ADVERTISEMENT

ಹುಣಸೂರು | ಸರ್ಕಾರಿ ನಿವೇಶನ ಹಿಂಪಡೆಯದ್ದಕ್ಕೆ ಆಕ್ಷೇಪ

ಲೋಕಾಯುಕ್ತ ಸಾರ್ವಜನಿಕ ಕುಂದು ಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 6:34 IST
Last Updated 11 ಸೆಪ್ಟೆಂಬರ್ 2025, 6:34 IST
ಹುಣಸೂರು ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಲೋಕಾಯುಕ್ತ ಸಾರ್ವಜನಿಕ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ಸಾರ್ವಜನಿಕರು ಅಹವಾಲನ್ನು ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್‌ ಅವರಿಗೆ ನೀಡಿದರು. ತಹಶೀಲ್ದಾರ್‌ ಮಂಜುನಾಥ್‌, ಇಒ ಹೊಂಗಯ್ಯ ಇದ್ದಾರೆ.
ಹುಣಸೂರು ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಲೋಕಾಯುಕ್ತ ಸಾರ್ವಜನಿಕ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ಸಾರ್ವಜನಿಕರು ಅಹವಾಲನ್ನು ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್‌ ಅವರಿಗೆ ನೀಡಿದರು. ತಹಶೀಲ್ದಾರ್‌ ಮಂಜುನಾಥ್‌, ಇಒ ಹೊಂಗಯ್ಯ ಇದ್ದಾರೆ.   

ಹುಣಸೂರು: ಸರ್ಕಾರಿ ನಿವೇಶನವನ್ನು ಕಾನೂನು ಬಾಹಿರವಾಗಿ ಒಕ್ಕಲಿಗ ಸಮುದಾಯ ಭವನಕ್ಕೆ ಗ್ರಾಮ ಪಂಚಾಯಿತಿ ನೀಡಿರುವ ಬಗ್ಗೆ ತಕರಾರು ಅರ್ಜಿ ಸಲ್ಲಿಸಿ ವಿಚಾರಣೆ ನಡೆಸಿದ ಬಳಿಕ ಸರ್ಕಾರಕ್ಕೆ ಹಿಂಪಡೆಯುವಂತೆ ಆದೇಶವಿದ್ದರೂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ತನಿಖೆ ನಡೆಸಬೇಕು ಎಂದು  ಬಿಳಿಕೆರೆ ಗ್ರಾಮದ ನಿವಾಸಿ ಕೆಂಪರಾಜ್‌ ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್‌ ಅವರಿಗೆ ಮನವಿ ಮಾಡಿದರು.

ಬುಧವಾರ ಇಲ್ಲಿ ನಡೆದ ಲೋಕಾಯುಕ್ತ ಸಾರ್ವಜನಿಕ ದೂರು ಸ್ವೀಕಾರ ಸಭೆಯಲ್ಲಿ ಅಧಿಕಾರಿಗಳಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದ ಕೆಂಪರಾಜ್‌, ‘10 ವರ್ಷದಿಂದ ಸರ್ಕಾರಿ ನಿವೇಶನವನ್ನು ಒಂದು ಸಮುದಾಯಕ್ಕೆ ಕಾನೂನು ಬಾಹಿರ ನೀಡಿರುವ ಬಗ್ಗೆ ಕಾನೂನು ಹೋರಾಟ ನಡೆಸಿದ್ದೇನೆ.  ನಿವೇಶನ ಹಿಂಪಡೆಯಬೇಕು ಎಂದು ಆದೇಶವಿದ್ದರೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ’ ಎಂದು ದೂರಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಾಣಾಧಿಕಾರಿ ಹೊಂಗಯ್ಯ ಉತ್ತರಿಸಿ, ‘ಸೆ.16ರಂದು ತಾ.ಪಂ. ನ್ಯಾಯಾಲಯ ಕಲಾಪವಿದ್ದು ಅಂದು ಕಾನೂನು ಬದ್ಧವಾಗಿ ಕ್ರಮವಹಿಸಿ ನಿವೇಶನ ಹಿಂಪಡೆಯಲು ಕ್ರಮವಹಿಸುತ್ತೇನೆ’ ಎಂದು ತಿಳಿಸಿದರು.

ADVERTISEMENT

‘ರಾಷ್ಟ್ರೀಯ ಹೆದ್ದಾರಿ 275 ರ ಬದಿಗಗಳಲ್ಲಿ ಅಕ್ರಮ ಅಂಗಡಿಗಳು ತಲೆ ಎತ್ತುತ್ತಿದ್ದು, ಸೆಸ್ಕ್‌ ಈ ಮಳಿಗೆಗೆ ವಿದ್ಯುತ್‌ ಸಂಪರ್ಕ ನೀಡುತ್ತಿದೆ.  ಹೆದ್ದಾರಿಯಲ್ಲಿ ನಿರ್ದಿಷ್ಟ ಅಂತರದಲ್ಲಿ  ಕಟ್ಟಡ ನಿರ್ಮಿಸುವಂತಿಲ್ಲ ಎಂಬ ಕಾನೂನು ಇದ್ದರೂ ಉಲ್ಲಂಘಿಸಿದ್ದಾರೆ.  ಅಪಘಾತಗಳು ಹೆಚ್ಚಾಗುತ್ತಿದ್ದು, ಇಲಾಖೆ ವಿರುದ್ಧ ಕ್ರಮವಹಿಸಬೇಕು’ ಎಂದು ಪ್ರಶಾಂತ್‌ ದೂರಿದರು. ಹೆದ್ದಾರಿ ಎಂಜಿನಿಯರಿಂಗ್‌ ವಿಭಾಗ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಗಮನಕ್ಕೆ ತಂದು ಕ್ರಮವಹಿಸುವುದಾಗಿ ಲೋಕಾಯುಕ್ತ ಡಿವೈಎಸ್ಪಿ ಸಭೆಗೆ ತಿಳಿಸಿದರು.

