
ಹುಣಸೂರು: ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಲಪಿಸುವ ಕೆಲಸ ಅಧಿಕಾರಿಗಳು ಲೋಪವಿಲ್ಲದಂತೆ ಅನುಷ್ಠಾನಗೊಳಿಸಲು ಸೇತುವೆಯಾಗಬೇಕು ಎಂದು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಕಲ್ಕುಣಿಕೆ ರಾಘು ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ಕಳೆದ ಎರಡು ವರ್ಷದಿಂದ ಗ್ಯಾರಂಟಿ ಯೋಜನೆ ವ್ಯವಸ್ಥಿತವಾಗಿ ಜಾರಿಗೊಳಿಸಿ ತಳ ವರ್ಗದವರ ಬೇಡಿಕೆಗೆ ಸ್ಪಂದಿಸುತ್ತಿದೆ. ಈ ಯೋಜನೆಗೆ ₹ 1 ಲಕ್ಷ ಕೋಟಿ ಅನುದಾನ ನೀಡಿದೆ. ಈ ಯೋಜನೆ ದೇಶಕ್ಕೆ ಮಾದರಿಯಾಗಿದ್ದು, ಇತ್ತೀಚಿನ ದಿನದಲ್ಲಿ ಹಲವು ರಾಜ್ಯಗಳು ಕೆಲವು ಗ್ಯಾರಂಟಿ ಯೋಜನೆ ಜಾರಿಗೊಳಿಸಿ, ಸಾಮಾಜಿಕ ಭದ್ರತೆ ನೀಡುವಲ್ಲಿ ಮುಂದಾಗಿರುವುದು ರಾಜ್ಯ ಸರ್ಕಾರಕ್ಕೆ ಸಿಕ್ಕ ಪ್ರಶಂಸೆ ಎಂದರು.
ಸರ್ಕಾರ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಯನ್ನು ಶೇ 100ರಷ್ಟು ಯಶಸ್ವಿಯಾಗಿ, ಅನುಷ್ಠಾನಗೊಳಿಸುವುದರಿಂದ ಆರ್ಥಿಕ, ಸಾಮಾಜಿಕವಾಗಿ ಸಮಸ್ಯೆ ಎದುರಿಸುತ್ತಿರುವ ವರ್ಗಕ್ಕೆ ಆಸರೆಯಾಗಲಿದೆ.
ಗ್ಯಾರಂಟಿ ಯೋಜನೆ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಗಿರಿಜನರ ಹಾಡಿಗಳಿದ್ದು, ಈ ಹಾಡಿಯಲ್ಲಿ ಬದುಕು ಕಟ್ಟಿಕೊಂಡ ಗಿರಿಜನರಿಗೆ ಪಡಿತರ ಸಮರ್ಪಕವಾಗಿ ತಲಪಿಸುವ ಕ್ರಮ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡ ಇಲಾಖೆ ಗಂಭೀರವಾಗಿ ಗಮನಿಸಬೇಕು. ಗಿರಿಜನ ಸಮುದಾಯಕ್ಕೆ ಪಡಿತರ ತಲಪಿಲ್ಲ ಎಂಬ ದೂರು ಜಿಲ್ಲೆಯಲ್ಲಿ ಬಾರದಂತೆ ಎಚ್ಚರಿಕೆ ವಹಿಸಿ ಅನುಷ್ಠಾನಗೊಳಿಸಿ ಎಂದರು.
ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು ಮಾತನಾಡಿ, ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ 75256 ಫಲಾನುಭವಿಗಳು ಯೋಜನೆ ಲಾಭ ಪಡೆದಿದ್ದು ಜೂನ್ ರಿಂದ ಸೆಪ್ಟಂಬರ್ ತಿಂಗಳವರಗೆ ₹ 18 ಕೋಟಿ ಹಣ ಸಂದಾಯವಾಗಿದೆ. ಗೃಹಜ್ಯೋತಿ ಯೋಜನೆಯಲ್ಲಿ ಶೇ 97 ರಷ್ಟು ಫಲಾನುಭವಿಗೆ ಲಾಭ ಸಿಕ್ಕಿದ್ದು, ಯುವನಿಧಿ ಯೋಜನೆಯಲ್ಲಿ ತಾಲ್ಲೂಕಿನ 1159 ವಿದ್ಯಾರ್ಥಿಗಳಿಗೆ ಸಹಾಯಧನ ಸಿಕ್ಕಿದೆ ಎಂದರು.
ನಾಮಫಲಕ: ತಾಲ್ಲೂಕಿನ 41 ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸರ್ಕಾರ ಅನುಷ್ಟಾನಗೊಳಿಸಿರುವ ಪಂಚ ಗ್ಯಾರಂಟಿ ಕುರಿತು ಸಮಗ್ರ ಮಾಹಿತಿ ಫಲಕವನ್ನು ಹಾಕುವುದು ಕಡ್ಡಾಯಗೊಳಿಸಿದ್ದು, ಪಿಡಿಒ ಗಂಭೀರವಾಗಿ ಕ್ರಮವಹಿಸಬೇಕು. ಒಂದು ಸಮಯ ಫಲಕ ಹಾಕದಿದ್ದರೆ ಸಂಬಂಧಿಸಿದ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಸಭೆಯಲ್ಲಿ ಸದಸ್ಯರಾದ ಭಾಮ ಯೋಗೇಶ್, ಕೌಶಿಕ್, ಸುರೇಶ್, ಮುಜೀಬ್, ಇಒ ಹೊಂಗಯ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸೇರಿದಂತೆ ಪಿಡಿಒಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.