ADVERTISEMENT

ಮೈಸೂರು ಮೃಗಾಲಯ ಶೀಘ್ರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 30 ಮೇ 2020, 16:12 IST
Last Updated 30 ಮೇ 2020, 16:12 IST
   

ಮೈಸೂರು: ಲಾಕ್‌ಡೌನ್‌ನಿಂದಾಗಿ ಮುಚ್ಚಿರುವ ಇಲ್ಲಿನ ಚಾಮರಾಜೇಂದ್ರ ಮೃಗಾಲಯ ಶೀಘ್ರದಲ್ಲೇ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದ್ದು, 2–3 ದಿನಗಳಲ್ಲಿ ಸರ್ಕಾರದ ಅಧಿಕೃತ ಆದೇಶ ಬರಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.

‘ಈ ಸಂಬಂಧ, ಜಿಲ್ಲಾಡಳಿತ ಮತ್ತು ಮೃಗಾಲಯದ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಿದರೆ ಯಾವುದೇ ತೊಂದರೆಯಾಗದು ಎಂಬ ತೀರ್ಮಾನಕ್ಕೆ ಬರಲಾಗಿದ್ದು, ಮೃಗಾಲಯ ತೆರೆಯಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ’ ಎಂದು ಶನಿವಾರ ಇಲ್ಲಿ ತಿಳಿಸಿದರು.

ಅರಣ್ಯ ಸಚಿವರ ಜತೆಯೂ ಮಾತನಾಡಿದ್ದು, ಸರ್ಕಾರದ ಒಪ್ಪಿಗೆ ದೊರೆತ ಬಳಿಕ ಮತ್ತೊಮ್ಮೆ ಸ್ಥಳೀಯ ಶಾಸಕರು, ಜಿಲ್ಲಾಡಳಿತದ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

ADVERTISEMENT

ಲಾಕ್‌ಡೌನ್‌ನಿಂದಾಗಿ ಮಾರ್ಚ್‌ 15ರಂದು ಮೃಗಾಲಯವನ್ನು ಬಂದ್‌ ಮಾಡಲಾಗಿತ್ತು. ಇದರಿಂದಾಗಿ, ಎರಡೂವರೆ ತಿಂಗಳಲ್ಲಿ ₹ 6 ರಿಂದ ₹ 7 ಕೋಟಿಯಷ್ಟು ಆದಾಯ ಕೊರತೆ ಉಂಟಾಗಿದೆ.

₹ 25.14 ಲಕ್ಷ ಹಸ್ತಾಂತರ: ಸಚಿವ ಸೋಮಶೇಖರ್‌ ಅವರು ದಾನಿಗಳಿಂದ ಸಂಗ್ರಹಿಸಿದ ₹ 25.14 ಲಕ್ಷ ಮೊತ್ತದ ಚೆಕ್‌ ಅನ್ನು ಮೃಗಾಲಯಕ್ಕೆ ಹಸ್ತಾಂತರಿಸಿದರು. ಈ ಮೂಲಕ ಅವರು, ಒಟ್ಟಾರೆಯಾಗಿ ₹ 2.85 ಕೋಟಿ ದೇಣಿಗೆ ಸಂಗ್ರಹಿಸಿ ನೀಡಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.