ADVERTISEMENT

ನನಗೊಂದೇ ವೋಟು ಕೊಡಿ; ಮತ ತಂತ್ರ

ವರುಣಾದಲ್ಲಿ ಕೊನೆ ಕ್ಷಣದ ಕಸರತ್ತು: ಮನೆ ಮನೆಗೂ ಮಹದೇಶ್ವರನ ಪ್ರಸಾದ

ಡಿ.ಬಿ, ನಾಗರಾಜ
Published 25 ಡಿಸೆಂಬರ್ 2020, 19:30 IST
Last Updated 25 ಡಿಸೆಂಬರ್ 2020, 19:30 IST
ವರುಣಾದಲ್ಲಿ ಶುಕ್ರವಾರ ಮತ ಯಾಚಿಸಿದ ಯುವಕರ ಗುಂಪು
ವರುಣಾದಲ್ಲಿ ಶುಕ್ರವಾರ ಮತ ಯಾಚಿಸಿದ ಯುವಕರ ಗುಂಪು   

ವರುಣಾ: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನಕ್ಕೆ ಒಂದು ದಿನವಷ್ಟೇ ಉಳಿದಿದೆ. ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದರೂ; ಅಭ್ಯರ್ಥಿಗಳು ಯುವ ಸಮೂಹದ ಗುಂಪಿನೊಂದಿಗೆ ಮನೆ ಮನೆಗೂ ತೆರಳಿ ಮತ ಯಾಚಿಸುವ ಚಿತ್ರಣ ಶುಕ್ರವಾರ ಗ್ರಾಮದಲ್ಲಿ ಗೋಚರಿಸಿತು. ಮಹಿಳೆಯರು ಈ ತಂಡಕ್ಕೆ ಸಾಥ್‌ ನೀಡಿದ್ದು ವಿಶೇಷವಾಗಿತ್ತು.

ಮೈ ಚುರುಗುಟ್ಟುವ ಬಿಸಿಲನ್ನು ಲೆಕ್ಕಿಸದೆ, ಸ್ಪರ್ಧಿಗಳು ಮತದಾರರ ಮನೆ ಬಾಗಿಲಿಗೆ ಎಡ ತಾಕಿದರು. ಗುಂಪಿನಲ್ಲಿದ್ದ ಒಬ್ಬರು ಸ್ಪರ್ಧಿಯ ಕರಪತ್ರ ಕೊಟ್ಟರೆ, ಮತ್ತೊಬ್ಬರು ಗುಲಾಬಿ ಹೂವು ನೀಡಿದರು. ಅಭ್ಯರ್ಥಿಯು ಪ್ರತಿ ಮನೆಗೂ ಮಲೆ ಮಹದೇಶ್ವರ ಸ್ವಾಮಿಯ ಲಾಡು ಪ್ರಸಾದವನ್ನು ನೀಡಿ, ಆ ಮನೆಯ ಯಜಮಾನನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ಜೊತೆಯಲ್ಲೇ, ಮತ ಯಾಚಿಸಿದ್ದು ಕಂಡು ಬಂದಿತು.

ಯುವ ಸಮೂಹದ ಗುಂಪು ಒಂದು ಮನೆಯಿಂದ ಮತ್ತೊಂದು ಮನೆಗೆ ತೆರಳುತ್ತಿದ್ದಂತೆ, ಆ ಗುಂಪಿನ ಇಬ್ಬರು–ಮೂವರು ಯುವಕರು ಮಹಿಳೆಯರನ್ನು ಮಾತನಾಡಿಸಿ, ಪ್ರತ್ಯೇಕವಾಗಿ ಮತ ಯಾಚಿಸಿದರು.

ADVERTISEMENT

ಬಾಳೆಹಣ್ಣು ಕೊಡ್ತ್ವಾರೆ: ‘ನಮ್ಮೂರಿನ ಎರಡು ವಾರ್ಡ್‌ನಿಂದ ಆರು ಸದಸ್ಯರು ಆಯ್ಕೆಯಾಗಬೇಕಿದೆ. 24 ಜನರು ಸ್ಪರ್ಧಿಸಿದ್ದಾರೆ. ಒಬ್ಬರ ನಂತರ ಮತ್ತೊಬ್ಬರು ಬಂದು ಮತ ಕೇಳುತ್ತಿದ್ದಾರೆ. ಎಲ್ಲರೂ ತಮ್ಮ ಚಿಹ್ನೆಯುಳ್ಳ ಕರಪತ್ರದ ಜೊತೆಗೆ ಜೋಡಿ ಬಾಳೆಹಣ್ಣು ಕೊಟ್ಟು ಮತ ಯಾಚಿಸುತ್ತಿದ್ದಾರೆ’ ಎಂದು ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಯಾ ಜಾತಿಯವರಿಗೆ, ಆಯಾ ಭಾಗದವರಿಗೆ ವಾರದಿಂದಲೂ ಒಂದೊಂದು ಭಾಗದಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಿಸುತ್ತಿದ್ದಾರೆ. ಬಹುತೇಕರು ಅಲ್ಲಿಗೆ ಹೋಗಿ ಊಟ ಮಾಡಿ ಬರುತ್ತಿದ್ದಾರೆ. ಬಾಡೂಟವೂ ನಡೆದಿದೆ’ ಎಂದು ಅವರು ಹೇಳಿದರು.

