನರಿಗೂ ಸಹಾಯವಾಗುತ್ತದೆ’ ಎಂದರು.

ತಹಶೀಲ್ದಾರ್ ನಿಸರ್ಗ ಪ್ರಿಯ, ತಾ.ಪಂ.ಇಒ ಸುನಿಲ್ ಕುಮಾರ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಮೈಮುಲ್ ನಿರ್ದೇಶಕ ಪ್ರಕಾಶ್, ಎಂಡಿಸಿಸಿ ಬ್ಯಾಂಕ್ ನಿರ್ದೆಶಕ ಈ.ಪಿ.ಲೋಕೇಶ್, ಪುರಸಭಾ ಮಾಜಿ ಅಧ್ಯಕ್ಷ ಪಿ.ಎಸ್.ವಿಷಕಂಠಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಖಜಾಂಚಿ ಬಿ.ಜೆ.ಬಸವರಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.