ADVERTISEMENT

ನೆರವಾದವರ ಮರೆಯುವ ಸಿದ್ದರಾಮಯ್ಯ: ಎಚ್‌.ವಿಶ್ವನಾಥ್‌ ವಾಗ್ದಾಳಿ

ಜನಾದೇಶ ಸಿಕ್ಕಿರುವುದರಿಂದ ಕಾಂಗ್ರೆಸ್ ಸರ್ಕಾರ ಉಳಿಯಬೇಕು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 7:24 IST
Last Updated 19 ಏಪ್ರಿಲ್ 2024, 7:24 IST
ಎಚ್‌. ವಿಶ್ವನಾಥ್
ಎಚ್‌. ವಿಶ್ವನಾಥ್   

ಮೈಸೂರು: ‘ನೆರವಾದವರನ್ನು ಮರೆಯುವ, ಕೃತಜ್ಞತೆಯೇ ಇಲ್ಲದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ವಾಗ್ದಾಳಿ ನಡೆಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘2006ರಲ್ಲಿ ನಡೆದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಕಲೀಂ ಉಲ್ಲಾಖಾನ್‌ ಸ್ಪರ್ಧಿಸಿದ್ದರು. ಅವರು ನಾಮಪತ್ರ ವಾಪಸ್ ಪಡೆಯುವಂತೆ ನಾವು ಮಾಡಿದ್ದೆವು. ಆದರೆ, ಕಲೀಂ ಅವರಿಗೆ ಯಾವುದೇ ಸ್ಥಾನಮಾನ ಕೊಡಲಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ’ ಎಂದು ದೂರಿದರು.

‘ಆಗ ಕಲೀಂ ನಾಮಪತ್ರ ವಾಪಸ್ ಪಡೆಯದೇ ಇದ್ದಿದ್ದರೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನವೇ ಮುಗಿದು ಹೋಗುತ್ತಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಮನವೊಲಿಕೆಗೂ ಕಲೀಂ ಜಗ್ಗಿರಲಿಲ್ಲ. ನಾವೆಲ್ಲರೂ ಸಿದ್ದರಾಮಯ್ಯ ಅವರನ್ನೂ ಕರೆದೊಯ್ದು ಕಣದಿಂದ ಹಿಂದೆ ಸರಿಯುವಂತೆ ಮಾಡಿದ್ದೆವು’ ಎಂದು ತಿಳಿಸಿದರು.

ADVERTISEMENT

ಕಲೀಂ ಉಲ್ಲಾ ಮಾತನಾಡಿ, ‘ಕಟ್ಟಾ ಕಾಂಗ್ರೆಸ್ಸಿಗ ನಾನು. ಆದರೆ, ಪಕ್ಷದಲ್ಲಿ ಅನ್ಯಾಯ ಆಗುತ್ತಿರುವುದನ್ನು ಕಂಡು 2004ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಆಗ ಕಾಂಗ್ರೆಸ್ ಸೋಲನುಭವಿಸಿತ್ತು. ಕಾರ್ಯಕರ್ತರಿಗೆ ಅನ್ಯಾಯ ಮುಂದುವರಿದಿದ್ದರಿಂದ 2006ರ ಉಪ ಚುನಾವಣೆಯಲ್ಲಿ (ಚಾಮುಂಡೇಶ್ವರಿ) ಸ್ಪರ್ಧಿಸಿದ್ದೆ. ಆದರೆ, ವಿಶ್ವನಾಥ್ ಮೊದಲಾದವರ ಕಾರಣದಿಂದ ಹಿಂದೆ ಸರಿದೆ. ಪ್ರಸ್ತುತ ಕಾಂಗ್ರೆಸ್‌ನಲ್ಲೇ ಇದ್ದೇನೆ. ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ‌ನಿರ್ಧಾರ ಮಾಡುತ್ತೇನೆ’ ಎಂದು ತಿಳಿಸಿದರು.

ಮೂಲ ಕಾಂಗ್ರೆಸ್ಸಿಗರು ಮರೆ: ‘ಕಾಂಗ್ರೆಸ್‌ನಲ್ಲೀಗ ಮೂಲ ಕಾಂಗ್ರೆಸ್‌ನವರು ಮರೆಯಾಗಿ ಹೋಗಿದ್ದಾರೆ’ ಎಂದು ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದರು.

‘ಸೋತವರೆಲ್ಲಾ ಈಗ ಆ ಪಕ್ಷದ ಹೈಕಮಾಂಡ್ ಆಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಜನರು ಕಾಂಗ್ರೆಸ್‌ಗೆ ಐದು ವರ್ಷಗಳವರೆಗೆ ಜನಾದೇಶ ನೀಡಿದ್ದಾರೆ. ಆದ್ದರಿಂದ ಈ ಸರ್ಕಾರ ಉಳಿಯಬೇಕು’ ಎಂದರು.

‘ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಇತ್ತು. ಆಗ, ಎಚ್‌.ಡಿ. ದೇವೇಗೌಡರು ಮೈಸೂರಿನಿಂದ ಸ್ಪರ್ಧಿಸುವುದಾಗಿ ಕೇಳಿಕೊಂಡಿದ್ದರು. ಆದರೆ, ಆಗ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು. ಈಗ, ಒಕ್ಕಲಿಗರ ಮೇಲೆ ಪ್ರೀತಿ ಬಂದಿರುವಂತೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

ರಾಜ್ಯದಲ್ಲಿ ಸಂಪನ್ಮೂಲ ವ್ಯವಸ್ಥೆ ಸರಿ ಇದ್ದಾಗ ಮಾತ್ರ ಗ್ಯಾರಂಟಿಗಳನ್ನು ಕೊಡಬೇಕು. ಈಗ ನೀಡಿದ್ದರಿಂದ ಆರ್ಥಿಕ ವ್ಯವಸ್ಥೆ ಹಳ್ಳ ಹಿಡಿದಿದೆ. ಮನೆಗಳಲ್ಲಿ ಪತಿ–ಪತ್ನಿ ನಡುವೆ ಜಗಳ ಗ್ಯಾರಂಟಿ ಆಗಿದೆ
- ಎಚ್‌. ವಿಶ್ವನಾಥ್ ವಿಧಾನ ಪರಿಷತ್ ಸದಸ್ಯ

‘ಡಿಕೆಶಿ ಮುಖ್ಯಮಂತ್ರಿ ಆಗಬಾರದೇಕೆ?’

‘ಡಿ.ಕೆ.ಶಿವಕುಮಾರ್‌ ‌ಮುಖ್ಯಮಂತ್ರಿ ಆಗಬಾರದೇಕೆ? ಸರ್ಕಾರ ಬರಲು ಅವರ ಕೊಡುಗೆ ಏನೂ ಇಲ್ಲವೇ? ಅವರು ಪಕ್ಕಾ ಕಾಂಗ್ರೆಸಿಗ. ಅಧಿಕಾರ ಹಂಚಿಕೆ ಬಗ್ಗೆ ದೆಹಲಿ ಮಟ್ಟದಲ್ಲಿ ತೀರ್ಮಾನವಾಗಿದೆ. ಇಲ್ಲದಿದ್ದರೆ ಡಿಕೆಶಿ ಸುಮ್ಮನೆ ಬಿಟ್ಟು ಬಿಡುತ್ತಾರೆಯೇ? ಹೀಗಿದ್ದರೂ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕು ಎನ್ನುವುದು ಚಮಚಾಗಿರಿ ಆಗುತ್ತದೆಯಷ್ಟೆ’ ಎಂದು ಎಚ್‌.ವಿಶ್ವನಾಥ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.