
ಮೈಸೂರು: ‘ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕೇವಲ ಸರ್ಕಾರದ ಕೆಲಸವಲ್ಲ. ಇದರಲ್ಲಿ ನಾಗರಿಕರ ಜವಾಬ್ದಾರಿಯೂ ಇದೆ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ಹೇಳಿದರು.
ಮಹಾರಾಜ ಕಾಲೇಜು ಹಾಗೂ ಮೈಸೂರು ವಿಶ್ವವಿದ್ಯಾಲಯ ಸಂಜೆ ಕಾಲೇಜಿನಿಂದ ನಂಜನಗೂಡು ತಾಲ್ಲೂಕು ಬೊಕ್ಕಹಳ್ಳಿ ಹಾಗೂ ಬೊಕ್ಕಹಳ್ಳಿ ಹೊಸೂರಿನಲ್ಲಿ ಏರ್ಪಡಿಸಿರುವ ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛತೆ, ಸರ್ಕಾರದ ಕೆಲಸ ಎಂಬ ಮನೋಭಾವ ಗ್ರಾಮೀಣ ಜನರಲ್ಲಿಯೂ ಬಂದಿದ್ದು, ಈ ಬಗ್ಗೆ ಸರಿಯಾದ ಜಾಗೃತಿ ಮೂಡಿಸಬೇಕಿದೆ. ಚರಂಡಿಗಳಲ್ಲಿ ಪ್ಲಾಸ್ಟಿಕ್ ವಸ್ತು ಹಾಕುತ್ತಿದ್ದಾರೆ. ಈ ಬಗ್ಗೆಯೂ ಅವರಿಗೆ ಮನದಟ್ಟು ಮಾಡಿಕೊಡಬೇಕಿದೆ ಎಂದು ತಿಳಿಸಿದರು.
ಮಹಾರಾಜ ಕಾಲೇಜಿನ ಹೆಚ್ಚುವರಿ ಪ್ರಾಂಶುಪಾಲ ಪ್ರೊ.ಗೋವಿಂದರಾಜು ಮಾತನಾಡಿ, ‘ಎನ್ಎಸ್ಎಸ್ ಇವತ್ತು ದೇಶಾದ್ಯಂತ ವ್ಯಾಪಕವಾಗಿ ಹರಡಿದೆ. ಎಲ್ಲಾ ವಿವಿ ಹಾಗೂ ಕಾಲೇಜುಗಳಲ್ಲಿ ಯುವಜನರು ಸಕ್ರಿಯವಾಗಿ ತೊಡಗಿಸಿಕೊಂಡು, ದೇಶ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ’ ಎಂದರು.
ಮೈಸೂರು ವಿಶ್ವವಿದ್ಯಾನಿಲಯ ಸಂಜೆ ಕಾಲೇಜಿನ ಪ್ರಾಂಶುಪಾಲ ಕೆ.ತಿಮ್ಮಯ್ಯ ಮಾತನಾಡಿ, ‘ಶಿಬಿರಾರ್ಥಿಗಳು ಗ್ರಾಮದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಗಮನಹರಿಸಿ, ವರದಿ ತಯಾರಿಸಬೇಕು. ಸರ್ಕಾರಿ ಯೋಜನೆಗಳು ಎಲ್ಲರಿಗೂ ತಲುಪುತ್ತಿವೆಯೇ ಎಂಬುದನ್ನು ನೋಡಬೇಕು’ ಎಂದರು.
ಗ್ರಾಮದ ಮುಖಂಡರಾದ ಸೋಮಸುಂದರ್, ಸಿದ್ದಪ್ಪ ಮಾತನಾಡಿದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮುಖಂಡರಾದ ರೇವಣ್ಣ, ಗೋವಿಂದನಾಯಕ, ವಿಜಯಕುಮಾರ್, ಬಸವರಾಜು, ಮಹಾರಾಜ ಕಾಲೇಜು ಎನ್ಎಸ್ಎಸ್ ಕಾರ್ಯಾಕ್ರಮಾಧಿಕಾರಿ ಎಸ್.ಕೃಷ್ಣಪ್ಪ, ಕಾರ್ಯಾಕ್ರಮಾಧಿಕಾರಿ ಮಧುಸೂದನ್ ಪೂರೀಗಾಲಿ, ಸಿದ್ದರಾಜು, ಆನಂದ್, ವಿವಿ ಸಂಜೆ ಕಾಲೇಜಿನ ಕಾರ್ಯಕ್ರಮಾಧಿಕಾರಿ ಆರ್.ನಿಂಗರಾಜು, ಸಹ ಶಿಬಿರಾಧಿಕಾರಿ ಬಿ.ಶಿವಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.