ADVERTISEMENT

ಹನಗೋಡಿನಲ್ಲಿ ಸುಗ್ಗಿ-ಹುಗ್ಗಿ ಸಂಭ್ರಮ

ಮೆರವಣಿಗೆಗೆ ಮೆರುಗು ನೀಡಿದ ಹಲವು ಜನಪದ ಕಲಾತಂಡಗಳು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 11:28 IST
Last Updated 19 ಫೆಬ್ರುವರಿ 2020, 11:28 IST
ಸುಗ್ಗಿ ಹುಗ್ಗಿ ಜಾನಪದ ಸಂಭ್ರಮದ ಮೆರವಣಿಗೆಯಲ್ಲಿ ಸೋಮನ ಕುಣಿತ.
ಸುಗ್ಗಿ ಹುಗ್ಗಿ ಜಾನಪದ ಸಂಭ್ರಮದ ಮೆರವಣಿಗೆಯಲ್ಲಿ ಸೋಮನ ಕುಣಿತ.   

ಹನಗೋಡು: ಹಳ್ಳಿಗಾಡಿನ ರೈತರ ಸುಗ್ಗಿಯನ್ನು ನೆನಪಿಸುವ ಸುಗ್ಗಿ-ಹುಗ್ಗಿ ಕಾರ್ಯಕ್ರಮದಲ್ಲಿ ಗ್ರಾಮೀಣ ಸೊಗಡು ಝೇಂಕರಿಸಿತು. ಈ ಸುಗ್ಗಿಯ ಸಂಭ್ರಮವನ್ನು ಕಣ್ತುಂಬಿಕೊಂಡ ಹಳ್ಳಿಗರು ಸಂತಸಪಟ್ಟರು.

ತಾಲ್ಲೂಕಿನ ಹನಗೋಡಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರಾಮಪಂಚಾಯಿತಿ, ತಾಲ್ಲೂಕು ಆಡಳಿತ ಹಾಗೂ ಸರ್ಕಾರಿ ಪದವಿ ಕಾಲೇಜಿನ ಸಹಯೋಗದಲ್ಲಿ ನಡೆದ ಸುಗ್ಗಿ-ಹುಗ್ಗಿ ಸಂಭ್ರಮದಲ್ಲಿ ನಾನಾ ಜನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿದವು.

ಗ್ರಾಮ ಪಂಚಾಯಿತಿ ಆವರಣದಲ್ಲಿ ನಿರ್ಮಿಸಿದ್ದ ಗ್ರಾಮೀಣ ಸೊಗಡಿನ ವೇದಿಕೆಯಲ್ಲಿ ರೈತರು ಬೆಳೆದ ದವಸ-ಧಾನ್ಯ, ಕೃಷಿ ಚಟುವಟಿಕೆಯಲ್ಲಿ ಬಳಸುವ ಕೃಷಿ ಉಪಕರಣಗಳನ್ನು ಸಾಂಗವಾಗಿ ಜೋಡಿಸಿ, ಗಮನಸೆಳೆದ ಸುಗ್ಗಿ-ಹುಗ್ಗಿಯ ವೇದಿಕೆಯು ಕೃಷಿಕರು, ಮಹಿಳೆಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸಿತು.

ADVERTISEMENT

ಹಿಂದೆ ಮಹಿಳೆಯರು ರಾಗಿಕಲ್ಲು ಬೀಸುವ ರೀತಿಯಲ್ಲೇ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಸದಸ್ಯೆ ಡಾ.ಪುಷ್ಪಅಮರ್‌ನಾಥ್, ಸದಸ್ಯರಾದ ಕಟ್ಟನಾಯಕ, ಸಾವಿತ್ರಿಮಂಜು, ತಾ.ಪಂ.ಸದಸ್ಯೆ ರೂಪಾನಂದೀಶ್, ಗ್ರಾ.ಪಂ.ಅಧ್ಯಕ್ಷೆ ಸುಶೀಲಮ್ಮ ಮತ್ತಿತರ ಗಣ್ಯರು ಬೀಸು ಕಲ್ಲಿಗೆ ರಾಗಿ ಸುರಿಯುವ ಮೂಲಕ ಹಾಗೂ ಭತ್ತ-ರಾಗಿ ರಾಶಿಗೆ ಮತ್ತು ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದ್ದು ವಿಶಿಷ್ಟವಾಗಿತ್ತು.

