ಮೈಸೂರು: ಮಹಿಷ ಮಂಡಲೋತ್ಸವ ಆಚರಣಾ ಸಮಿತಿ ಬುಧವಾರ ಇಲ್ಲಿ ಹಮ್ಮಿಕೊಂಡಿದ್ದ ‘ಮಹಿಷ ಮಂಡಲೋತ್ಸವ’ವು ನಿಷೇಧಾಜ್ಞೆಯಿಂದಾಗಿ ಸಭೆ ಹಾಗೂ ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಮೂರ್ತಿಯ ಪುಷ್ಪಾರ್ಚನೆಗೆ ಸೀಮಿತವಾಯಿತು.
ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ‘ಚಾಮುಂಡಿ ಬೆಟ್ಟ ಹಾಗೂ ಪುರಭವನ ಆವರಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಡಳಿತ ಧಾರ್ಮಿಕ ಹಕ್ಕಿಗೆ ಚ್ಯುತಿ ತಂದಿದೆ. ಮುಂದಿನ ಬಾರಿ ಮುಕ್ತವಾಗಿ ಆಚರಣೆಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.
ಪುರಭವನ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ದ್ರಾವಿಡ ಲಿಬರೇಷನ್ ಮೂಮೆಂಟ್‌ನ ಕೊಳತ್ತೂರು ಟಿ.ಎಸ್.ಮಣಿ, ‘ಆರ್ಯರ ವ್ಯವಸ್ಥೆಯು ಸ್ಥಳೀಯ ಮೂಲ ನಿವಾಸಿಗಳನ್ನು ರಕ್ಷಿಸಲು ಬಂದವರನ್ನು ರಾಕ್ಷಸರನ್ನಾಗಿ ನಿರೂಪಿಸಿತು’ ಎಂದು ಟೀಕಿಸಿದರು.
ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರು, ‘ನಮ್ಮ ತೆರಿಗೆ ಹಣದಲ್ಲಿ ದಸರಾ ಮಾಡುತ್ತಿದ್ದೀರಿ. ನಮ್ಮ ಭಾವನೆಗೂ ಬೆಲೆ ನೀಡಿ. ಒಂದೆರಡು ಕೋಟಿ ರೂಪಾಯಿ ನೀಡಿದರೆ, ಜನ ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ. ಸಾಧ್ಯವಾಗದಿದ್ದರೆ ಸರ್ಕಾರದಿಂದಲೇ ನಡೆಸಿ’ ಎಂದು ಒತ್ತಾಯಿಸಿದರು.
ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಪ್ರತಿಮೆಯನ್ನು ಟಾರ್ಪಲ್‌ನಿಂದ ಮುಚ್ಚಲಾಗಿತ್ತು. ಬೆಟ್ಟಕ್ಕೆ ಆಯೋಜಿಸಿದ್ದ ಬೈಕ್ ರ್‍ಯಾಲಿಗೂ ಪೊಲೀಸರು ಅನುಮತಿ ನೀಡಲಿಲ್ಲ. ಸಂಜೆ 4ರ ಸುಮಾರಿಗೆ ಮಾಜಿ ಮೇಯರ್ ಪುರುಷೋತ್ತಮ್, ಜ್ಞಾನಪ್ರಕಾಶ ಸ್ವಾಮೀಜಿ, ಪ್ರೊ.ಕೆ.ಎಸ್.ಭಗವಾನ್ ಇತರ ಪ್ರಮುಖರನ್ನು ಬೆಟ್ಟಕ್ಕೆ ಕರೆದೊಯ್ದ ಪೊಲೀಸರು ಪ್ರತಿಮೆಗೆ ಪುಷ್ಪಾರ್ಚನೆಗೆ ಅವಕಾಶ ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.