ADVERTISEMENT

ಮೈಸೂರು: ಮತಬೇಟೆಗೆ ಬಿರು ಬಿಸಿಲೇ ಸವಾಲು!

ಕೊಡೆ ಹಿಡಿದು ನಿಂತ ಕಾರ್ಯಕರ್ತರು; ನೀರು–ಮಜ್ಜಿಗೆಯೇ ಆಹಾರ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 0:19 IST
Last Updated 7 ಏಪ್ರಿಲ್ 2024, 0:19 IST
ಬಿಜೆಪಿ ಅಭ್ಯರ್ಥಿ ಯದುವೀರ್ ನಾಮಪತ್ರ ಸಲ್ಲಿಕೆ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಕೊಡೆ ಹಿಡಿದು ಪಾಲ್ಗೊಂಡ ಮಹಿಳೆಯರು
–ಪ್ರಜಾವಾಣಿ ಚಿತ್ರ
ಬಿಜೆಪಿ ಅಭ್ಯರ್ಥಿ ಯದುವೀರ್ ನಾಮಪತ್ರ ಸಲ್ಲಿಕೆ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಕೊಡೆ ಹಿಡಿದು ಪಾಲ್ಗೊಂಡ ಮಹಿಳೆಯರು –ಪ್ರಜಾವಾಣಿ ಚಿತ್ರ   

ಮೈಸೂರು: ಲೋಕಸಭೆ ಚುನಾವಣೆಯ ಕಾವಿನ ಜೊತೆಗೆ ಜಿಲ್ಲೆಯ ತಾಪಮಾನವೂ ದಾಖಲೆಯ ಏರಿಕೆ ಕಂಡಿದ್ದು, ಬಿರು ಬಿಸಿಲಿನಲ್ಲಿ ಮತಯಾಚನೆ ಮಾಡುವುದು ಅಭ್ಯರ್ಥಿಗಳಿಗೆ ಸವಾಲಿನ ಕೆಲಸವಾಗಿದೆ.

ಸದ್ಯ ಮೈಸೂರಿನ ಉಷ್ಣಾಂಶ ಸರಾಸರಿ 40 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಮಧ್ಯಾಹ್ನದ ಹೊತ್ತು ಹೊರಗೆ ಕಾಲಿಡಲು ಹೆದರುವಂತಹ ಪರಿಸ್ಥಿತಿ ಇದೆ. ನೆತ್ತಿ ಸುಡುವ ಬಿಸಿಲಲ್ಲೇ ಅಭ್ಯರ್ಥಿಗಳು ಪಾದಯಾತ್ರೆ ಮಾಡುತ್ತ ಮತಯಾಚನೆ ಮಾಡತೊಡಗಿದ್ದಾರೆ.

ಈಚೆಗೆ ನಡೆದ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸಂದರ್ಭ ಬಿಸಿಲಿನ ಕಾರಣಕ್ಕೆ ಜನ ಬಸವಳಿದಿದ್ದು, ನಾಯಕರು ಅರ್ಧಕ್ಕೆ ಭಾಷಣ ಮೊಟಕುಗೊಳಿಸುವಂಥ ಸ್ಥಿತಿ ಇತ್ತು. ಬಿಜೆಪಿ ಮೆರವಣಿಗೆಯಲ್ಲಿ ಜನ ಕೊಡೆ ಹಿಡಿದು ನಿಂತಿದ್ದು, ನೂರಿನ್ನೂರು ಮೀಟರ್ ಸಾಗುವಷ್ಟರಲ್ಲೇ ನಾಯಕರೊಟ್ಟಿಗೆ ಅರ್ಧಕ್ಕರ್ಧ ಕಾರ್ಯಕರ್ತರೂ ಖಾಲಿಯಾಗಿದ್ದರು. ಮಂಚೇಗೌಡನ ಕೊಪ್ಪಲಿನ ಅಭಿಷೇಕ್‌ ವೃತ್ತದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಬಿಸಿಲ ಝಳ ತಾಳಲಾರದೇ ಜನ ಸಿದ್ದರಾಮಯ್ಯ ಭಾಷಣಕ್ಕೆ ಮುನ್ನವೇ ಹೊರಟು ನಿಂತಿದ್ದು, ಶಾಸಕರು ಮನವಿ ಮಾಡಿ ಜನರನ್ನು ಕೂರಿಸಬೇಕಾಯಿತು.

