ಶಾಸಕ ಜಿ.ಟಿ. ದೇವೇಗೌಡ
ಮೈಸೂರು: ‘ಸದ್ಯಕ್ಕೆ ನನ್ನದು ತಟಸ್ಥ ನಿಲುವು’ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಶಾಸಕನ ಕೆಲಸ ಮಾಡುತ್ತಿದ್ದೇನೆ. ಮುಂದೆ ಕ್ಷೇತ್ರದ ಜನರ ಸಭೆ ಕರೆದು ನಿರ್ಧಾರ ಮಾಡುತ್ತೇನೆ’ ಎಂದರು.
‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದೇನೆ. ಸಿದ್ದರಾಮಯ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆಗಿದ್ದಾಗ, ಈಗ ಮುಖ್ಯಮಂತ್ರಿ ಆಗಿರುವಾಗ ಕ್ಷೇತ್ರದಲ್ಲಿ ನಾನು ಯಾವ ರೀತಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎನ್ನುವುದು ಬೇರೆ ಶಾಸಕರಿಗೆ ಗೊತ್ತಿಲ್ಲ. ದೊಡ್ಡ ನಾಯಕನ (ಸಿದ್ದರಾಮಯ್ಯ) ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವ ಕ್ಷೇತ್ರವಿದು’ ಎಂದು ಹೇಳಿದರು.
‘ನನ್ನನ್ನು ಆಯ್ಕೆ ಮಾಡಿರುವುದು ಜನ. ನನ್ನನ್ನು ಪಕ್ಷಾಂತರಿ ಹಾಗೂ ಭ್ರಷ್ಟಾಚಾರಿ ಎಂದು ಹೇಳುವ ತಾಕತ್ತು ಯಾವ ನಾಯಕನಿಗೂ ಇಲ್ಲ. ಅರ್ಧದಲ್ಲಿ ಬಿಟ್ಟು ಓಡಿ ಹೋಗುವ ನಾಯಕ ನಾನಲ್ಲ. ನೀನು ಬರದೇ ಇದ್ದರೆ ಸರ್ಕಾರ ಉಳಿಯುವುದಿಲ್ಲ ಬಂದು ಬಿಡು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಾಗಲಿ ಹೇಳಿಲ್ಲ; ಕರೆದಿಲ್ಲ. ಬಿಜೆಪಿಯವರೂ ಕರೆದಿಲ್ಲ. ಜೆಡಿಎಸ್‌ನವರೂ ಕರೆದಿಲ್ಲ’ ಎಂದು ತಿಳಿಸಿದರು.
‘ನನ್ನನ್ನು ಚನ್ನಪಟ್ಟಣ ಉಪ ಚುನಾವಣೆ ವೇಳೆ ಕರೆದಿದ್ದರಾ? ಇವತ್ತು ಎಲ್ಲರೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಹೋದಾಗ ಉಳಿದುಕೊಂಡವರು ಯಾರು? ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿದೆಯಾ? ಯಾವುದೋ ಕಾರಣಕ್ಕೆ ಪಕ್ಷಕ್ಕೆ ಬಂದು, ಸಣ್ಣ ಅಧಿಕಾರ ಹಿಡಿದುಕೊಂಡಿರುವ ನಿಮಗೆ ಈ ಜಿ.ಟಿ. ದೇವೇಗೌಡನನ್ನು ಎದುರಿಸುವ ಶಕ್ತಿ ಇದೆಯೇ?’ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಕೇಳಿದರು.
‘ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಸಭೆ ಕರೆಯುತ್ತೇನೆ. ಬಿಜೆಪಿಗೆ ಹೋಗೆದಂರೆ ಹೋಗುತ್ತೇನೆ, ಕಾಂಗ್ರೆಸ್ ಸೇರಿ ಎಂದರೂ ಸೇರುತ್ತೇನೆ. ಜೆಡಿಎಸ್‌ನಲ್ಲೇ ಇರಿ ಎಂದರೆ ಇರುತ್ತೇನೆ. ನಾನು ವೈಯಕ್ತಿಕವಾಗಿ ತೆಗೆದುಕೊಳ್ಳುವ ನಿರ್ಧಾರ ಇದಲ್ಲ. ಕ್ಷೇತ್ರದ ಜನರು ಹೇಳಿದ ನಂತರ ತೀರ್ಮಾನಿಸುತ್ತೇನೆ’ ಎಂದರು.
‘ಮುಂಬರುವ ಚುನಾವಣೆಯಲ್ಲೂ ಸ್ಪರ್ಧಿಸುತ್ತೇನೆ. ಗೆದ್ದರೂ ಸರಿ, ಸೋತರೂ ತೊಂದರೆ ಇಲ್ಲ. ಎಲ್ಲದಕ್ಕೂ ಸಿದ್ಧವಿದ್ದೇನೆ’ ಎಂದು ಹೇಳಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಿಖಿಲ್ ಸಿನಿಮಾ ನಟರೂ ಹೌದು. ಜನಪ್ರಿಯತೆ ಇದೆ. ಯುವಕ. ಮೂರು ಬಾರಿ ಚುನಾವಣೆ ಸೋತ ಅನುಭವವಿದೆ. ಎಚ್.ಡಿ. ದೇವೇಗೌಡರು ಕಟ್ಟಿರುವ ಪಕ್ಷ ಉಳಿಸಲೇಬೇಕಲ್ಲವೇ? ಸದ್ಯಕ್ಕೆ ನಾನು ತಟಸ್ಥವಾಗಿದ್ದೇನೆ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.