ADVERTISEMENT

ಶಿವನಾಗಮ್ಮರಿಂದ ಸಮಾಜಕ್ಕೆ ಶ್ರೇಷ್ಠ ಕೊಡುಗೆ: ಶರತ್‌ಚಂದ್ರ ಸ್ವಾಮೀಜಿ

ಶಿವನಾಗಮ್ಮ ನುಡಿ ನಮನ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 5:31 IST
Last Updated 21 ಜೂನ್ 2021, 5:31 IST
ಮೈಸೂರಿನ ಗನ್ ಹೌಸ್ ಬಳಿಯಿರುವ ಬಸವೇಶ್ವರ ಪ್ರತಿಮೆ ಮುಂಭಾಗ ಭಾನುವಾರ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಶಿವನಾಗಮ್ಮ ಅವರಿಗೆ ನುಡಿ ನಮನ ಸಲ್ಲಿಸಲಾಯಿತು
ಮೈಸೂರಿನ ಗನ್ ಹೌಸ್ ಬಳಿಯಿರುವ ಬಸವೇಶ್ವರ ಪ್ರತಿಮೆ ಮುಂಭಾಗ ಭಾನುವಾರ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಶಿವನಾಗಮ್ಮ ಅವರಿಗೆ ನುಡಿ ನಮನ ಸಲ್ಲಿಸಲಾಯಿತು   

ಮೈಸೂರು: ‘ಸುತ್ತೂರು ಮಠದ ಪೀಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗೆ ಜನ್ಮ ನೀಡುವ ಮೂಲಕ ಶಿವನಾಗಮ್ಮ ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ’ ಎಂದು ಕುಂದೂರು ಮಠದ ಡಾ.ಶರತ್‌ಚಂದ್ರ ಸ್ವಾಮೀಜಿ ತಮ್ಮ ನುಡಿನಮನ ಅರ್ಪಿಸಿದರು.

ನಗರದ ಗನ್ ಹೌಸ್ ಬಳಿಯಿರುವ ಬಸವೇಶ್ವರ ಪ್ರತಿಮೆ ಮುಂಭಾಗ ಭಾನುವಾರ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ದಿ.ಶಿವನಾಗಮ್ಮ ಅವರಿಗೆ ನುಡಿ ನಮನ ಹಾಗೂ ಬಡವರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸ್ವಾಮೀಜಿ ಮಾತನಾಡಿದರು.

‘ಸುತ್ತೂರು ಮಠ ಇಂದು ವಿಶ್ವ ವ್ಯಾಪಿ ಬೆಳೆದಿದೆ. ಇದಕ್ಕೆ ಕಾರಣ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ. ಇಂತಹ ಮಹನೀಯರಿಗೆ ಜನ್ಮ ನೀಡಿದ ಶಿವನಾಗಮ್ಮ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಇದರ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸುವ ಮೂಲಕ ಸಾರ್ಥಕತೆಯನ್ನು ಕಂಡಿದ್ದಾರೆ’ ಎಂದು ಸ್ವಾಮೀಜಿ ತಿಳಿಸಿದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ‘ಅಕ್ಷರ, ಅನ್ನ ದಾಸೋಹದ ಮೂಲಕ ರಾಜ್ಯದ ಬೆನ್ನುಲುಬಾಗಿ ನಿಂತಿರುವ ಸುತ್ತೂರು ಶ್ರೀಗಳ ಜನ್ಮಕ್ಕೆ ಕಾರಣರಾಗಿರುವ ಸಾದ್ವಿ ಶಿವನಾಗಮ್ಮ ಅವರು ಸರಳ, ಸಜ್ಜನಿಕೆಯ ಸಾಕಾರ ಮೂರ್ತಿ’ ಎಂದರು.

‘ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಕೆಲವರು ಸಂಸಾರ ನಿರ್ವಹಣೆಗೂ ಹೆಣಗಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಘ–ಸಂಸ್ಥೆಗಳು ತೊಂದರೆಗೊಳಗಾಗಿರುವ ಕುಟುಂಬಗಳ ಜೊತೆಗೆ ನಿಲ್ಲುವ ಕೆಲಸ ಮಾಡಬೇಕು’ ಎಂದು ಶಿವರಾಮು ಸಲಹೆ ನೀಡಿದರು.

ಇದೇ ವೇಳೆ ಕೊರೊನಾ ವೈರಸ್‌ ಸೋಂಕಿನಿಂದ ಸಂಕಷ್ಟಕ್ಕೆ ಒಳಗಾಗಿರುವ ವೃದ್ಧಾಶ್ರಮದ ನಿವಾಸಿಗಳು ಹಾಗೂ ಪೌರ ಕಾರ್ಮಿಕರಿಗೆ ವೇದಿಕೆ ವತಿಯಿಂದ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ನಂತರ ಪ್ರಾಣಿ–ಪಕ್ಷಿಗಳಿಗೆ ಆಹಾರ ನೀಡಲಾಯಿತು.

ಇನ್ನೋವೇಟೀವ್ ಸಲ್ಯೂಷನ್‌ನ ರೋಹಿತ್ ಪಾಟೀಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ.ಸೋಮೇಗೌಡ, ಮಾಲಂಗಿ ಸುರೇಶ್, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಡಾ.ಸಿ.ವೆಂಕಟೇಶ್, ಎಂ.ಚಂದ್ರಶೇಖರ್, ಮೂಗೂರು ನಂಜುಂಡಸ್ವಾಮಿ, ವಿನೋದ್‌ರಾಜ್, ಎಸ್.ಎಂ.ಪಳನಿಸ್ವಾಮಿ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.