ADVERTISEMENT

ಜಿಲ್ಲೆಯಲ್ಲಿ ಹಲವೆಡೆ ಬಿರುಸಿನ ಮಳೆ

ತಿ.ನರಸೀಪುರದಲ್ಲಿ ವರುಣನ ಅಬ್ಬರ; 7 ಸೆಂ.ಮೀ.ನಷ್ಟು ಮಳೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 4:17 IST
Last Updated 5 ಜುಲೈ 2021, 4:17 IST
ಮೈಸೂರಿನಲ್ಲಿ ಭಾನುವಾರ ಸಂಜೆ ಸುರಿದ ಮಳೆಯಲ್ಲಿಯೇ ಜೆಎಲ್‌ಬಿ ರಸ್ತೆಯಲ್ಲಿ ಬೈಕ್ ಸವಾರರು ಸಾಗಿದರು
ಮೈಸೂರಿನಲ್ಲಿ ಭಾನುವಾರ ಸಂಜೆ ಸುರಿದ ಮಳೆಯಲ್ಲಿಯೇ ಜೆಎಲ್‌ಬಿ ರಸ್ತೆಯಲ್ಲಿ ಬೈಕ್ ಸವಾರರು ಸಾಗಿದರು   

ಮೈಸೂರು: ಜಿಲ್ಲೆಯ ಹಲವೆಡೆ ಭಾನುವಾರ ಬಿರುಸಿನಿಂದ ಮಳೆ ಸುರಿದಿದೆ. ಕಳೆದ 15 ದಿನಗಳಿಗಿಂತಲೂ ಹೆಚ್ಚು ಕಾಲ ಮಳೆ ಕಾಣದೆ ಇದ್ದ ಭೂಮಿ ಧಾರಾಕಾರ ಮಳೆಯಿಂದ ತಣಿಯಿತು. ಬಾಡುತ್ತಿದ್ದ ಬೆಳೆಗಳಿಗೆ ಮಳೆ ಜೀವಕಳೆ ನೀಡಿದೆ.

ಮುಂಗಾರಿನಲ್ಲೂ ಮಳೆ ಕೊರತೆ ಅನುಭವಿಸಿ ಕಂಗಾಲಾಗಿದ್ದ ರೈತ ಸಮುದಾಯ ಈಗ ಸುರಿದಿರುವ ಮಳೆಯಿಂದ ಸಂತಸಗೊಂಡಿದೆ.‌

ಮಧ್ಯಾಹ್ನದ ನಂತರ ಮುಸುಕಿದ ಮೋಡಗಳು ರಾತ್ರಿಯವರೆಗೆ ಬಿಟ್ಟು ಬಿಟ್ಟು ಮಳೆ ಸುರಿಸಿದವು. ಕೆಲವೆಡೆ ಜಿಟಿಜಿಟಿ ಮಳೆಯಾಗಿದ್ದರೆ, ಮತ್ತೆ ಹಲವೆಡೆ ಜೋರಾಗಿಯೇ ಬಂದಿದೆ. ಕೆಲವು ಭಾಗಗಳಲ್ಲಿ ಗುಡುಗು ಮಿಶ್ರಿತ ಮಳೆಯಾಗಿದೆ.‌

ADVERTISEMENT

ಅತ್ಯಂತ ಹೆಚ್ಚು ಮಳೆ ತಿ.ನರಸೀಪುರ ತಾಲ್ಲೂಕಿನ ತುಂಬುಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದಿದೆ. ಇಲ್ಲಿ 7 ಸೆಂ.ಮೀ.ಗಿಂತಲೂ ಅಧಿಕ ಮಳೆಯಾಗಿದ್ದರೆ, ಮೈಸೂರು ತಾಲ್ಲೂಕಿನಲ್ಲಿ 4.5 ಸೆಂ.ಮೀ.ನಷ್ಟು ಮಳೆ ಬಂದಿದೆ.

ಉಳಿದಂತೆ, ನಂಜನಗೂಡಿನಲ್ಲಿ 4, ಕೆ.ಆರ್.ನಗರದಲ್ಲಿ 3.5, ಎಚ್.ಡಿ.ಕೋಟೆಯಲ್ಲಿ 2.5 ಹಾಗೂ ಪಿರಿಯಾಪಟ್ಟಣದಲ್ಲಿ 1.5 ಸೆಂ.ಮೀ.ನಷ್ಟು ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ಕೃಷಿಗೆ ಪೂರಕ: ಈಗ ಸುರಿದಿರುವ ಮಳೆಯು ಹೆಸರು, ಅಲಸಂದೆ, ತಂಬಾಕು, ಹತ್ತಿ, ಮುಸುಕಿನ ಜೋಳ,ಉದ್ದು ಮೊದಲಾದ ಬೆಳೆಗಳಿಗೆ ಪೂರಕವಾಗಿದೆ. ತೋಟಗಾರಿಕಾ ಬೆಳೆಗಳಿಗೂ ಇದು ಜೀವಸೆಳೆಯನ್ನು ಒದಗಿಸಿದೆ. ಕೊಳವೆ ಬಾವಿಗಳಲ್ಲಿ ನೀರು ಹೆಚ್ಚುವುದಕ್ಕೂ ಸಹಕಾರಿಯಾಗಿದೆ.

ಇದೇ ಸ್ವರೂಪದಲ್ಲಿ ಮುಂದಿನ 3 ದಿನಗಳ ಕಾಲ ಜಿಲ್ಲೆಯಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಭತ್ತದಕೊಯ್ಲು ಮಾಡಲಾಗಿದ್ದು, ಇಲ್ಲಿ ಮಳೆಯಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.

ನಗರದಲ್ಲಿ ಕೆಲವೆಡೆ ಧರೆಗುರುಳಿದ ಮರಗಳು

ನಗರದ ಕೆಲವೆಡೆ ಮರಗಳು ಹಾಗೂ ಮರದ ಕೊಂಬೆಗಳು ಉರುಳಿ ಬಿದ್ದಿವೆ. ಇದರಿಂದ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು.

ಸಿದ್ಧಾರ್ಥನಗರದ ದಯಾಮಾರ್ಗದಲ್ಲಿ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದಿತು. ಇಲ್ಲಿಗೆ ತೆರಳಿದ ಎನ್.ಆರ್.ವಿಭಾಗದ ಅಭಯ್ 3 ರಕ್ಷಣಾ ತಂಡವು ಕಾರಿಗೆ ಹಾನಿಯಾಗದ ರೀತಿಯಲ್ಲಿ ಮರವನ್ನು ತೆರವುಗೊಳಿಸಿತು. ಉಳಿದಂತೆ, ಪೊಲೀಸ್ ಕಮಿಷನರ್ ಕಚೇರಿ, ಟಿ.ಕೆ.ಬಡಾವಣೆಗಳ ಕೆಲವೆಡೆ ಮರಗಳ ಕೊಂಬೆಗಳು ಉರುಳಿ ಬಿದ್ದಿವೆ. ಇಲ್ಲಿ ಅಭಯ್‌ 1ರ ತಂಡವು ತೆರಳಿ ಕೊಂಬೆಗಳನ್ನು ತೆರವುಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.