ಮೈಸೂರಿನ ವೆಂಕಟಾಚಲಯ್ಯ ಮತ್ತು ತಂಡ ಹಾಗೂ ಧರಣಿ ಭಜನಾ ಮಂಡಳಿಯ ಭಕ್ತಿಗೀತೆ, ಭಜನೆಯೊಂದಿಗೆ ಆರಂಭದ ನಂತರ ತಿ.ನರಸೀಪುರ ತಾಲ್ಲೂಕಿನ ಹಳ್ಳಿಯ ರೈತಾಪಿ ಮಹಿಳೆಯರು ಸೋಬಾನೆ ಪದ, ನನ್ನವ್ವ ಸಾಂಸ್ಕೃತಿಕ ಕಲಾತಂಡದ ಸುಗಮ ಸಂಗೀತದೊಂದಿಗೆ ಜಾನಪದ ಸೊಗಡಿನ ಗೀತೆಗಳು, ಮೈಸೂರಿನ ಶುಭ ರಾಘವೇಂದ್ರ ತಂಡದ ಗೀಗೀಪದ, ಜಾನಪದ ಗೀತೆಗಳು ಸಭಿಕರ ಮನಸೋರೆಗೊಂಡಿತು.

ಮೈಸೂರಿನ ಸುಮಾ ರಾಜ್‌ಕುಮಾರ್ ನಡೆಸಿಕೊಟ್ಟ ಮಾತನಾಡುವ ಗೊಂಬೆಯಂತೂ ಮಕ್ಕಳನ್ನು, ದೊಡ್ಡವರನ್ನು ತನ್ನ ತಮಾಷೆ ಮಾತಿನ ಮೂಲಕ ನಗೆಗಡಲಲ್ಲಿ ಮುಳುಗಿಸಿತು.

ಮೆರವಣಿಗೆಯಲ್ಲಿ ಹಸು-ಕರು, ಕಳಸಹೊತ್ತ ಮಹಿಳೆಯರು, ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಮಂಗಳವಾದ್ಯ, ಬೀಸುಕಂಸಾಳೆ, ನಗಾರಿ, ಡೊಳ್ಳುಕುಣಿತ, ಸುಗ್ಗಿಕುಣಿತ, ವೀರಭದ್ರಕುಣಿತ, ಪಟಕುಣಿತ, ಕೋಲಾಟ, ಸೋಮನಕುಣಿತ, ಚಿಲಿಪಿಲಿಗೊಂಬೆ ಇಡೀ ಗ್ರಾಮವನ್ನೇ ಜಾನಪದ ಲೋಕಕ್ಕೆ ಕೊಂಡೊಯ್ದರು.

ವೇದಿಕೆ ಕಾರ್ಯಕ್ರದಲ್ಲಿ ಮಾತನಾಡಿದ ಜಿ.ಪಂ.ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಡಾ.ಪುಷ್ಪಅಮರ್‌ನಾಥ್, ತಾ.ಪಂ.ಸದಸ್ಯೆ ರೂಪಾನಂದೀಶ್, ತಹಸೀಲ್ದಾರ್ ಬಸವರಾಜ್, ಪಿ.ಡಿ.ಓ. ನಾಗೇಂದ್ರಕುಮಾರ್ ಈ ಸುಗ್ಗಿ ಹುಗ್ಗಿ ಅರ್ಥಪೂರ್ಣವಾಗಿದ್ದು, ರೈತರ ಸುಗ್ಗಿಯ ಸಂಭ್ರಮವನ್ನು ಪ್ರತಿಬಿಂಬಿಸಲಿದೆ ಎಂದು ಪ್ರಶಂಸಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ ರೈತರು, ಮಹಿಳೆಯರು, ರಂಗಕರ್ಮಿಗಳು, ಹಾಗೂ ಯುವ ಸಮುದಾಯವನ್ನು ಮುಂದಿಟ್ಟು ವರ್ಷವಿಡೀ ಕಾರ್ಯಕ್ರಮ ಆಚರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಶಶಿಕಲಾ, ಮಹಿಳಾಕಾಲೇಜಿನ ಎನ್.ಎಸ್.ಎಸ್.ಸಂಚಾಲಕ ಡಾ.ಕೆ.ಎಸ್.ಭಾಸ್ಕರ್, ವಿವಿಧ ಸಂಘ-ಸಂಸ್ಥೆಗಳವರು ಭಾಗವಹಿಸಿದ್ದರು. ಎರಡು ಸಾವಿರಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಸುಗ್ಗಿ ಹುಗ್ಗಿ ಸಂಭ್ರಮ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.