ADVERTISEMENT

ಮೈಸೂರು ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಹೆಚ್ಚಳ

‘ವಿದ್ಯಾಗಮ’ ಪರಿಣಾಮಕಾರಿ ಅನುಷ್ಠಾನ: ಖಾಸಗಿ ಶಾಲೆಗಳ ಚಿಣ್ಣರು ಸರ್ಕಾರಿ ಶಾಲೆಯತ್ತ...

ಡಿ.ಬಿ, ನಾಗರಾಜ
Published 29 ಆಗಸ್ಟ್ 2020, 19:30 IST
Last Updated 29 ಆಗಸ್ಟ್ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮೈಸೂರು: ರಾಜ್ಯದ ಎಲ್ಲೆಡೆ ಶಾಲಾ ದಾಖಲಾತಿ ಆಂದೋಲನ ನಡೆದಿದೆ. ಮೈಸೂರು ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

ಎಚ್‌.ಡಿ.ಕೋಟೆ ತಾಲ್ಲೂಕಿನ ಸೋನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ 150 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಹಿಂದಿನ ವರ್ಷ 1ರಿಂದ 7ನೇ ತರಗತಿವರೆಗೆ ಇಲ್ಲಿ ಕೇವಲ 17 ವಿದ್ಯಾರ್ಥಿಗಳಷ್ಟೇ ವ್ಯಾಸಂಗ ನಿರತರಾಗಿದ್ದರು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ.ಪಾಂಡುರಂಗ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮಡಿಲು ಸೇವಾ ಸಂಸ್ಥೆ ನಮ್ಮ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ನಡೆಸುತ್ತಿದೆ. ಶಿಕ್ಷಕರಿಗೆ ಸಂಬಳವನ್ನೂ ಪಾವತಿಸುತ್ತಿದೆ. ನಾವು ಜಾಗ ಕೊಟ್ಟಿದ್ದೇವೆ ಅಷ್ಟೇ. ಇಲ್ಲಿ ಕಲಿತ ಮಕ್ಕಳು ನಮ್ಮಲ್ಲಿಯೇ ದಾಖಲಾಗಿದ್ದಾರೆ. ಇದರ ಜೊತೆಗೆ ಶಾಲೆಯ ಶಿಕ್ಷಕ ವರ್ಗ ‘ವಿದ್ಯಾಗಮ’ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದರಿಂದ, ಖಾಸಗಿ ಶಾಲೆಯ ಮಕ್ಕಳು ದಾಖಲಾಗುತ್ತಿದ್ದಾರೆ. ನಮ್ಮಲ್ಲಿನ ಕೊಠಡಿ ಸಾಮರ್ಥ್ಯ ಈಗಾಗಲೇ ಮೀರಿದೆ’ ಎಂದು ಅವರು ಹೇಳಿದರು.

ಬೀಚನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದಿನ ವರ್ಷ 40 ಮಕ್ಕಳಿದ್ದರು. ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ 65ಕ್ಕೆ ಏರಿದೆ. ದಾಖಲಾತಿ ಇನ್ನೂ ನಡೆದಿದೆ ಎಂದು ಡಿಡಿಪಿಐ ಮಾಹಿತಿ ನೀಡಿದರು.

‘ಮೈಸೂರು ತಾಲ್ಲೂಕಿನ ವರಕೋಡು ಹಾಗೂ ಪುಟ್ಟೇಗೌಡನಹುಂಡಿ ಗ್ರಾಮದ ಸರ್ಕಾರಿ ಶಾಲೆಗಳಲ್ಲೂ ಮಕ್ಕಳ ದಾಖಲಾತಿ ಹೆಚ್ಚಿದೆ. ಹಿಂದಿನ ವರ್ಷ ವ್ಯಾಸಂಗ ನಿರತರಾಗಿದ್ದ ವಿದ್ಯಾರ್ಥಿಗಳ ಸಂಖ್ಯೆಗಿಂತಲೂ, ಈ ಬಾರಿ 15ರಿಂದ 20 ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದಾರೆ’ ಎಂದು ಡಾ.ಪಾಂಡುರಂಗ ತಿಳಿಸಿದರು.

ನಂಜನಗೂಡು ತಾಲ್ಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಶಾಲೆಗೂ, ಹಿಂದಿನ ವರ್ಷಕ್ಕಿಂತ ಈ ಬಾರಿ 15 ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದಾರೆ ಎಂದು ಹೇಳಿದರು.

3 ವರ್ಷದಿಂದ ಮುಚ್ಚಿದ್ದ ಶಾಲೆ ಪುನರಾರಂಭ

ನಂಜನಗೂಡು ತಾಲ್ಲೂಕಿನ ಚಂದ್ರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳು ದಾಖಲಾಗದಿದ್ದರಿಂದ, ಮೂರು ವರ್ಷದಿಂದ ಬಾಗಿಲು ಮುಚ್ಚಲಾಗಿತ್ತು. ಯಾವೊಂದು ಚಟುವಟಿಕೆಯೂ ಇಲ್ಲಿರಲಿಲ್ಲ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ದಾಖಲಾತಿ ಆಂದೋಲನ ಆರಂಭಿಸಿದೆವು. 14 ಮಕ್ಕಳು ದಾಖಲಾಗಿದ್ದಾರೆ. ಶಾಲೆಯನ್ನು ಅಗತ್ಯ ಸಿಬ್ಬಂದಿ, ಸೌಕರ್ಯಗಳೊಂದಿಗೆ ಪುನರಾರಂಭಿಸಲು ಇಲಾಖೆ ಎಲ್ಲ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಡಿಡಿಪಿಐ ಡಾ.ಪಾಂಡುರಂಗ ತಿಳಿಸಿದರು.

ಸರ್ಕಾರಿ, ಖಾಸಗಿ, ಅನುದಾನಿತ ಶಾಲಾ ದಾಖಲಾತಿ ಚಿತ್ರಣ

4,35,508

ಮಕ್ಕಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿದ್ದವರು

3,05,000

ಮಕ್ಕಳು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ದಾಖಲಾದವರು

1,30,000

ಮಕ್ಕಳು ಇನ್ನೂ ದಾಖಲಾಗಬೇಕಿದೆ

ಸರ್ಕಾರಿ ಶಾಲೆಯ ಚಿತ್ರಣ

1,65,218

ಮಕ್ಕಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿದ್ದವರು

1,25,925

ಮಕ್ಕಳು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ದಾಖಲಾದವರು

39,283

ಮಕ್ಕಳು ಇನ್ನೂ ದಾಖಲಾಗಬೇಕಿದೆ

ಆಧಾರ: ಸಾರ್ವಜನಿಕ ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.