ADVERTISEMENT

ತಿ.ನರಸೀಪುರ: ಕಾಯಕ ದಾಸೋಹ ನೀಡಿದ ಗುರುಮಲ್ಲೇಶ್ವರರು

ಗುರುಕಂಬಳೇಶ್ವರ ದಾಸೋಹ ಶಾಖಾ ಮಠದ ಉದ್ಘಾಟನೆ: ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 4:01 IST
Last Updated 22 ಜನವರಿ 2026, 4:01 IST
ತಿ.ನರಸೀಪುರ ತಾಲ್ಲೂಕಿನ ಹ್ಯಾಕನೂರು ಗ್ರಾಮದಲ್ಲಿ ಗುರುಕಂಬಳೇಶ್ವರ ಶಾಖಾ ಮಠ ಉದ್ಘಾಟನೆ ಹಾಗೂ ಧಾರ್ಮಿಕ‌ಸಭೆಯನ್ನು ದೇವನೂರು ಮಠದ ಮಹಾಂತಸ್ವಾಮೀಜಿಗಳು ಉದ್ಘಾಟಿಸಿದರು
ತಿ.ನರಸೀಪುರ ತಾಲ್ಲೂಕಿನ ಹ್ಯಾಕನೂರು ಗ್ರಾಮದಲ್ಲಿ ಗುರುಕಂಬಳೇಶ್ವರ ಶಾಖಾ ಮಠ ಉದ್ಘಾಟನೆ ಹಾಗೂ ಧಾರ್ಮಿಕ‌ಸಭೆಯನ್ನು ದೇವನೂರು ಮಠದ ಮಹಾಂತಸ್ವಾಮೀಜಿಗಳು ಉದ್ಘಾಟಿಸಿದರು   
ಮಠಗಳಿಂದ ಸಮಾಜಮುಖಿ ಕಾರ್ಯ | ಜನರಿಗೆ ಶರಣ ಚಿಂತನೆ ಬೋಧನೆ | ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ ಮಠಗಳು

ತಿ.ನರಸೀಪುರ: ಪ್ರತಿ ಗ್ರಾಮದಲ್ಲೂ ಭಿಕ್ಷಾ ಮಠಗಳ ಸ್ಥಾಪಿಸಿ, ಕಾಯಕ ಮಾಡಿ ಮಠಕ್ಕೆ ಬಂದ ಜನರಿಗೆ ದಾಸೋಹ ಮಾಡಬೇಕೆಂಬ ಉದ್ದೇಶದಿಂದ ಗುರುಮಲ್ಲೇಶ್ವರರು ನೂರಾರು ಮಠಗಳನ್ನು ಸ್ಥಾಪಿಸಿ ಕಾಯಕ ದಾಸೋಹ ನೀಡಿದರು ಎಂದು ವಾಟಾಳು ಸೂರ್ಯ ಸಿಂಹಾಸನ‌ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಹ್ಯಾಕನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗುರುಕಂಬಳೇಶ್ವರ ದಾಸೋಹ ಶಾಖಾ ಮಠದ ಉದ್ಘಾಟನೆ ಹಾಗೂ ಧಾರ್ಮಿಕ ಸಭೆಯಲ್ಲಿ ಬುಧವಾರ ಅವರು ಮಾತನಾಡಿದರು. ಈ ಹಿಂದೆ ದೊಡ್ಡ ಮಠಗಳನ್ನು ಹೊರತುಪಡಿಸಿ ಭಿಕ್ಷದ ಮಠಗಳಿರಲಿಲ್ಲ. ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಶ್ರೀಗಳು ಮಠಗಳನ್ನು ಸ್ಥಾಪಿಸಿ ಜನರಿಗೆ ಅನುಕೂಲ ಕಲ್ಪಿಸಿದರು. ಹಿಂದೆ ವೀರಶೈವ, ಲಿಂಗಾಯತ ಸಮುದಾಯದವರು ಹಣೆಗೆ ಭಸ್ಮ ಧರಿಸುತ್ತಿರಲಿಲ್ಲ, ಲಿಂಗಧಾರಣೆ ಮಾಡುತ್ತಿರಲಿಲ್ಲ, ಅಷ್ಟಾವರಣದಲ್ಲಿರುವ ಗುರು, ಲಿಂಗ, ಜಂಗಮ, ಪಾದೋಧಕ, ಪ್ರಸಾದ, ರುದ್ರಾಕ್ಷಿ, ಭಸ್ಮ ಇದಾವುದನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಗುರು ಮಲ್ಲೇಶ್ವರರು ಮುಖದ ತುಂಬೆಲ್ಲಾ ಭಸ್ಮ ಧರಿಸುತ್ತಿದ್ದರು. ಇದು ಮುಂದಿನ ಪೀಳಿಗೆಯಿಂದ ಮುಂದುವರೆಯಲಿ ಎಂಬ ಆಶಯ ಶ್ರೀಗಳದ್ದು. ಎಲ್ಲರೂ ಭಸ್ಮ ಧಾರಣೆ ಮಾಡಬೇಕು ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ಜಿ.ಪಂ‌ ಮಾಜಿ ಸದಸ್ಯ ಬಿ.ಎನ್.ಸದಾನಂದ ಮಾತನಾಡಿ, ಮಠಮಾನ್ಯಗಳು ಸಮಾಜ‌ಮುಖಿ ಯಾಗಿದ್ದು, ದಕ್ಷಿಣ ಭಾರತದಲ್ಲಿ ಸಿದ್ಧಗಂಗಾ ಮಠ, ಆದಿಚುಂಚನಗಿರಿಮಠ, ಸುತ್ತೂರುಮಠ ಸೇರಿದಂತೆ ಹಲವು ಮಠಗಳು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಶೈಕ್ಷಣಿಕ, ಧಾರ್ಮಿಕವಾಗಿ ಅಭಿವೃದ್ಧಿಪಡಿಸುವ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿವೆ ಎಂದರು.

