ADVERTISEMENT

ಪಠ್ಯ ಪರಿಷ್ಕರಣೆ: ಧ್ವನಿ ಎತ್ತದ ರಾಜಕಾರಣಿ, ಸಾಹಿತಿಗಳು- ವಿಶ್ವನಾಥ್‌ ಆಕ್ರೋಶ

‘ನೀವೆಲ್ಲಾ ಸರ್ಕಾರದ ಫಲಾನುಭವಿಗಳೇ?’

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 14:31 IST
Last Updated 5 ಜೂನ್ 2022, 14:31 IST
ಎಚ್‌.ವಿಶ್ವನಾಥ್‌ 
ಎಚ್‌.ವಿಶ್ವನಾಥ್‌    

ಮೈಸೂರು: ‘ಪರಿಷ್ಕೃತ ಪಠ್ಯವನ್ನೇ ಮುಂದುವರಿಸುವುದಾಗಿ ಸರ್ಕಾರ ಹೇಳಿದೆ. ಇದರ ಬಗ್ಗೆ ರಾಜಕಾರಣಿಗಳು, ಸಾಹಿತಿಗಳು, ಬುದ್ಧಿಜೀವಿಗಳು ಯಾಕೆ ಧ್ವನಿ ಎತ್ತುತ್ತಿಲ್ಲ, ನೀವೆಲ್ಲಾ ಸರ್ಕಾರದ ಫಲಾನುಭವಿಗಳೇ’ ಎಂದು ವಿಧಾನಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಪ್ರಶ್ನಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ, ಕನ್ನಡ ಸಾಹಿತ್ಯ ಕಲಾಕೂಟ, ಚಿಂತನ ಚಿತ್ತಾರದಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ.ಬಸವರಾಜ ನಾಯ್ಕರ ಅವರ ‘ಅಮರಶಿಲ್ಪಿ ಜಕ್ಕಣ ಮತ್ತು ದೇಶಾಭಿಮಾನಿ ರಾಯಣ್ಣ’ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು.

‘ಪ್ರಥಮ ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು ಎಲ್ಲಿ? ಅವರ ಬಗ್ಗೆ ಅವಹೇಳನ ಮಾಡುವ ನಾಯಿ–ನರಿಗಳೆಲ್ಲಿ? ಪಠ್ಯದಲ್ಲಿ ಬಸವಣ್ಣನಿಗೆ ಅವಮಾನ ಮಾಡಲಾಗಿದೆ. ಬುದ್ಧನ ಪಾಠವನ್ನು ತೆಗೆದಿದ್ದಾರೆ. ಶಿಕ್ಷಣ, ಸಂಸ್ಕೃತಿ ಹಾಳಾದರೆ ಇಡೀ ದೇಶವೇ ನಾಶವಾಗುತ್ತದೆ. ಪಠ್ಯ ಪರಿಷ್ಕರಣೆ ವಿಷಯದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವುದು ಯಾರಿಗೂ ಗೌರವ ತರುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಅಕ್ಷರ ಸಂಸ್ಕೃತಿ, ಕನ್ನಡ ಸಾಹಿತ್ಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ‘ಧಮ್‌ ಇದೆಯೇನೋ... ಅವನು ನಪುಂಸಕ...’ ಇಂತಹ ಪದಗಳ ಬಳಕೆಯಾಗುತ್ತಿದೆ. ಕನ್ನಡ ಭಾಷೆಯನ್ನು ರಾಜಕಾರಣಿಗಳು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆ? ಇದರ ವಿರುದ್ಧ ಸಾಹಿತಿಗಳು ಯಾಕೆ ಧ್ವನಿ ಎತ್ತುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ವೈದಿಕ ಪದ್ಧತಿ ವಿರುದ್ಧ ದಂಗೆ ಎದ್ದು ಹೊಸ ಧರ್ಮವನ್ನು ಕಟ್ಟಿದವರು ಬಸವಣ್ಣ. ಈ ಧರ್ಮದಲ್ಲಿ ಅನೇಕ ಜಾತಿ ಜನರಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿದ ಸಂದರ್ಭದಲ್ಲಿ ಇದರ ವಿರುದ್ಧ ನಾನು ಹೋರಾಟ ಮಾಡಿದೆ. ಆದರೆ, ಅನೇಕ ಮಠಾಧೀಶರು ಇದರ ವಿರುದ್ಧ ಧ್ವನಿ ಎತ್ತಲೇ ಇಲ್ಲ. ಸರ್ಕಾರದ ಫಲಾನುಭವಿಗಳಾಗಿದ್ದರಿಂದ ಅವರು ಧ್ವನಿ ಎತ್ತಲಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.