
ಎಚ್.ಡಿ.ಕೋಟೆ: ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಹೊಸ ಹೊಸ ಪ್ರಯೋಗಳನ್ನು ಮಾಡಲಾಗುತ್ತಿದ್ದು, ನಾಗರಹೊಳೆಯ ಅಂತರಸಂತೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಚೈನ್ ಲಿಂಕ್ ಮೆಶ್ ಅಳವಡಿಸಲಾಗುತ್ತಿದೆ. ಇದು ಯಶಸ್ವಿಯಾದರೆ ನಮ್ಮ ಭಾಗದ ಸುಮಾರು 120 ಕಿ.ಮೀ. ರೈಲ್ವೆ ಕಂಬಿ ಬ್ಯಾರೀಕೇಡ್‌ಗೆ ಚೈನ್ ಲಿಂಕ್ ಮೆಶ್ ಅಳವಡಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲ್ಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರಸಂತೆ ವಲಯದ ದಮ್ಮನಕಟ್ಟೆ ಗೇಟ್ ಬಳಿ ಚೈನ್ ಲಿಂಕ್ ಮೆಶ್ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಭಾಗದ ನಾಗರಹೊಳೆ ಅರಣ್ಯ ಇಲಾಖೆಯ ಎಸಿಎಫ್ ಮಧು ಹಾಗೂ ಆರ್‌ಎಫ್‌ಒ ಸಿದ್ದರಾಜು ಅವರ ತಂಡ ಉತ್ತಮವಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ನಾಗರಹೊಳೆಯಲ್ಲಿ ಸರ್ಕಾರದ ಅನುದಾನವಲ್ಲದೇ ಖಾಸಗಿ ಸಂಸ್ಥೆಯೊಂದರ ಸಹಕಾರದೊಂದಿಗೆ ಅರಣ್ಯ ಗಡಿಭಾಗಕ್ಕೆ ಚೈನ್ ಲಿಂಕ್ ಮೆಶ್ ಅಳವಡಿಸುವ ಮೂಲಕ ಹುಲಿ, ಜಿಂಕೆ, ಕಾಡುಹಂದಿಗಳ ಹಾವಳಿಯನ್ನು ತಗ್ಗಿಸಲು ಮುಂದಾಗಿರುವುದು ನಿಜಕ್ಕೂ ಉತ್ತಮ ಕೆಲಸ ಎಂದರು.
ಸದ್ಯ ನಾಗರಹೊಳೆಯಲ್ಲಿ 13 ಕಿ.ಮೀ. ವ್ಯಾಪ್ತಿಗೆ ಪ್ರಾಯೋಗಿಕವಾಗಿ ಅಳವಡಿಸಲಾಗುತ್ತಿದ್ದು, ಇದು ಯಶಸ್ವಿಯಾದರೆ ಮತ್ತಷ್ಟು ವಿಸ್ತರಿಸಿ 10 ಅಡಿ ಎತ್ತರಕ್ಕೆ ಏರಿಸಿ ಅಳವಡಿಸಲಾಗುವುದು. ಸದ್ಯ ಒಂದು ಕಿ.ಮೀ. ವ್ಯಾಪ್ತಿಗೆ ₹5 ಲಕ್ಷ ವೆಚ್ಚ ತಗುಲಿದ್ದು, ಸುಮಾರು ₹25 ಕೋಟಿ ವೆಚ್ಚದಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಕಾಡಂಚಿನ ಭಾಗಗಳಲ್ಲಿ ಸುಮಾರು 120 ಕಿ.ಮೀ. ಬಿಗಿಯಾದ ಮೆಶ್ ಅಳವಡಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಮೆಶ್ ಅಳವಡಿಸಿದರೆ ಅರಣ್ಯ ಸುರಕ್ಷಿತವಾಗಿರುವ ಜತೆಗೆ ನಮ್ಮ ಭಾಗದ ಜನರೂ ಸುರಕ್ಷಿತವಾಗಿರುತ್ತಾರೆ. ಎರಡನ್ನೂ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಅರಣ್ಯ ಇಲಾಖೆಯೂ ಕಳೆದ ಎರಡು ತಿಂಗಳಿನಿಂದ ಹುಲಿ ದಾಳಿ ತಪ್ಪಿಸಲು ನಿರಂತರ ಶ್ರಮಿಸುತ್ತಿದೆ. ಪುನಃ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಲು ನಾನೂ ಸೂಚಿಸಿದ್ದೇನೆ. ಈಗಾಗಲೇ 10 ಹುಲಿಗಳನ್ನು ಸೆರೆ ಹಿಡಿದಿದ್ದಾರೆ. ಇನ್ನು ಕೆಲ ಹುಲಿಗಳು ಆಚೆ ಇರುವ ಬಗ್ಗೆ ಮಾಹಿತಿ ಇದೆ. ಅವುಗಳನ್ನೂ ಹೊರಬರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದೇನೆ. ಈ ಬಗ್ಗೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚಿಸಿ ಮಾನವ ವನ್ಯಜೀವಿ ಸಂಘರ್ಷ ತಪ್ಪಿಸಲು ಶಾಶ್ವತ ಪರಿಹಾರ ನೀಡುವಂತೆ ಮನವಿ ಮಾಡಲಿದ್ದೇನೆ. ಮೆಶ್ ಹಾಗೂ ಪರಿಹಾರ ಹೆಚ್ಚಿಸುವ ಬಗ್ಗೆಯೂ ಚರ್ಚಿಸಲಾಗುವುದು. ಕೇಂದ್ರ ಸರ್ಕಾರವೂ ನಮ್ಮ ನೆರವಿಗೆ ಬರಬೇಕು ಎಂದರು.