ಮಠಗಳು ಶರಣರ ಚಿಂತನೆ ಬೋಧಿಸಿ ಭಕ್ತರ ಸಮಸ್ಯೆಗಳ ಬಗೆಹರಿಸುವ ಪ್ರಯತ್ನ ಮಾಡಿದ್ದರ ಫಲವಾಗಿ ಸಮಾಜವನ್ನು ಒಳ್ಳೆಯ ಮಾರ್ಗಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ. ವೀರಶೈವ ಲಿಂಗಾಯತ ಧರ್ಮಕ್ಕೆ ತನ್ನದೇ ಆದ ಪರಂಪರೆ ಇದೆ. ಎಲ್ಲರೂ ನಮ್ಮವರೆಂಬ ಭಾವನೆಯೊಂದಿಗೆ ಸರ್ವರಿಗೆ ಒಳಿತು ಬಯಸುತ್ತಿದೆ. ವೀರಶೈವ ಸಮಾಜ ಎಂತಹ ಸನ್ನಿವೇಶದಲ್ಲಿ ಸಹ ಯಾವುದನ್ನೂ ಬೇಡಿಲ್ಲ. ನಮಗಿಲ್ಲದಿದ್ದರೂ ಪರರಿಗೆ ಎನ್ನುವ ಮನೋಭಾವನೆಯೊಂದಿಗೆ ಹೃದಯ ವೈಶಾಲ್ಯತೆ ಹೊಂದಿದ್ದಾರೆ ಎಂದರು.

ADVERTISEMENT

ಮಠ ಮಾನ್ಯಗಳು, ಸ್ವಾಮೀಜಿಗಳು ಧರ್ಮದ ಬೆನ್ನೆಲುಬಾಗಿ ಪೋಷಿಸಿಸುತ್ತಿದ್ದಾರೆ. ಮೈಸೂರು ಪ್ರಾಂತ್ಯದಲ್ಲಿ ವಿದ್ಯಾವಂತರ ಸಂಖ್ಯೆ ಒಂದು ಭಾಗವಾದರೆ,ಹಳೇ ಮೈಸೂರು ಪ್ರಾಂತ್ಯದಲ್ಲಿ ಶಿಕ್ಷಣ ಅಭಿವೃದ್ಧಿಯಾಗಿದೆ ಎಂದರೆ ಅದಕ್ಕೆ ಮೂಲ ಕಾರಣ ಮಠ ಮಾನ್ಯಗಳು,ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ನಮ್ಮ‌ರಾಜ್ಯದಲ್ಲಿ ವೀರಶೈವ ಮಠ ಮಾನ್ಯಗಳು ಹಾಗೂ ಇತರೆ ಸಮಾಜದ ಮಠಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ ರಾಜ್ಯದ ಜನರು ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಾಗಿದೆ ಎಂದರು.

ಧಾರ್ಮಿಕ ಸಭೆಗೆ ಮುನ್ನಾ ಸುಕ್ಷೇತ್ರ ಮಲ್ಲನಮೂಲೆ ಮಠದ ಇಮ್ಮಡಿ ಸಿದ್ದಲಿಂಗಸ್ವಾಮಿ ಅವರ ಪಾದಪೂಜೆ ನೆರವೇರಿಸಲಾಯಿತು. ಧಾರ್ಮಿಕ ಸಭೆಯಲ್ಲಿ ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್, ಗ್ರಾಮ ವಿದ್ಯೋದಯ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಪ್ರಕಾಶ್, ನಂದಿನಿ ಸುದೀಪ್, ಗೌಡ್ರ ಟಿ.ನಂಜಪ್ಪ, ಮಲ್ಲನ ಮೂಲೆ ಕಂಬಳೀಶ್ವರ ಮಠದ ಇಮ್ಮಡಿ ಸಿದ್ದಲಿಂಗಸ್ವಾಮಿ, ದೇವನೂರು ಮಠದ ಮಹಾಂತಸ್ವಾಮಿ, ಮಾಡ್ರಹಳ್ಳಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಮರಿಯಾಲ ಮಹಾಸಂಸ್ಥಾನ‌ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮಿ, ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನ ಬಸವಸ್ವಾಮಿ, ಆಲಹಳ್ಳಿ ಪಟ್ಟದ ಮಠದ ಇಮ್ಮಡಿ ಬಸಪ್ಪಸ್ವಾಮಿ, ಕುರುಬನ ಕಟ್ಟೆ ವರುಣ್ ಲಿಂಗರಾಜೇಅರಸ್, ನೆರಗ್ಯಾತನಹಳ್ಳಿ ಮಠದ ಇಮ್ಮಡಿ ಶಿವಕುಮಾರಸ್ವಾಮಿ, ವೀರಪ್ಪ ಒಡೆಯರ ಹುಂಡಿ ಮಠದ ರೇಣುಕಾ ಶಿವಾಚಾರ್ಯ ಸ್ವಾಮಿಗಳು, ಚಿಲಕವಾಡಿ ಬೆಟ್ಟದ ಇಮ್ಮಡಿ ಗುರುಲಿಂಗಸ್ವಾಮಿ, ಹೊಸೂರಂಡಿ ಮಠದ ರಾಜಶೇಖರಸ್ವಾಮಿ, ಸೇರಿದಂತೆ ಗ್ರಾಮಸ್ಥರು, ಯಜಮಾನರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.