
ಎಚ್.ಡಿ.ಕೋಟೆ: ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದ ನಿವಾಸಿಗಳು, ಸೂಕ್ತ ಜಮೀನು ಹಂಚಿಕೆಗಾಗಿ ಕಳೆದ ಏಳು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನ ಸ್ಥಳಕ್ಕೆ ಸಂಸದ ಸುನಿಲ್ ಬೋಸ್ ಮತ್ತು ಶಾಸಕ ಅನಿಲ್ ಚಿಕ್ಕಮಾದು ಭಾನುವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಸಂಸದ ಸುನಿಲ್ ಬೋಸ್ ಮಾತನಾಡಿ, ಕೆಂಚನಹಳ್ಳಿ ಗ್ರಾಮದ ನಿರಾಶ್ರಿತರ ಸಮಸ್ಯೆ ನ್ಯಾಯಯುತವಾಗಿದೆ. ನಿರಾಶ್ರಿತರ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಮತ್ತು ಅರಣ್ಯ ಅಧಿಕಾರಿಗಳೊಂದಿಗೆ ತಕ್ಷಣವೇ ಮಾಹಿತಿ ಪಡೆದು ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು ಎಂದರು.
ಕಬಿನಿ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಕೆಂಚನಹಳ್ಳಿ ಗ್ರಾಮದ ನಿರಾಶ್ರಿತರ ಪುನರ್ವಸತಿಗಾಗಿ ಸರ್ವೆ ನಂ.1ರಲ್ಲಿ ಒಟ್ಟು 840 ಎಕರೆ ಜಮೀನನ್ನು ಬಿಡುಗಡೆಗೊಳಿಸಲಾಗಿತ್ತು. ಈ ಪೈಕಿ, ಈಗಾಗಲೇ 495 ಎಕರೆ ಜಮೀನನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಉಳಿದ ಸುಮಾರು 345 ಎಕರೆ ಜಮೀನು ಕಂದಾಯ ಇಲಾಖೆಗೆ ಸೇರಿರುವ ಕಾರಣದಿಂದಾಗಿ ಉಳಿದ ಸಂತ್ರಸ್ತರಿಗೆ ಹಂಚಿಕೆ ಪ್ರಕ್ರಿಯೆ ವಿಳಂಬವಾಗಿದೆ ಎಂದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಶೀಘ್ರದಲ್ಲೇ ಕಂದಾಯ ಮತ್ತು ಅರಣ್ಯ ಇಲಾಖೆಗಳ ಸಮನ್ವಯದೊಂದಿಗೆ ಉಳಿದ ಫಲಾನುಭವಿಗಳಿಗೆ ಜಮೀನು ಹಂಚಿಕೆ ಪ್ರಕ್ರಿಯೆಯನ್ನು ಸರ್ಕಾರ ಪೂರ್ಣಗೊಳಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದರು.
ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಮುಖಂಡರಾದ ಪುಟ್ಟಸ್ವಾಮಿ, ಸಿದ್ದಯ್ಯ ನಾಗರಾಜ್, ಮಾಜಿ ಸದಸ್ಯ ನಾಗರಾಜ್, ಸೂರಿ, ಸಣ್ಣಪ್ಪ, ಶಿವಣ್ಣ, ಗುರುಸ್ವಾಮಿ, ಮಹದೇವಸ್ವಾಮಿ, ಆದಿ ಕರ್ನಾಟಕ ಮಹಾಸಭಾ ತಾಲ್ಲೂಕು ಅಧ್ಯಕ್ಷ ಹೈರಿಗೆ ಶಿವರಾಜ್, ಭೀಮನಹಳ್ಳಿ ಸೋಮೇಶ್, ದಸಂಸ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯ ಕೋಟೆ, ಎಗನೂರು ನಿಂಗ ರಾಜು, ಮಲಾರಾ ಮಹದೇವು, ಅಂಕಯ್ಯ, ಮಲ್ಲಿಕಾರ್ಜುನ್, ಬಸವರಾಜ, ಶಾಂತರಾಜು, ನರಸಿಂಹಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.