
ಹುಣಸೂರು: ಹುಣಸೂರು ನಗರದಲ್ಲಿ ಡಿ.4 ರಂದು ನಡೆಯಲಿರುವ ಹನುಮ ಜಯಂತಿ ಉತ್ಸವಕ್ಕೆ ಡಿ.ಜೆ ರದ್ದುಗೊಳಿಸಿದ್ದು ಸಮಿತಿ ಮತ್ತು ಭಕ್ತರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಎಸ್‌ಪಿ ವಿಷ್ಣುವರ್ಧನ್ ಎನ್ ಹೇಳಿದರು.
ನಗರದ ಪೊಲೀಸ್ ಠಾಣೆಯಲ್ಲಿ ಹನುಮಜಯಂತಿ ಸೌಹಾರ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಕಳೆದ ಸಾಲಿನಲ್ಲಿಯೂ ಡಿಜೆ ರದ್ದುಗೊಳಿಸಿದ್ದು, ಹನುಮ ಭಕ್ತರು ಇಲಾಖೆ ತೀರ್ಮಾನಕ್ಕೆ ಸಹಕರಿಸಿದ್ದೀರಿ. ಈ ಬಾರಿ ಸಾಂಪ್ರದಾಯಿಕ ಬ್ಯಾಂಡ್ ಹಾಗೂ ನಾದಸ್ವರಗಳನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ. ಮೆರವಣಿಗೆ ಆಕರ್ಷಣೆಗೆ ಜಾನಪದ ಕಲಾತಂಡಗಳಿಗೆ ಅವಕಾಶ ಇದೆ ಎಂದರು.
ಹನುಮಜಯಂತಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬಂಟಿಗ್ ಮತ್ತು ಬ್ಯಾನರ್ ಅಳವಡಿಸುವ ಹಾಗೂ ಕಾಯುವ ಜವಾಬ್ದಾರಿಯನ್ನು ಸಮಿತಿಗೆ ವಹಿಸಲಾಗಿದೆ. ಪ್ರತಿಯೊಂದು ಮೊಹಲ್ಲಾಗಳಿಗೆ ಪೊಲೀಸ್ ನಿಯೋಜಿಸುವ ಕೆಲಸ ಇಲಾಖೆ ಮಾಡಲಿದೆ. ಬ್ಯಾನರ್ ಕಟ್ಟುವ ವಿಷಯದಲ್ಲಿ ಸಮಿತಿ ಎಚ್ಚರಿಕೆ ಕ್ರಮವಹಿಸಬೇಕು. ಧಾರ್ಮಿಕ ಕಟ್ಟು ನಿಟ್ಟು ಇರುವ ಸ್ಥಳದಲ್ಲಿ ಕಟ್ಟುವ ಪ್ರಯತ್ನ ಮಾಡದಂತೆ, ಶಾಂತಿ ಕದಡದಂತೆ ಎಚ್ಚರವಹಿಸಿ ಎಂದು ಸೂಚಿಸಿದರು.
ಸುಳ್ಳು ವದಂತಿ: ಹನುಮ ಜಯಂತಿ ಹತ್ತಿರ ಬರುತ್ತಿದ್ದಂತೆ ಶಾಂತಿ ಕದಡುವ ಸುಳ್ಳು ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡದಂತೆ ಸಮಿತಿ ಪದಾಧಿಕಾರಿಗಳು ಎಚ್ಚರ ವಹಿಸಬೇಕು. ಸುಳ್ಳು ವದಂತಿಗಳಿಗೆ ಭಕ್ತರು ಕಿವಿಗೊಡದೆ ಎಚ್ಚರವಹಿಸಿ. ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಧಾರ್ಮಿಕ ಸಂಭ್ರಮ ಆಚರಿಸುವುದರಿಂದ ಎಲ್ಲರೂ ನೆಮ್ಮದಿಯಿಂದ ಪ್ರಾರ್ಥನೆ ಸಲ್ಲಿಸಲು ಸಾಧ್ಯ ಎಂದರು.
ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಹುಣಸೂರು ತಾಲ್ಲೂಕಿನಲ್ಲಿ ಎಲ್ಲಾ ವರ್ಗಕ್ಕೆ ಸೇರಿದ ಜನರು ಬದುಕು ಕಟ್ಟಿಕೊಂಡು ಮಿನಿ ಇಂಡಿಯಾ ಆಗಿದೆ. ಈ ಕ್ಷೇತ್ರದಲ್ಲಿ ಒಬ್ಬರನ್ನೊಬ್ಬರು ವಿಶ್ವಾಸದಿಂದ ಪ್ರೀತಿಸುವ ಮನಸ್ಸುಗಳನ್ನು ಕಂಡಿದ್ದೇನೆ. ಪ್ರತಿಯೊಂದು ಜಯಂತಿಯಲ್ಲೂ ಎಲ್ಲಾ ಧರ್ಮದವರು ಭಾಗವಹಿಸುವಿಕೆ ಕೋಮು ಸೌಹಾರ್ದಕ್ಕೆ ಸಾಕ್ಷಿ ಎಂದರು.
ಕಾನೂನು ಚೌಕಟ್ಟಿನಲ್ಲಿ ಹನುಮಜಯಂತಿ ಆಚರಿಸುವುದರಿಂದ ಎಲ್ಲರಿಗೂ ನೆಮ್ಮದಿ ಸಿಗಲಿದೆ. ಕಿಡಿಗೇಡಿಗಳು ಈ ರೀತಿಯ ಕಾರ್ಯಕ್ರಮಗಳಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಬಹುದು. ಆ ರೀತಿ ಕಂಡು ಬಂದಲ್ಲಿ ತಾಲ್ಲೂಕು ಆಡಳಿತ ಅಥವಾ ಪೊಲೀಸರಿಗೆ ಮಾಹಿತಿ ನೀಡುವುದರಿಂದ ಸೂಕ್ತ ಕ್ರಮ ತೆಗೆದುಕೊಳ್ಳಲು ಸಹಕಾರವಾಗಲಿದೆ ಎಂದರು.
ಸಭೆಯಲ್ಲಿ ಹನುಮಜಯಂತಿ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಎಚ್.ವಿ.ಮಹದೇವ್, ಖಾಲಿದ್, ಸೇರಿದಂತೆ ಇತರರು ಮಾತನಾಡಿದರು. ಸಭೆಯಲ್ಲಿ ಡಿವೈಎಸ್ಪಿ ರವಿ, ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್, ಹನುಮ ಜಯಂತಿ ಸಮಿತಿಯ ಅನಿಲ್, ಕಲ್ಕುಣಿಕೆ ರಾಘು, ವರದರಾಜ್ ಪಿಳ್ಳೆ, ರಮೇಶ್, ಚಂದ್ರಮೌಳಿ, ಮಹೇಶ್, ಕೃಷ್ಣರಾಜಗುಪ್ತ, ಯೂನಿಸ್, ಸುಹೇಲ್, ಮುಜಾಮಿಲ್ಮ ಶಾಹೆಜಮಾ, ನಯಾಜ್, ಇಮ್ರಾನ್, ಅಯೂಬ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.