ADVERTISEMENT

‘ಮಧ್ಯಾಹ್ನದ ಹೊತ್ತು ಪ್ರಚಾರ ಸಭೆ ನಡೆಸುವುದು ಸವಾಲಿನ ಕೆಲಸ. ಸಾರ್ವಜನಿಕರು ಇರಲಿ, ನಮ್ಮ ಪಕ್ಷದ ಕಾರ್ಯಕರ್ತರೇ ಬಂದು ನಿಲ್ಲಲು ಹಿಂದೇಟು ಹಾಕುತ್ತಾರೆ. ಅದರಲ್ಲೂ ಮಹಿಳೆಯರು, ಹಿರಿಯ ನಾಗರಿಕರನ್ನು ಕರೆತರುವುದು ಕಷ್ಟದ ಕೆಲಸವಾಗಿದೆ. ಬಂದವರಿಗೆ ಕನಿಷ್ಠ ನೀರು, ಮಜ್ಜಿಗೆಯಾದರೂ ಕೊಡಬೇಕು. ಇದೆಲ್ಲವೂ ಚುನಾವಣಾ ವೆಚ್ಚಕ್ಕೆ ಹೋಗುತ್ತದೆ. ಈ ಕಾರಣಕ್ಕೆ ಹೆಚ್ಚು ಜನ ಸೇರಿಸಿ ಶಕ್ತಿ ಪ್ರದರ್ಶನ ಮಾಡುವ ಕಾರ್ಯಕ್ರಮಗಳು ಕಡಿಮೆ ಆಗಿವೆ’ ಎನ್ನುತ್ತಾರೆ ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಹಾಗೂ ಕಾಂಗ್ರೆಸ್ ಮುಖಂಡರು.

ಬಿಸಿಲಿಗೆ ತಕ್ಕಂತೆಯೇ ಅಭ್ಯರ್ಥಿಗಳು ತಮ್ಮ ಪ್ರಚಾರ ವೈಖರಿಯನ್ನು ಬದಲಿಸಿಕೊಂಡಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತೊಡಗಿದ್ದಾರೆ. ಮಧ್ಯಾಹ್ನ ಸಂಘ–ಸಂಸ್ಥೆಗಳಿಗೆ ಭೇಟಿಯಂತಹ ಪ್ರಚಾರ ಸಭೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಬಹಿರಂಗ ಪ್ರಚಾರಕ್ಕೆ ಇನ್ನು ಎರಡು ವಾರವಷ್ಟೇ ಉಳಿದಿದ್ದು, ಈ ಅಲ್ಪ ಅವಧಿಯಲ್ಲಿ ಊರೂರು ಸುತ್ತಲು ಬಿಸಿಲು ನಿಜಕ್ಕೂ ಸವಾಲಾಗಿದೆ.

40 ಡಿಗ್ರಿ ಸೆ. ತಲುಪಿದ ಉಷ್ಣಾಂಶ!

ನಿವೃತ್ತರ ಸ್ವರ್ಗ ಎಂದೇ ಹೆಸರಾದ ಮೈಸೂರಿನಲ್ಲಿ ಏಪ್ರಿಲ್‌ ಮೊದಲ ವಾರದಲ್ಲಿ ಗರಿಷ್ಠ ಉಷ್ಣಾಂಶವು 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದು ಬಿಸಿಗಾಳಿಗೆ ಜನರು ತತ್ತರಿಸಿದ್ದಾರೆ. ಗುರುವಾರ ಇಲ್ಲಿನ ಉಷ್ಣಾಂಶವು ಗರಿಷ್ಠ 39.2 ಸೆ. ನಷ್ಟು ದಾಖಲಾಗಿದ್ದು ಶುಕ್ರವಾರವೂ ಇದೇ ಪ್ರಮಾಣದ ಉಷ್ಣಾಂಶವಿತ್ತು. ‘ ಏಪ್ರಿಲ್‌ನಲ್ಲಿ ಮೈಸೂರಿನಲ್ಲಿ 38.5 ಡಿಗ್ರಿ ಸೆ. ಉಷ್ಣಾಂಶವೇ ಈವರೆಗಿನ ದಾಖಲೆಯಾಗಿತ್ತು. ಈ ವರ್ಷ ಅದನ್ನು ಮೀರಿಸಿದ ಪ್ರಮಾಣದಲ್ಲಿ ಉಷ್ಣಾಂಶವಿದೆ. ಮುಂದಿನ ಕೆಲವು ದಿನಗಳಲ್ಲಿ ಇನ್ನೂ 3–4 ಸೆಲ್ಸಿಯಸ್‌ ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಕೃಷಿ ವಿ.ವಿ.ಯ ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಸಹ ಸಂಶೋಧಕ ಜಿ.ವಿ. ಹೇಮಂತಕುಮಾರ್ ಮಾಹಿತಿ ನೀಡಿದರು. 2015–16ರಲ್ಲಿ ಬರ ಪರಿಸ್ಥಿತಿಯ ಸಂದರ್ಭ ಮೈಸೂರಿನಲ್ಲಿ ಈ ಪ್ರಮಾಣದ ಬಿಸಿಲು ಇತ್ತು. ಅದನ್ನು ಬಿಟ್ಟರೆ ಈ ವರ್ಷವೇ ಇಷ್ಟು ತಾಪ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.