ಕಾಡಿನ ಹೊರಭಾಗದಲ್ಲಿಯೂ ಖಾಲಿ ಸ್ಥಳಗಳು, ಕೆರೆಕಟ್ಟೆಗಳು, ಸರ್ಕಾರಿ ಭೂಮಿಗಳಲ್ಲಿ ಲಂಟನಾಗಳು ಬೆಳೆದುಕೊಂಡು ಕುರುಚಲು ಕಾಡು ನಿರ್ಮಾಣವಾಗಿದೆ. ಇಂತಹ ಸ್ಥಳಗಳಲ್ಲಿ ನೀರಾವರಿ ಇಲಾಖೆ ಹಾಗೂ ಗ್ರಾಪಂಗಳು ಜಂಗಲ್ ಕಟಿಂಗ್ ಮಾಡಿಸಬೇಕು ಎಂದು ಉಸ್ತುವರಿ ಸಚಿವರು, ಜಿಲ್ಲಾಧಿಕಾರಿಗಳು ನೇತೃತ್ವದಲ್ಲಿ ಸಭೆ ನಡೆಸಿ ಅವರಿಗೆ ಸೂಚನೆ ನೀಡಲಾಗಿದೆ. ಮತ್ತೊಮ್ಮೆ ಅಧಿಕಾರಿಗಳಿಗೆ ಸೂಚಿಸಿ ಜಂಗಲ್ ಕಟಿಂಗ್ ಮಾಡಲು ಸೂಚನೆ ನೀಡಲಾಗುವುದು ಎಂದರು.
ಎಸಿಎಫ್ ಮಧು ಕುಮಾರ್, ಆರ್‌ಎಫ್‌ಒ ಎಸ್.ಎಸ್.ಸಿದ್ದರಾಜು, ಮೆಶ್ ದಾನಿಗಳಾದ ಡಾ.ಶ್ರೀಧರ್, ಮುಖಂಡರಾದ ನರಸೀಪುರ ರವಿ, ಉಮೇಶ್, ಲೋಕೇಶ್, ಪುಟ್ಟರಾಜು, ಶಿವಣ್ಣಗೌಡ, ಹೊಸ ಮಾಳ ಸಿದ್ದಪ್ಪಾಜಿ, ಮಾದೇಗೌಡ, ಮಗ್ಗೆ ಸುಂದರ್ , ಕರೀಗೌಡ, ಸುಬ್ರಹ್ಮಣ್ಯ ಇದ್ದರು.
Cut-off box - ಸ್ಥಳೀಯವಾಗಿ ಕೆಲಸ: ಸಚಿವರೊಂದಿಗೆ ಚರ್ಚೆ ಟಿಸಿಎಂಎಸ್ ಸೂಚನೆಯಲ್ಲಿ ಆಯಾ ತಾಲ್ಲೂಕಿನ ಡಿಆರ್‌ಎಫ್‌ಒಗಳು ಅರಣ್ಯ ರಕ್ಷಕರು ಹಾಗೂ ವಾಚಕರು ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಕೆಲಸ ಮಾಡಬಾರದು ಎಂಬ ಸೂಚನೆ ನೀಡಿ ಅವರನ್ನು ಬೇರೆ ಬೇರೆ ತಾಲ್ಲೂಕುಗಳಿಗೆ ನಿಯೋಜಿಸಲಾಗುತ್ತಿದೆ. ಇದರಿಂದ ಜನರೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡಲು ತೊಂದರೆಯಾಗಬಹುದು. ಈ ಬಗ್ಗೆ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಸ್ಥಳೀಯರು ಸ್ಥಳೀಯವಾಗಿಯೇ ಕೆಲಸ ಮಾಡಿದರೆ ಜನರೊಂದಿಗೆ ವಿಶ್ವಾಸದಿಂದರಲು ಸಾಧ್ಯ ಎಂಬುದರ ಬಗ್ಗೆ ಮನವರಿಕೆ ಮಾಡಲಾಗುವುದು. ಅನಿಲ್ ಚಿಕ್ಕಮಾದು ಶಾಸಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.