ಜಯಪುರ ಗ್ರಾಮದೇವತೆ ಗುಜ್ಜಮ್ಮತಾಯಿ ದೇವರಿಗೆ ಜಾತ್ರಾ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿದೆ.
ಜಯಪುರ: ಗ್ರಾಮದಲ್ಲಿ ಗ್ರಾಮದೇವತೆ ಗುಜ್ಜಮ್ಮತಾಯಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ರಥೋತ್ಸವ ನಡೆಯಲಿದ್ದು, ಜಾತ್ರಾ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ರಥೋತ್ಸವ ಸಾಗುವ ಬೀದಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಬುಧವಾರ ರಾತ್ರಿ ದೇವರ ಚಿನ್ನದ ಆಭರಣಗಳನ್ನು ಮೆರವಣಿಗೆ ಮೂಲಕ ಹೊತ್ತು ತಂದು ಗುಜ್ಜಮ್ಮತಾಯಿಗೆ ಅಲಂಕರಿಸಲಾಗುತ್ತದೆ. ಗುರುವಾರ ರಥವನ್ನು ಹೂಗಳಿಂದ ಶೃಂಗರಿಸಿ ಭಕ್ತರು ಗಂಗಸ್ಥಾನವಾದ ಕೆಗ್ಗೆರೆಗೆ ಎಳೆದುಕೊಂಡು ಬರುತ್ತಾರೆ.
ಗಂಗಸ್ಥಾನದಲ್ಲಿ ಗುಜ್ಜಮ್ಮತಾಯಿ ಉತ್ಸವ ಮೂರ್ತಿ, ಕೊಣಪ್ಪಸ್ವಾಮಿ, ಚಿಕ್ಕದೇವಮ್ಮ, ಕೆಂಗಲಮ್ಮ ದೇವರುಗಳು ಸಕಲ ಪೂಜಾ ಕೈಂಕರ್ಯಗಳು ಜರುಗುತ್ತವೆ. ಹರಕೆ ಹೊತ್ತ ಭಕ್ತರು ಬಾಯಿಬೀಗ ಧರಿಸಿ ಮೆರವಣಿಗೆಯಲ್ಲಿ ಸಾಗುತ್ತಾರೆ. ಮಧ್ಯಾಹ್ನ ರಥೋತ್ಸವಕ್ಕೆ ಕೆಗ್ಗೆರೆಯಿಂದ ಚಾಲನೆ ದೊರೆತು ಜಯಪುರ ಗುಜ್ಜಮ್ಮತಾಯಿ ದೇವಾಲಯ ತಲುಪುತ್ತದೆ. ಮೆರವಣಿಗೆಯಲ್ಲಿ ಬರಡನಪುರ ಗ್ರಾಮಸ್ಥರು ನಂದಿ ಧ್ವಜ ಕಂಬ ಹೊತ್ತು ಕುಣಿಯುತ್ತಾರೆ.
‘ರಥೋತ್ಸವ ದೇವಾಲಯ ಆವರಣ ತಲುಪಿದಾಗ ಭಕ್ತರು ‘ಮಡೆ’ಯನ್ನು ಬೇಯಿಸಿ ದೆವಿಗೆ ಸಮರ್ಪಿಸುವುದು ವಾಡಿಕೆಯಾಗಿ ನಡೆದು ಬಂದಿದೆ. ಸುತ್ತಮುತ್ತಲ ಊರುಗಳಿಂದ ಸಾವಿರಾರು ಜನರು ಆಗಮಿಸಿ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಗ್ರಾಮದ ಮುಖಂಡ ಮೂಗನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.
ಜಾತ್ರೆಗೆ ಮೈಸೂರು ಅರಮನೆ ನಂಟು: ‘ಮೈಸೂರು ಮಹಾರಾಜರು ಜಯಪುರ ಮಾರ್ಗವಾಗಿ ಎಚ್.ಡಿ ಕೋಟೆಯ ಕಾಕನಕೋಟೆಗೆ ಬೇಟೆಗಾಗಿ ತೆರಳುತ್ತಿದ್ದಾಗ ಜಯಪುರದಲ್ಲಿ ವಿಶ್ರಾಂತಿ ಪಡೆದು ಮುಂದೆ ಸಾಗುತ್ತಿದ್ದರು. ಆರೇಳು ದಶಕಗಳ ಹಿಂದೆ ಜಯಪುರದ ಹೆಸರು ಚಟ್ಟನಹಳ್ಳಿ ಎಂಬುದಾಗಿತ್ತು. ಮಹಾರಾಜರು ವಿಜಯದ ನೆನಪಿಗಾಗಿ ಗ್ರಾಮಕ್ಕೆ ಜಯಪುರ ಎಂದು ನಾಮಕರಣ ಮಾಡಿದರು. ಗ್ರಾಮ ದೇವರು ಮಲೆಯ ಋಷಿ ಕೊಣಪ್ಪ ಸ್ವಾಮಿಗೆ ಶ್ವೇತವಸ್ತ್ರ ಸತ್ತಿಗೆ ಮಾಡಿಸಿಕೊಟ್ಟರು. ಈ ಸತ್ತಿಗೆಯು ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ಮೈಸೂರು ಅರಮನೆಗೂ ಜಯಪುರಕ್ಕೂ ಅವಿನಾಭಾವ ಸಂಬಂಧವಿದೆ’ ಎಂದು ಗ್ರಾಮಸ್ಥ ಚೌಡನಾಯಕ ತಿಳಿಸಿದರು.
ದೇವರ ಚಿನ್ನದ ಆಭರಣಗಳ ಮೆರವಣಿಗೆ ನಂದಿ ಧ್ವಜ ಕಂಬ ಹೊರುವ ಬರಡನಪುರ ಗ್ರಾಮಸ್ಥರು ‘ಮಡೆ’ ಬೇಯಿಸಿ ದೇವಿಗೆ ಸಮರ್ಪಿಸುವ ವಾಡಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.