ADVERTISEMENT

ಮಂಕಾದ ಗೌರಿ ಗಣೇಶ ಹಬ್ಬ

ಮಾರಾಟವಾಗದೇ ಉಳಿದ ಆಲಂಕಾರಿಕ ವಸ್ತುಗಳು

ಕೆ.ಎಸ್.ಗಿರೀಶ್
Published 22 ಆಗಸ್ಟ್ 2020, 6:17 IST
Last Updated 22 ಆಗಸ್ಟ್ 2020, 6:17 IST
ಮೈಸೂರಿನ ಶಿವರಾಮಪೇಟೆಯಲ್ಲಿ ಆಲಂಕಾರಿಕ ವಸ್ತುಗಳ ವ್ಯಾಪಾರ ಕಳೆಗುಂದಿತ್ತು
ಮೈಸೂರಿನ ಶಿವರಾಮಪೇಟೆಯಲ್ಲಿ ಆಲಂಕಾರಿಕ ವಸ್ತುಗಳ ವ್ಯಾಪಾರ ಕಳೆಗುಂದಿತ್ತು   

ಮೈಸೂರು: ಈ ಬಾರಿ ಗೌರಿ ಗಣೇಶ ಹಬ್ಬ ತನ್ನ ಎಂದಿನ ಕಳೆಯನ್ನು ಕಳೆದುಕೊಂಡಿದೆ. ಬೀದಿಬೀದಿಗಳಲ್ಲಿ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮಾಡುವುದಕ್ಕೆ ನಿರ್ಬಂಧ ಹೇರಿರುವುದರಿಂದ ಹಿಂದಿನ ವಿಜೃಂಭಣೆ ಈಗ ಮಾಯವಾಗಿದೆ.

ಹಿಂದಿನ ವರ್ಷವೆಲ್ಲ ಕನಿಷ್ಠ ಒಂದು ಬೀದಿಗೆ ಒಂದು ಗಣೇಶ ವಿಗ್ರಹವಾದರೂ ಪ್ರತಿಷ್ಠಾಪನೆಗೊಳ್ಳುತ್ತಿತ್ತು. ಈಗ ಎಲ್ಲೂ ಪೆಂಡಾಲ್‌ ಗಣೇಶ ಕಾಣಸಿಗುತ್ತಿಲ್ಲ. ಇದರಿಂದಾಗಿ ಕೇವಲ ಗಣೇಶ ಮೂರ್ತಿ ತಯಾರಕರು ಹಾಗೂ ಮಾರಾಟಗಾರರಿಗೆ ಮಾತ್ರವಲ್ಲ, ಆಲಂಕಾರಿಕ ವಸ್ತುಗಳ ಮಾರಾಟಗಾರರ ಮೇಲೂ ಪರಿಣಾಮ ಬೀರಿದೆ.

ಆಲಂಕಾರಿಕ ವಸ್ತುಗಳು ಇಡೀ ವರ್ಷದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುತ್ತಿದ್ದುದ್ದೇ ಇದೇ ಅವಧಿಯಲ್ಲಿ. ಗಣೇಶ ಮೂರ್ತಿಯನ್ನು ಕೂರಿಸುವ ಪೆಂಡಾಲ್‌ ಮತ್ತು ಚಪ್ಪರದಲ್ಲಿ ಹಾಕಲಾಗುತ್ತಿದ್ದ ವಿವಿಧ ಬಗೆಯ ಆಲಂಕಾರಿಕ ವಸ್ತುಗಳನ್ನು ಖರೀದಿಸುವವರೇ ಇಲ್ಲದ ಸ್ಥಿತಿ ಮಾರುಕಟ್ಟೆಯಲ್ಲಿದೆ.

ADVERTISEMENT

ಪೇಪರ್ ಹೂಗಳು, ಚಕ್ರ, ಬಂಟಿಂಗ್‌ಗಳು, ಪೇಪರ್‌ ಫ್ಯಾನು ಸೇರಿದಂತೆ ವಿವಿಧ ಬಗೆಯ ಆಲಂಕಾರಿಕ ವಸ್ತುಗಳ ಮಾರಾಟ ಶೂನ್ಯಕ್ಕೆ ಇಳಿದಿದೆ. ಈ ಬಗೆಯ ವಸ್ತುಗಳನ್ನು ಮಾರಾಟ ಮಾಡುವವರಿಗೆ ಈ ಹಬ್ಬದಲ್ಲೇ ಭರಪೂರ ವ್ಯಾಪಾರವಾಗುತ್ತಿತ್ತು. ಆದರೆ, ಈಗ ಇವರೆಲ್ಲ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಆಲಂಕಾರಿಕ ವಸ್ತುಗಳ ಮಾರಾಟ ಅಕ್ಷರಶಃ ಕುಸಿದಿದೆ. ಅಂಗಡಿಯ ಬಾಡಿಗೆ, ಕೆಲಸಗಾರರ ಸಂಬಳವನ್ನೂ ಪಾವತಿ ಮಾಡದಷ್ಟು ಕಷ್ಟಕರವಾಗಿದೆ. ವರಮಹಾಲಕ್ಷ್ಮೀ ಹಬ್ಬದಲ್ಲೂ ವ್ಯಾಪಾರವಾಗಲಿಲ್ಲ. ಗಣಪತಿ ಹಬ್ಬದಲ್ಲೂ ವ್ಯಾಪಾರ ಇನ್ನಷ್ಟು ಕುಸಿದಿದೆ. ಇಡೀ ವರ್ಷ ನಷ್ಟದ ಮೇಲೆ ನಷ್ಟ ಉಂಟಾಗಿದೆ ಎಂದು ಶಿವರಾಮಪೇಟೆಯ ಜ್ಯುಪಿಟರ್ ಬರ್ತಡೇ ಶಾಫಿ ಮಳಿಗೆಯ ಮಾಲೀಕ ಕೆ.ಆರ್.ಆನಂದ್ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.