ADVERTISEMENT

ಅರಮನೆ ಮಂಡಳಿ | ಆಡಳಿತಾಧಿಕಾರಿ ನೇಮಿಸುವಂತೆ ವಿಶ್ವನಾಥ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 14:10 IST
Last Updated 24 ಜೂನ್ 2025, 14:10 IST
ಎ.ಎಚ್‌.ವಿಶ್ವನಾಥ್‌
ಎ.ಎಚ್‌.ವಿಶ್ವನಾಥ್‌   

ಮೈಸೂರು: ‘ಅರಮನೆ ಮಂಡಳಿ ಸರ್ಕಾರಿ ಸಂಸ್ಥೆಯಾಗಿದ್ದು, ಹಿರಿಯ ಶ್ರೇಣಿಯ ಕೆಎಎಸ್‌ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ಸರ್ಕಾರವು ಕೂಡಲೇ ನಿಯೋಜಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಆಗ್ರಹಿಸಿದರು. 

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮೈಸೂರು ಅರಮನೆ ಕಾಯ್ದೆ–1998ರ ಪ್ರಕಾರ ಅರಮನೆ ನಿರ್ವಹಣೆಗೆ ಆಡಳಿತ ಮಂಡಳಿಯನ್ನು ಸರ್ಕಾರ ರಚಿಸಿದೆ. ಉಪನಿರ್ದೇಶಕ ಹಾಗೂ 113 ಸಿಬ್ಬಂದಿ ನೇಮಿಸಿದೆ. ಆದರೆ, ಆಡಳಿತಾಧಿಕಾರಿಯನ್ನು ಇದುವರೆಗೂ ನೇಮಿಸಿಲ್ಲ’ ಎಂದು ದೂರಿದರು. 

‘ಮಾಹಿತಿ ಹಕ್ಕು ಅಧಿನಿಯಮ–2005ರ ವ್ಯಾಪ್ತಿಗೆ ಮಂಡಳಿಯು ಬರುತ್ತದೆ. ಆದರೂ, ಆಡಳಿತ ಮಂಡಳಿಯು ಸ್ವಾಯತ್ತ ಸಂಸ್ಥೆಯೆಂದು ಅಲ್ಲಿನ ಅಧಿಕಾರಿಗಳು ಕಳೆದ 14 ವರ್ಷದಿಂದ ಪ್ರತಿಪಾದಿಸುತ್ತಾ ಬಂದಿದ್ದಾರೆ. ಅಲ್ಲಿನ ಅವ್ಯವಹಾರ, ಅಕ್ರಮದ ಬಗ್ಗೆ ತನಿಖೆ ಆಗುತ್ತಿಲ್ಲ. ಲೂಟಿಯಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ’ ಎಂದು ಆರೋಪಿಸಿದರು. 

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ. ಎಲ್ಲೆಡೆ ತಮಗೆ ಬೇಕಾದವರನ್ನೇ ತುಂಬಲಾಗಿದೆ. ಅರಮನೆಯನ್ನು ಅಡವಿಟ್ಟರೂ ಅವರಿಗೆ ಚಿಂತೆಯಿಲ್ಲ’ ಎಂದರು. 

‘ಜೂನ್ 26ರಂದು ದಸರಾ ಉನ್ನತ ಮಟ್ಟದ ಸಭೆ ಇದ್ದು, ಅಧಿಕಾರಿಗಳು ಮುಖ್ಯಮಂತ್ರಿ ಅವರನ್ನೇ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಪ್ರವಾಸಿಗರ ಟಿಕೆಟ್‌ ದರ ಏರಿಕೆ ಮಾಡಲಾಗಿದೆ. ಅರಮನೆ ಕಡೆಗೆ ಗಮನ ಹರಿಸಬೇಕು. ಇಲ್ಲವೇ ರಾಜವಂಶಸ್ಥರಿಗೆ ವಹಿಸಿಬಿಡಲಿ’ ಎಂದು ಹೇಳಿದರು. 

‘ಜಿಟಿಡಿ ಪ್ರಾಬಲ್ಯ ತಗ್ಗಿಸುವ ಉದ್ದೇಶ’ 

‘ಶಾಸಕರಾದ ಜಿ.ಟಿ. ದೇವೇಗೌಡ ಜಿ.ಡಿ.ಹರೀಶ್‌ ಗೌಡ ಸಹಕಾರ ಕ್ಷೇತ್ರದಲ್ಲಿ ಮೊದಲಿನಿಂದಲೂ ಇದ್ದಾರೆ. ಸಹಕಾರ ಕ್ಷೇತ್ರದಲ್ಲಿ ಅವರ ಹಿಡಿತ ತಪ್ಪಿಸುವುದಕ್ಕಾಗಿ ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಗೆ ಕೆಲ ಶಾಸಕರು ಸ್ಪರ್ಧಿಸುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ವಿಶ್ವನಾಥ್ ಉತ್ತರಿಸಿದರು. 

‘ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಶಾಸಕ ಬಿ.ಆರ್.ಪಾಟೀಲ್ ಧ್ವನಿ ಎತ್ತಿದ್ದಾರೆ. ಶಾಸಕ ರಾಜು ಕಾಗೆ ಕೂಡ ಮಾತನಾಡಿದ್ದಾರೆ. ಆಶ್ರಯ ಸಮಿತಿಗೆ ಗ್ರಾಮಸಭೆ ಮೂಲಕ ಆಯ್ಕೆ ಆಗಬೇಕು. ಶಾಸಕರ ಹಂತದಲ್ಲೇ ಮನೆಗಳು ಮಾರಾಟ ಆಗುತ್ತಿವೆ’ ಎಂದು ವಿಶ್ವನಾಥ್ ಆರೋಪಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.