‘ನಮ್ಮೂರಲ್ಲಿ ಬಡವರಿಗೆ ನ್ಯಾಯ ಎಂಬುದೇ ಸಿಗಲ್ಲ. ಪಂಚಾಯಿತಿಯಿಂದ ಹಿಡಿದು ಸಿದ್ದರಾಮಯ್ಯ ತನಕ ಗೆದ್ದ ಎಲ್ಲರನ್ನು ಕೇಳಿದರೂ ಯಾರೊಬ್ಬರೂ ನೊಂದವರ ಅಳಲು ಆಲಿಸಲ್ಲ. ಈಗ ಮನೆ ಮನೆಗೆ ವೋಟು ಕೇಳಲು ಬರ್ತಿದ್ದಾರೆ. ನಮ್ಮ ಸಮಸ್ಯೆ ಹೇಳಿಕೊಂಡರೇ, ನನಗಷ್ಟೇ ಒಂದು ವೋಟು ಹಾಕಿ. ನಾನು ಗೆಲ್ಲುತ್ತಿದ್ದಂತೆ ನಿಮ್ಮ ಸಮಸ್ಯೆ, ಸಂಕಟಕ್ಕೆ ಪರಿಹಾರ ಕಲ್ಪಿಸುವೆ ಎನ್ನುತ್ತಾರೆ. ಬಂದ ಎಲ್ಲರೂ ನನಗಷ್ಟೇ ವೋಟು ಕೊಡಿ ಎಂದು ಕೇಳುವವರೇ ಆಗಿದ್ದಾರೆ’ ಎಂದು ಹೆಸರು ಬಹಿರಂಗಗೊಳಿಸಬಾರದು ಎಂಬ ಷರತ್ತಿನಿಂದಲೇ ಮಹಿಳೆಯೊಬ್ಬರು ‘ಪ್ರಜಾವಾಣಿ’ ಬಳಿ ಗ್ರಾಮದ ರಾಜಕೀಯ ಮುಖಂಡರ ಮತ ತಂತ್ರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‌ಪುಟ್ಟರಂಗಮ್ಮ ಅವಿರೋಧ ಆಯ್ಕೆ

23 ಸದಸ್ಯ ಬಲದ ವರುಣಾ ಗ್ರಾಮ ಪಂಚಾಯಿತಿಯಲ್ಲಿ ಪಿಲ್ಲಹಳ್ಳಿ ಮತಕ್ಷೇತ್ರದಿಂದ ವರುಣಾ ಗ್ರಾಮದ ಪುಟ್ಟರಂಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಿಲ್ಲಹಳ್ಳಿ ಗ್ರಾಮದಲ್ಲಿ ಹಿಂದುಳಿದ ವರ್ಗ ಅ ಮಹಿಳಾ ಮೀಸಲಿನ ಜನರೇ ಇಲ್ಲ. ಅಲ್ಲಿಗೆ ಕುಲ ಕಸುಬಿಗಾಗಿ ಹೋಗುವ ಪುಟ್ಟರಂಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಎರಡು ಸ್ಥಾನಗಳಿಗೆ ಚುನಾವಣೆ ನಡೆದಿದೆ.

71 ಜನರು ನಾಮಪತ್ರ ಸಲ್ಲಿಸಿದ್ದರು. ಮೂವರ ನಾಮಪತ್ರ ತಿರಸ್ಕೃತಗೊಂಡಿದ್ದರೆ, ಆರು ಜನರು ತಮ್ಮ ಉಮೇದುವಾರಿಕೆ ವಾಪಸ್‌ ಪಡೆದರು. ಒಬ್ಬರು ಅವಿರೋಧ ಆಯ್ಕೆಯಾಗಿರುವುದರಿಂದ, 22 ಸ್ಥಾನಗಳಿಗೆ 61 ಜನರು ಅಖಾಡದಲ್ಲಿ ಪೈಪೋಟಿ ನಡೆಸಿದ್ದಾರೆ.

ವರುಣಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಂಡಿಕೆರೆ, ಚಿಕ್ಕಹಳ್ಳಿ, ಪಿಲ್ಲಹಳ್ಳಿ, ಚೋರನಹಳ್ಳಿ, ವರುಣಾ ಗ್ರಾಮಗಳು ಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.