
ಮೈಸೂರು: ತಂಬಾಕು ಮಂಡಳಿಯು ಸೋಮವಾರ ಭಾರತೀಯ ಭಾಷಾ ಸಂಸ್ಥಾನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಬಂದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಲಿಫ್ಟ್ ಕೆಟ್ಟು ನಿಂತ ಕಾರಣಕ್ಕೆ ಮೆಟ್ಟಿಲು ಏರುತ್ತಲೇ ಎರಡನೇ ಮಹಡಿಯಲ್ಲಿದ್ದ ಸಭಾಂಗಣ ತಲುಪಿದರು.
ಅತ್ಯಂತ ಕಿರಿದಾದ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು. ಹೀಗಾಗಿ ಸಚಿವರು–ಶಾಸಕರು, ಅವರೊಂದಿಗಿನ ಹಿಂಬಾಲಕರು ಬರುತ್ತಲೇ ಕೊಠಡಿ ಭರ್ತಿಯಾಯಿತು. ಭದ್ರತಾ ಸಿಬ್ಬಂದಿಗೂ ಜಾಗ ಇಲ್ಲದಾಯಿತು.
ಯದುವೀರ್ ಸಿಟ್ಟು: ‘ರೈತರಿಗೆ ಅನ್ಯಾಯವಾಗಲು ಕೇಂದ್ರ ಸರ್ಕಾರವೂ ಕಾರಣ. ಅವರು ರೈತಪರವಾಗಿ ನಿಲ್ಲುತ್ತಿಲ್ಲ. ತೆರಿಗೆ ಹೊರೆ ಹೆಚ್ಚಿದ್ದು, ಅದನ್ನು ಕಾರ್ಖಾನೆಗಳು ಬೆಳೆಗಾರರ ಮೇಲೆ ಹೇರಹೊರಟಿವೆ’ ಎಂದು ಸಚಿವ ಕೆ. ವೆಂಕಟೇಶ್ ದೂರಿದರು.
ಇದಕ್ಕೆ ಸಿಟ್ಟಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ‘ಇಲ್ಲಿ ರಾಜ್ಯ– ಕೇಂದ್ರ ಎಂದು ದೂರುವುದು ಸರಿಯಲ್ಲ. ಪ್ರತಿ ವರ್ಷ ಕೇಂದ್ರವು ನಡೆಸುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯದ ಪ್ರತಿನಿಧಿಗಳು ಪಾಲ್ಗೊಳ್ಳಬೇಕು. ಅಲ್ಲಿ ತಮ್ಮ ವಾದ ಮಂಡಿಸಬೇಕು’ಎಂದರು.
‘ತಂಬಾಕಿಗೆ ಶೇ 72ರವರೆಗೆ ತೆರಿಗೆ ವಿಧಿಸಲಾಗುತ್ತಿದ್ದು, ಈ ಬಗ್ಗೆ ಕೇಂದ್ರದ ಗಮನ ಸೆಳೆಯಲಾಗುವುದು’ ಎಂದು ಯದುವೀರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.