ಹುಲಿ ಹಾವಳಿ: ನಾಗರಹೊಳೆ ಅರಣ್ಯದಂಚಿನ ಗ್ರಾಮಸ್ಥರು ನೆಮ್ಮದಿಯಿಂದ ಬದುಕು ನಡೆಸಲಾಗುತ್ತಿಲ್ಲ.  ಹುಲಿ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಹುಲಿ ಸೆರೆ ಪ್ರಕ್ರಿಯೆ ಚುರುಕುಗೊಳಿಸಿಲ್ಲ ಎಂದು ಹನಗೋಡು ಗ್ರಾಮದ ನಿವಾಸಿ ನಟರಾಜ್‌ ದೂರಿದರು.  ವಲಯ ಅರಣ್ಯಾಧಿಕಾರಿ ನಂದಕುಮಾರ್‌ ಉತ್ತರಿಸಿ,  ಸಿ.ಸಿ.ಕ್ಯಾಮೆರಾ ಟ್ರ್ಯಾಪಿಂಗ್‌ ಮಾಡಿ ಹುಲಿಗೆ ಯು– 11 ಎಂಬ ಹೆಸರು ನೀಡಿ ಇಲಾಖೆ ನಾಗರಹೊಳೆ ಮತ್ತು ಅರಬ್ಬಿತಿಟ್ಟು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದೆ ಎಂದರು.

ಕೊತ್ತೇಗಾಲ ಗ್ರಾಮ ಪಂಚಾಯಿತಿ ಪಿಡಿಒ ತಮ್ಮ ಕೆಲಸ ನಿರ್ವಹಿಸಲು ಬೇರೆ ವ್ಯಕ್ತಿಯನ್ನು ಕಾನೂನು ಬಾಹಿರ ನಿಯೋಜಿಸಿಕೊಂಡಿದ್ದಾರೆ. ದಾಖಲೆಗಳು ಸೋರಿಕೆ ಆಗುವ ಅನುಮಾನವಿದೆ ಎಂದು ಗ್ರಾಮದ ಚೇತನ್‌ ರಾಜು ಎಂಬವರು  ದೂರು ನೀಡಿದರು. ಚಿಕ್ಕಹುಣಸೂರು ಸರ್ವೆ ನಂ ನಲ್ಲಿ 4 ಎಕರೆ ಅನ್ಯಕ್ರಾಂತ ಮಾಡಿಸಿದ ಬಡಾವಣೆಯಲ್ಲಿ ಹೂಡಾ 35 ನಿವೇಶನವನ್ನು ತಡೆಹಿಡಿದಿದೆ . ಕಳೆದ 10 ವರ್ಷದಿಂದ ಸರ್ವೆ ಇಲಾಖೆ ಸಮರ್ಪಕವಾಗಿ ಸರ್ವೆ ನಡೆಸಿ ವರದಿ ಸಂಬಂಧಿಸಿದ ಇಲಾಖೆಗೆ ನೀಡದೆ ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದೇನೆ ಎಂದು ರಾಜು ಎಂಬುವವರು ದೂರಿದರು.

ಲೋಕಾಯುಕ್ತರು ತಹಶೀಲ್ದಾರ್‌ ಮತ್ತು ಎಡಿಎಲ್‌ಆರ್‌ ಅವರೊಂದಿಗೆ ಚರ್ಚಿಸಿ  ಸರ್ವೆ ಇಲಾಖೆ ಸಹಾಯಕ ನಿರ್ದೇಶಕಮೂಲಕ  ಪರಿಹರಿಸುವ ಭರವಸೆ ನೀಡಿದರು.

ಲೋಕಾಯುಕ್ತರ ಸಾರ್ವಜನಿಕ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ  15 ಅರ್ಜಿಗಳು ಸ್ವೀಕರಿಸಿದರು. ಸಭೆಯಲ್ಲಿ ಸ್ವೀಕರಿಸಿದ್ದ 42 ಅರ್ಜಿಗಳಲ್ಲಿ 19 ಪ್ರಕರಣಗಳು ಸಿವಿಲ್‌ ನ್ಯಾಯಾಲಯಕ್ಕೆ ಸೇರಿದ್ದು, ಉಳಿದಂತೆ ಅರ್ಜಿಗಳಿಗೆ ಪರಿಹಾರ ನೀಡಲಾಗಿದೆ ಎಂದು  ತಿಳಿಸಿದರು.

 ತಹಶೀಲ್ದಾರ್‌ ಮಂಜುನಾಥ್‌, ಇಒ ಹೊಂಗಯ್ಯ, ನಗರಸಭೆ ಆಯುಕ್ತೆ ಮಾನಸ, ಲೋಕಾಯುಕ್ತ ಅಧಿಕಾರಿಗಳಾದ ಉಮೇಶ್‌, ರವಿಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.