ADVERTISEMENT

ಮೈಸೂರು | ಹನುಮಾನ್ ಚಾಲೀಸಾ ಪಾರಾಯಣ: 45 ಸಾವಿರ ಆಸನ ಸಿದ್ಧತೆ–ಎಚ್‌.ವಿ. ರಾಜೀವ್

ಭಕ್ತರಿಗೆ ಕುಡಿಯುವ ನೀರು, ಅನ್ನಪ್ರಸಾದದ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 6:10 IST
Last Updated 13 ಫೆಬ್ರುವರಿ 2026, 6:10 IST
ಸಾಮೂಹಿಕ ಹನುಮಾನ್‌ ಚಾಲೀಸಾ ಪಾರಾಯಣಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದಿರುವ ಸಿದ್ಧತೆಯನ್ನು ಕೆಪಿಸಿಸಿ ಸದಸ್ಯ ಎಚ್‌.ವಿ. ರಾಜೀವ್ ಹಾಗೂ ಆಯೋಜಕರು ಪರಿಶೀಲಿಸಿದರು
ಸಾಮೂಹಿಕ ಹನುಮಾನ್‌ ಚಾಲೀಸಾ ಪಾರಾಯಣಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದಿರುವ ಸಿದ್ಧತೆಯನ್ನು ಕೆಪಿಸಿಸಿ ಸದಸ್ಯ ಎಚ್‌.ವಿ. ರಾಜೀವ್ ಹಾಗೂ ಆಯೋಜಕರು ಪರಿಶೀಲಿಸಿದರು   

ಮೈಸೂರು: ‘ಇಲ್ಲಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ಫೆ. 14ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಬೃಹತ್ ‘ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ’ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಕೆಪಿಸಿಸಿ ಸದಸ್ಯ ಎಚ್‌.ವಿ. ರಾಜೀವ್ ತಿಳಿಸಿದರು.

ಮೈದಾನದಲ್ಲಿ ನಡೆದಿರುವ ಸಿದ್ಧತೆಯನ್ನು ಗುರುವಾರ ಪರಿಶೀಲಿಸಿದ ನಂತರ ಪತ್ರರ್ತರೊಂದಿಗೆ ಅವರು ಮಾತನಾಡಿದರು.

‘ಕಾರ್ಯಕ್ರಮಕ್ಕೆ ಬರುವ ಭಕ್ತರ ಸಂಖ್ಯೆ ದೃಷ್ಟಿಯಲ್ಲಿಟ್ಟುಕೊಂಡು ಯಾವುದೇ ಲೋಪ ಆಗದಂತೆ ನೋಡಿಕೊಳ್ಳಲು ಗಮನಹರಿಸಲಾಗಿದೆ. ಸುರಕ್ಷತೆ ಮತ್ತು ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಮೈದಾನದ ಪೂರ್ತಿ ಭಾಗಕ್ಕೆ ಶಾಮಿಯಾನ (ಪೆಂಡಾಲ್), 45ಸಾವಿರ ಕುರ್ಚಿಗಳನ್ನು ಹಾಕಲಾಗುವುದು. ಭಕ್ತರಿಗೆ ಮಾರ್ಗದರ್ಶನ ನೀಡಲು ಮತ್ತು ವ್ಯವಸ್ಥೆ ನಿರ್ವಹಿಸಲು 800 ಮಂದಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕುಡಿಯುವ ನೀರು ಒದಗಿಸಲಾಗುವುದು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಮೊಬೈಲ್‌ ಶೌಚಾಲಯ ಇರಲಿದೆ’ ಎಂದು ತಿಳಿಸಿದರು.

‘ವಾಹನ ನಿಲುಗಡೆಗೆ ಅರಸು ಬೋರ್ಡಿಂಗ್ ಶಾಲೆ ಹಾಗೂ ಯುವರಾಜ ಕಾಲೇಜು ಆವರಣದಲ್ಲಿ ಅವಕಾಶವಿದೆ. ಅನ್ನ ಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದರು.

ಉದ್ಯಮಿ ರಾಮೇಗೌಡ, ಆಶ್ರಮದ ಟ್ರಸ್ಟಿಗಳಾದ ಎಚ್.ವಿ. ಪ್ರಮೋದ್, ರಮೇಶ್, ವಿನಯ ಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.